ಹುಬ್ಬಳ್ಳಿ: ಯಾವುದೇ ಚುನಾವಣೆ ಇರಲಿ, ಪಕ್ಷ-ವ್ಯಕ್ತಿಗಿಂತ ವಿಚಾರ ಗೆಲ್ಲಬೇಕು. ಅದೇ ಆಶಯ ಹಾಗೂ ಬದಲಾವಣೆ ಚಿಂತನೆಯೊಂದಿಗೆ ಉತ್ತಮ ಪ್ರಜಾಕೀಯ ಪಕ್ಷ ಹೊಸತನದ ಹೆಜ್ಜೆ ಇರಿಸಿದೆ ಎಂದು ಪಕ್ಷದ ಸಂಸ್ಥಾಪಕ, ನಾಯಕ ನಟ ಉಪೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕಾಗಿದೆ. ಹಣ ನೀಡಿ ಮತ ಖರೀದಿ ವ್ಯವಸ್ಥೆ ಬದಲಾಗಿ, ವೇತನ ಪಡೆದು ಕೆಲಸ ಮಾಡುವ ಜನಪ್ರತಿನಿಧಿ ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಈ ಬಾರಿಯ ಲೋಕಸಭಾ ಚುನಾವಣೆಗೆ ಬಳ್ಳಾರಿಯೊಂದನ್ನು ಹೊರತು ಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದರು.
ಚುನಾವಣೆಯಲ್ಲಿ ಹಣ ಸುರಿದು ಅಬ್ಬರದ ಪ್ರಚಾರ ಸೃಷ್ಟಿಸುವ, ಗೆದ್ದ ಮೇಲೆ ಚುನಾವಣೆಗೆ ಹೂಡಿದ ಬಂಡವಾಳಕ್ಕೆ ದುಪ್ಪಟ್ಟು ರೀತಿಯಲ್ಲಿ ಹಣ ಮಾಡಿಕೊಳ್ಳುವ ವ್ಯವಸ್ಥೆ ನಿಲ್ಲಲು ನಾವು ಕೈಗೊಂಡ ಯತ್ನಕ್ಕೆ ಜನ ಬೆಂಬಲಿಸಬೇಕು. ಜನ ಬದಲಾದಲ್ಲಿ
ಅದು ಜನರ ಗೆಲುವಾಗಲಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ, ತಂತ್ರಜ್ಞಾನ ಬಳಸಿಕೊಂಡು ಜನರನ್ನು ತಲುಪುತ್ತೇವೆ. ಅವರ ಬೇಕು-ಬೇಡಿಕೆ ಹಾಗೂ ಸಮಸ್ಯೆಗಳ ಕುರಿತಾಗಿ ಅವರಿಂದಲೇ ಮಾಹಿತಿ ಪಡೆದು ಪರಿಹಾರಕ್ಕೆ ಯತ್ನಿಸುತ್ತೇವೆ. ಪಕ್ಷದ ಅಭ್ಯರ್ಥಿ ಆಯ್ಕೆಯಾದರೆ, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸದಿದ್ದರೆ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಅಧಿಕಾರವನ್ನು ಜನರಿಗೆ ನೀಡಲಾಗುತ್ತದೆ ಎಂದರು.
ಮತ ವಿಚಾರದಲ್ಲಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ವ್ಯವಸ್ಥೆ ಸುಧಾರಣೆ ಹಾಗೂ ಬದಲಾವಣೆ ನಿಟ್ಟಿನಲ್ಲಿ ಜನರ ಬಳಿಗೆ ಹೋಗುತ್ತೇವೆ. ಬದಲಾವಣೆ ಬಯಸಿದರೆ ಮುಂದುವರಿಯುತ್ತೇವೆ. ಇದ್ದ ವ್ಯವಸ್ಥೆಯೇ ಇರಲಿ ಎಂದಾದರೆ ನಾವೇನು ಮಾಡಲಾಗುತ್ತದೆ ಎಂದರು.
ಸಂಸದರು ರಾಜೀನಾಮೆ ನೀಡಬೇಕಿತ್ತು: ಮಹದಾಯಿ ವಿಚಾರವಾಗಿ ಇಲ್ಲಿಂದ ಆಯ್ಕೆಯಾಗಿ ಹೋದ ಸಂಸದರು ಮಾತನಾಡಬೇಕಿತ್ತು. ಕೇಂದ್ರದ ಮೇಲೆ ಒತ್ತಡ ತರಬೇಕಿತ್ತು. ಸ್ಪಂದನೆ ಸಿಗದಿದ್ದರೆ ಸಂಸದರು ರಾಜೀನಾಮೆ ನೀಡಬೇಕಿತ್ತು. ಅದನ್ನು ಮಾಡದೆ ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ರಾಜಕೀಯ ಎಂಬುದೇ ಉತ್ತಮ ಸಮಾಜ ಸೇವೆ ಆಗಿದೆ. ಆದರೆ, ಹಣದ ಮೂಲಕ ಅದನ್ನು ರೂಪಿಸುವಂತಹದ್ದಲ್ಲ ಎಂದರು.
ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಯಾವ ಪಕ್ಷಕ್ಕೆ ನಾವು ಬೆಂಬಲ ನೀಡಬೇಕು ಎಂದು ಜನರನ್ನೇ ಕೇಳುತ್ತೇವೆ. ಅವರ ಬೇಡಿಕೆಗಳೊಂದಿಗೆ ತಿಳಿಸಿದ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಬೆಂಬಲ ಹಿಂಪಡೆಯುತ್ತೇವೆ, ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ. ಲೋಕಸಭಾ ಚುನಾವಣೆ ಪ್ರಧಾನಿ ಚುನಾವಣೆಯಲ್ಲ, ಸಂಸದರ ಚುನಾವಣೆ ಆಗಬೇಕಿದೆ ಎಂದರು. ಕ್ಷೇತ್ರದ ಅಭ್ಯರ್ಥಿ ಸಂತೋಷ ಸುದ್ದಿಗೋಷ್ಠಿಯಲ್ಲಿ ಇದ್ದರು.
ರಾಜಕೀಯ ಪಕ್ಷಗಳಿಂದಲೇ ಜಾತಿ ಉಳಿದಿದು: ಉಪೇಂದ್ರ
ಧಾರವಾಡ: ರಾಜಕೀಯ ಪಕ್ಷಗಳಿಂದಲೇ ಜಾತಿಗಳು ಉಳಿಯುವಂತಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಒಳ್ಳೆಯ ವಿಚಾರ ಮುಂದಿಟ್ಟುಕೊಂಡು ನಮ್ಮ ಪಕ್ಷ ಮುನ್ನಡೆದಿದೆ. ಅದರಲ್ಲೂ ನಮ್ಮ ಪಕ್ಷಕ್ಕೆ ಯಾವುದೇ ಪ್ರಣಾಳಿಕೆ ಸಹ ಇಲ್ಲ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ, ನಟ ಉಪೇಂದ್ರ ಹೇಳಿದರು. ನಗರದಲ್ಲಿರುವ ಪಕ್ಷದ ಅಭ್ಯರ್ಥಿ ಸಂತೋಷ ನಂದೂರ ಮನೆಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು. ನಮಗೆ ಜನರೇ ಸ್ಟಾರ್‌ಗಳು. ನಮ್ಮ ಪಕ್ಷದ ಪರ ಯಾವುದೇ ಸ್ಟಾರ್‌ಗಳು ಪ್ರಚಾರ ನಡೆಸಲ್ಲ. ಈಗಿನ ರಾಜಕಾರಣ ಬಿಜಿನೆಸ್‌ಆಗಿದೆ. ಹಣ ಹಾಕಿ, ಹಣ ತೆಗೆಯುವುದಾಗಿದೆ. ಇದು ತೊಲಗಬೇಕು. ಬದಲಿಗೆ ಸ್ವಂತ ಹಣ ತಂದು ಸಮಾಜ ಸೇವೆ ಮಾಡುವ ಶಿಸ್ತುಬದ್ಧ ರಾಜಕೀಯ ವೃತ್ತಿ ಕಟ್ಟಬೇಕಿದೆ ಎಂದರು. ಇಂದಿನ ರಾಜಕೀಯ ವ್ಯವಸ್ಥೆ ದುಡ್ಡಿನ ಮೇಲೆ ನಿಂತಿದೆ. ನಮ್ಮ ಪಕ್ಷ ಯಾವುದೇ ಆಡಂಬರದಿಂದ ಕೂಡಿಲ್ಲ. ಜಾಹೀರಾತುಗಳಿಲ್ಲ, ಮೆರವಣಿಗೆಗಳಿಲ್ಲ. ನಾವು ನೇರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದೇವೆ. ಹೋದ ಕಡೆಗಳಲ್ಲೆಲ್ಲ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.