Advertisement

ದೇಶಕ್ಕೆ ಅಂಕಿಅಂಶಗಳ ಅಭಿವೃದ್ಧಿಗಿಂತ ಜನರ ಸಂತೋಷವೇ ಮುಖ್ಯವಾಗಿರಬೇಕು

06:00 AM Dec 05, 2018 | Team Udayavani |

ಜಿಡಿಪಿಗೆ ಸಂಬಂಧಿಸಿ ಏನೇ ವಾದ – ವಿವಾದ ಇದ್ದರೂ, ಮೂಲ ಪ್ರಶ್ನೆ ಏನೆಂದರೆ – “ದೇಶದ ಸಾಮಾನ್ಯ ನಾಗರಿಕರು ಹಿಂದಿಗಿಂತ ಸಂತೋಷವಾಗಿದ್ದಾರೆಯೇ ಅಥವಾ ಅವರ ಸ್ಥಿತಿ ಮತ್ತಷ್ಟು ಕೆಟ್ಟಿದೆಯೇ? ‘ ಎಂಬುದು. ದೇಶ ನಿಜವಾಗಿಯೂ ಪ್ರಕಾಶಿಸುತ್ತಿದೆಯೇ? ಭಾರತವು ನಿಜವಾಗಿಯೂ ಏಷ್ಯಾದ ಹುಲಿಯೇ ಅಥವಾ ಜಾಗತಿಕ ಶಕ್ತಿಯೇ.

Advertisement

ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವಿಷಯದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ವಿಪಕ್ಷ ಕಾಂಗ್ರೆಸ್‌ ನಡುವಿನ ವಿವಾದವನ್ನು ಜನ ಸಾಮಾನ್ಯರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದಾರೆ.  2004 -2014ರ ತನ್ನ ಅಧಿಕಾರಾವಧಿಯಲ್ಲಿ ಅತಿ ಹೆಚ್ಚು ಜಿಡಿಪಿ ದಾಖಲಾಗಿತ್ತು ಎಂದು ಹೇಳುತ್ತಿರುವ ಯುಪಿಎ ವಾದವನ್ನು ನೀತಿ ಆಯೋಗ ಮತ್ತು ಕೆಂದ್ರ ಸಾಂಖೀಕ ಇಲಾಖೆಯು ಅಂಕಿಅಂಶಗಳೊಂದಿಗೆ ಪ್ರಶ್ನಿಸುತ್ತಿದೆ. ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಆ ಕಾಲದಲ್ಲಿ ಜಿಡಿಪಿಯು ಗರಿಷ್ಠ ಶೇ. 10.3ಕ್ಕೆ ತಲುಪಿತ್ತು ಎಂದು ಯುಪಿಎ ಹೇಳುತ್ತಿದೆ. ಆದರೆ ನಮ್ಮ ಜಿಡಿಪಿಯು ಯಾವತ್ತೂ ಆ ಮಟ್ಟ ತಲುಪಿಲ್ಲ ಮತ್ತು ಅದರ ಗರಿಷ್ಠ ಪ್ರಮಾಣ ಶೇ.8.5 ಆಗಿದೆ ಎಂದು ನೀತಿ ಆಯೋಗ ಮತ್ತು ಕೇಂದ್ರದ ಸಾಂಖೀಕ ಇಲಾಖೆಯು ವಾದಿಸುತ್ತಿದೆ. 

ಆದರೆ ಈ ವಿವಾದದಿಂದ ಕೇಂದ್ರದ ಸಾಂಖೀಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅವರು ಸದ್ದಿಲ್ಲದೆ ದೂರವುಳಿದಿರುವ ವಿಚಾರ ಹೆಚ್ಚಿನವರ ಗಮನಕ್ಕೆ ಬಂದಿಲ್ಲ. ಇಂಥ ವಿಷಯದಲ್ಲಿ ನಮ್ಮಂಥವರಿಗೆ ಯಾವುದೇ ಪಾತ್ರವಿಲ್ಲ. ಇದು ಆರ್ಥಿಕ ತಜ್ಞರಿಗೆ ಮೀಸಲಾದ ವಿಷಯ. ತನ್ನಂಥ ಆಡಳಿತಗಾರರು ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎನ್ನುವುದು ಅವರ ಭಾವನೆಯಾಗಿರಬಹುದು. 

ಆದಾಗ್ಯೂ 2016ರ ಏಪ್ರಿಲ್‌ನಲ್ಲಿ ಕೇಂದ್ರದ ಬಿಜೆಪಿ ಸರಕಾರವು ಜಿಡಿಪಿಯ ಲೆಕ್ಕಾಚಾರದ ವಿಧಾನವನ್ನು ಬದಲಾಯಿಸಿರುವುದನ್ನು ನಾವು ಗಮನಿಸಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳ್ಳೋದಾದರೆ ಈಗ ಲೆಕ್ಕಾಚಾರವು ಗ್ರಾಹಕ ಕೇಂದ್ರಿತವಾಗಿದೆ; ಉತ್ಪಾದಕರನ್ನು ಕೇಂದ್ರೀಕರಿಸಿಲ್ಲ. ಈಗ ದೇಶದ ಜಿಡಿಪಿಯು ಜನರ ಒಟ್ಟು ಬಳಕೆಯ ಆಧಾರದಲ್ಲಿದೆಯೇ ಹೊರತು ಉತ್ಪಾದನೆಯ ಟನ್‌ಗಳ ಪ್ರಮಾಣದ ಲೆಕ್ಕಾಚಾರದಲ್ಲಿಲ್ಲ. ಜತೆಗೆ ಲೆಕ್ಕಾಚಾರದ ಮೂಲ ವರ್ಷವೂ ಬದಲಾಗಿದ್ದು, ಅದನ್ನು ಮಾರ್ಚ್‌ 2005ರಿಂದ ಮಾರ್ಚ್‌ 2012ಕ್ಕೆ ಬದಲಾಯಿಸಲಾಗಿದೆ. ಇದರ ಆಧಾರದಲ್ಲಿ ಲೆಕ್ಕಾಚಾರದ ಕ್ರಮವೂ ಬದಲಾಗುತ್ತಿದೆ. ಹೀಗೆ ಜಿಡಿಪಿ ಲೆಕ್ಕಾಚಾರದ ವಿಧಾನ ಬದಲಾಗುವುದು ಸಾಮಾನ್ಯ ಪ್ರಕ್ರಿಯೆ. ಉದಾಹರಣೆಗೆ ಹೇಳುವುದಾದರೆ ಸಾಂಖೀಕ ದತ್ತಾಂಶ ಸಂಗ್ರಹಕ್ಕೂ 2009ರಲ್ಲಿ ಹೊಸ ವಿಧಾನವನ್ನು ಮಾಡಲಾಗಿತ್ತು. 

ಯುಪಿಎ ಅವಧಿಯಲ್ಲಿ ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿತ್ತು ಎಂಬುದನ್ನು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು ತಳ್ಳಿ ಹಾಕಿದ್ದು, ಅಂಥ ವಾದವು “ಒಂದು ಜೋಕ್‌’ ಎಂದು ಅವರು ಹೇಳಿದ್ದಾರೆ. ಆದರೆ ಇದಕ್ಕೆ ತತ್ಕಕ್ಷಣ ಸ್ಪಂದಿಸಿರುವ‌ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಅವರು, ಈ ವಿಷಯದಲ್ಲಿ ಚರ್ಚೆಗೆ ಬರುವಂತೆ ಚಿದಂಬರಂ ಅವರಿಗೆ ಸವಾಲೆಸೆದಿದ್ದಾರೆ. ಅದನ್ನು ಚಿದಂಬರಂ ಅವರು ಇನ್ನೂ ಸ್ವೀಕರಿಸಿಲ್ಲ. 

Advertisement

ಆದರೆ ದಿನನಿತ್ಯದ ವ್ಯವಹಾರಗಳಾದ ಬೆಲೆಯೇರಿಕೆ, ಭ್ರಷ್ಟಾಚಾರ, ಆಡಳಿತದ ದುರುಪಯೋಗ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಗಮನ ನೀಡುವ ಜನಸಾಮಾನ್ಯರು ಜಿಡಿಪಿ ಕುರಿತು ಅಷ್ಟೇನೂ ಆಸಕ್ತಿ ಹೊಂದಿಲ್ಲ. ಸರಳವಾಗಿ ಹೇಳುವುದಾದರೆ ಜನಸಾಮಾನ್ಯರು ತಮ್ಮ ದೈನಂದಿನ ಜೀವನದ ಕುರಿತು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅದೃಷ್ಟವಶಾತ್‌ ದೇಶದ ಯುವ ಜನತೆಯು ಬೇಳೆಕಾಳು, ಹಾಲು, ಔಷಧ, ಸೀಮೆಎಣ್ಣೆ ಆಥವಾ ಪೆಟ್ರೋಲ್‌ ಕೊರತೆ ಮುಂತಾದವುಗಳ ಬಗ್ಗೆ ಹೆಚ್ಚು ಜ್ಞಾನ ಹೊಂದಿಲ್ಲ. ಇವುಗಳ ಕೊರತೆಯು 1940ರಲ್ಲಿ ಆರಂಭವಾದ ಎರಡನೆ ಲೋಕ ಮಹಾಯುದ್ಧದ ಸಮಯದಲ್ಲಿ ಗೋಚರಿಸಿತ್ತು ಮತ್ತು 1968ರ ವರೆಗೂ ಮುಂದುವರಿದಿತ್ತು. ಆಗ ಹಸಿರುಕ್ರಾಂತಿಯನ್ನು ಆರಂಭಿಸಲಾಗಿತ್ತು. ಈಗ ಜನರು ತಮ್ಮ ಅಗತ್ಯ ವಸ್ತುಗಳಿಗಾಗಿ ಸಾಲು ನಿಲ್ಲುವ ಅಗತ್ಯವಿಲ್ಲ. ಹಿಂದೆ ಜನರು ಒಂದು ಫಿಯೆಟ್‌ ಕಾರು ಅಥವಾ ವೆಸ್ಪಾ ಸ್ಕೂಟರ್‌ ಖರೀದಿಸಲು ಕೂಡ ವರ್ಷಗಳ ಕಾಲ ಕಾಯಬೇಕಿತ್ತು. ಕಂಪ್ಯೂಟರ್‌ ಯುಗಕ್ಕಿಂತ ಮೊದಲು ಬೆಂಗಳೂರಿನ ಜನರು ತಮ್ಮ ವಾಹನದ ತೆರಿಗೆ ಕಟ್ಟಲು ಕೂಡ ದಿನಪೂರ್ತಿ ಕಾಯಬೇಕಾಗಿತ್ತು. ಇಂಥ ಸರತಿ ಸಾಲು ನಿಲ್ಲುವುದನ್ನು ತಪ್ಪಿಸಲು ಜನರು ಸಾರಿಗೆ ಕಚೇರಿಯಲ್ಲಿರುವ ದಲ್ಲಾಳಿಗಳ ಮೊರೆ ಹೋಗುತ್ತಿದ್ದರು ಅಥವಾ ವಿಧಾನಸೌಧದಿಂದ ಪರಿಚಿತರ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಹೀಗೆ ಸರತಿ ಸಾಲು ನಿಲ್ಲಬೇಕಾದ ಸ್ಥಿತಿ ಈಗಿಲ್ಲ. ಆದರೆ ಈಗಲೂ ಕೆಲವು ಕಚೇರಿಗಳಲ್ಲಿ ದಲ್ಲಾಳಿಗಳ ಕಾರುಬಾರು ನಡೆಯುತ್ತಿರುವುದು ಮತ್ತು ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂಬುದು ನಿಸ್ಸಂಶಯ ಸಂಗತಿ. ಪಡಿತರ ವ್ಯವಸ್ಥೆಯು ಈಗಲೂ ಜಾರಿಯಲ್ಲಿದೆ ಎಂದಾದರೆ, ದುಬಾರಿ ಬೆಲೆ ತೆತ್ತು ಆಹಾರಧಾನ್ಯಗಳನ್ನು ಖರೀದಿಸುವ ಶಕ್ತಿಯಿಲ್ಲದವರು ಈಗಲೂ ಇದ್ದಾರೆ ಎಂಬುದಕ್ಕೆ ಸಾಕ್ಷಿ. ಸರಕಾರದ ಸಹಾಯಧನ ನೀಡುವ ಮೂಲಕ ಅಂಥವರಿಗೆ ಆಹಾರಧಾನ್ಯ ಖರೀದಿಸುವ ಶಕ್ತಿಯನ್ನು ನೀಡುತ್ತದೆ. ಮತ್ತೂಂದೆಡೆ ನಮ್ಮ ರೈತರು ಯಾವತ್ತೂ ತಮ್ಮ ಉತ್ಪನ್ನಗಳಿಗೆ ಕಡಿಮೆ ಬೆಲೆ ಸಿಗುತ್ತಿದೆ ಎಂದು ದೂರುತ್ತಲೇ ಇದ್ದಾರೆ. ಇವೆರಡು ನಿಜಕ್ಕೂ ವಿರೋಧಾಭಾಸದ ಸ್ಥಿತಿ ಎಂದು ಹೇಳಬೇಕಾಗುತ್ತದೆ. 

ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ವಿದೇಶ ಸಾಲ ಪಡೆದು ಆಡಳಿತ ನಡೆಸುತ್ತಿದುದರಿಂದ ಅರ್ಥಿಕ ಬೆಳವಣಿಗೆ ದರ ಶೇ. 10 ಇತ್ತು ಎಂದು ನೀತಿ ಆಯೋಗದ ಉಪಾಧ್ಯಕ್ಷರು ಹೇಳುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ 1990-92ರಲ್ಲಿ ಕುಸಿದು ಹೋಗಿತ್ತು. ಆರ್ಥಿಕ ಉದಾರೀಕರಣದ ಸಂದರ್ಭದಲ್ಲಿ ಶೆ. 10 ಅಭಿವೃದ್ಧಿ ಸಾಧಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವವಾಗಿ ಅಜಾಗರೂಕ ರೀತಿಯಲ್ಲಿ ಬ್ಯಾಂಕ್‌ ಸಾಲ ನೀಡುತ್ತಾ ಹೋಗಿರುವುದು ಮತ್ತು ಭಾರೀ ವಿತ್ತೀಯ ಕೊರತೆಗೆ ಕಾರಣವಾಗಿದೆ. ಈ ಮಾತು ಪಿ. ಚಿದಂಬರಂ ಅವರನ್ನು ಕೆರಳಿಸಿತ್ತು. 

ಈಗ ದೇಶದ ಸಾಮಾನ್ಯ ನಾಗರಿಕರು ತೃಪ್ತರಾಗಿದ್ದಾರೆಯೇ? 
ಜಿಡಿಪಿ ಸಂಬಂಧಿಸಿ ಏನೇ ವಾದ – ವಿವಾದ ಇದ್ದರೂ, ಮೂಲ ಪ್ರಶ್ನೆ ಏನೆಂದರೆ – “ದೇಶದ ಸಾಮಾನ್ಯ ನಾಗರಿಕರು ಹಿಂದಿಗಿಂತ ಸಂತೋಷವಾಗಿದ್ದಾರೆಯೇ ಅಥವಾ ಅವರ ಸ್ಥಿತಿ ಮತ್ತಷ್ಟು ಕೆಟ್ಟಿದೆಯೇ? ‘ ಎಂಬುದು. ದೇಶ ನಿಜವಾಗಿಯೂ ಪ್ರಕಾಶಿಸುತ್ತಿದೆಯೇ? ಭಾರತವು ನಿಜವಾಗಿಯೂ ಏಷ್ಯಾದ ಹುಲಿಯೇ ಅಥವಾ ಜಾಗತಿಕ ಶಕ್ತಿಯೇ ಅಥವಾ ದೇಶದ ಜನರು ಟೂತ್‌ಪೇಸ್ಟ್‌ನ ಜಾಹೀರಾತಿನಂತೆ ತಮ್ಮ ನಗುವನ್ನು ರೂಪಿಸುತ್ತಿದ್ದಾರೆಯೇ? ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳುವ ಹೊತ್ತಿನಲ್ಲಿಯೇ ಹೆಚ್ಚಿನ ಜನರಿಗೆ ತಮ್ಮ ಜೀವನಶೈಲಿಯ ಗುಣಮಟ್ಟ ಕಳಪೆಯಾಗುತ್ತಿರುವುದರ ಅನುಭವವಾಗುತ್ತಿದೆ. ಇದು ವಾಸ್ತವ. ಇದು ನಮ್ಮ ನೆರೆಯ ಭೂತಾನ್‌ ದೇಶವು ಹೊಸದಾಗಿ ಜಾರಿಗೆ ತಂದಿರುವ “ಒಟ್ಟು ರಾಷ್ಟ್ರೀಯ ಸಂತೋಷ’ ಸೂಚಿಕೆಯತ್ತ ಗಮನ ಹರಿಸುವ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಅದು ತನ್ನ ಅಭಿವೃದ್ದಿ ತಂತ್ರದಲ್ಲಿ ಸಂತೋಷಕ್ಕೆ ಪ್ರಮುಖ ಆದ್ಯತೆ ನೀಡುತ್ತದೆಯೇ ಹೊರತು ವಸ್ತು ಸಂಬಂಧಿ ಹಿತವನ್ನಲ್ಲ. ಇದು ಕೆಲವು ಅಂತಾರಾಷ್ಟ್ರೀಯ ಸಂಘಟನೆಗಳ ಗಮನ ಸೆಳೆದಿದೆ. ಭೂತಾನ್‌ ದೇಶದ ಸರಾಸರಿ ನಾಗರಿಕರು ಆರ್ಥಿಕ ದಿಗ್ಗಜ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಜಪಾನ್‌ ದೇಶದ ನಾಗರಿಕರಿಗಿಂತ ಹೆಚ್ಚು ಸಂತೋಷದಿಂದ ಬದುಕುತ್ತಿದ್ದಾರೆ. 

ಇಂಥ ಬದಲಾವಣೆಯು ಜನರ ಆರೋಗ್ಯದ ವಿಷಯದಲ್ಲೂ ಕಂಡು ಬರುತ್ತಿದೆ. ಈಗ ನಾವು “ವೆಲ್‌ನೆಸ್‌ ಕ್ಲಿನಿಕ್‌’ ಬಗ್ಗೆ ಕೇಳುತ್ತಿದ್ದೇವೆ. ವೆಲ್‌ನೆಸ್‌ ಎಂಬುದಕ್ಕೆ ಆರೋಗ್ಯ ಎಂಬುದಕ್ಕಿಂತ ಹೆಚ್ಚಿನ ಮಹತ್ವ ಮತ್ತು ಆರ್ಥವಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುತ್ತಿದೆ, “ರೋಗ ಇಲ್ಲದಿರುವುದು ಮತ್ತು ದೇಹ ದೌರ್ಬಲ್ಯ ಇಲ್ಲದಿರುವುದು ಮಾತ್ರವೇ ಆರೋಗ್ಯ ಎಂದರ್ಥವಲ್ಲ. ಆರೋಗ್ಯ ಎಂಬುದು ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯನ್ನು ಅವಲಂಬಿಸಿದೆ.’ ಮುಂದುವರಿದು ಹೇಳುತ್ತದೆ, ದೈಹಿಕ ಆರೋಗ್ಯ ಮಾತ್ರವೇ ಆರೋಗ್ಯವಲ್ಲ, ಅದು ಭಾವನತ್ಮಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ವಿಷಯಗಳನ್ನು ಒಳಗೊಂಡಿರುತ್ತದೆ.

1977-79ರಲ್ಲಿ ಜನತಾ ಪಾರ್ಟಿಯು ಅಧಿಕಾರದಲ್ಲಿದ್ದಾಗ ಸಂತಾನ ಹರಣ ಕಾರ್ಯಕ್ರಮ (ಫ್ಯಾಮಿಲಿ ಪ್ಲಾನಿಂಗ್‌ ಪ್ರೋಗ್ರಾಂ) ಅನ್ನು ಕುಟುಂಬ ಕಲ್ಯಾಣ ಕಾರ್ಯಕ್ರಮ (ಫ್ಯಾಮಿಲಿ ವೆಲ್ಫೆàರ್‌ ಪ್ರೋಗ್ರಾಂ) ಅಂದು ಬದಲಾಯಿಸಿತು. ಇದು ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಚಿವ ರಾಜ್‌ ನಾರಾಯಣ್‌ ಅವರು ಮಾಡಿದ ಬದಲಾವಣೆಯಾಗಿದೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಸಂಜಯ್‌ ಗಾಂಧಿ ಆದೇಶದಂತೆ ಸಂತಾನಹರಣ ಶಸ್ತ್ರಕ್ರಿಯೆಯನ್ನು ಬಲವಂತವಾಗಿ ಮಾಡಲಾಗುತ್ತಿತ್ತು. ಪುರುಷರು ಮತ್ತು ಮಹಿಳೆಯರು ಫ್ಯಾಮಿಲಿ ಪ್ಲಾನಿಂಗ್‌ ಕ್ಲಿನಿಕ್‌ ಕಂಡಾಗ ಹೆದರುವ ಸ್ಥಿತಿ ನಿರ್ಮಾಣವಾಗಿತ್ತು. 

ಇನ್ನೊಂದು ಪ್ರಶ್ನೆ ನಮ್ಮ ಅಧಿಕೃತ ಅಂಕಿಅಂಶಗಳ ನಂಬಿಕೆಗೆ ಸಂಬಂಧಿಸಿದ್ದು. ನಮ್ಮ ಗ್ರಾಹಕ ಬೆಲೆ ಸೂಚಿಕೆಯು ಹಣದುಬ್ಬರ ದರವನ್ನು ಲೆಕ್ಕ ಹಾಕಲು, ಸರಕಾರಿ ಸಿಬಂದಿಗೆ ತುಟ್ಟಿ ಭತ್ಯೆ (ಡಿಎ) ನೀಡಲು ಬಳಕೆಯಾಗುತ್ತದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರೆ ಸರಕಾರ ಹೇಳಬಹುದು ಹಣದುಬ್ಬರದ ದರ ಇಳಿಕೆಯಾಗುತ್ತದೆ ಎಂದು. ಆದರೆ ಬೆಲೆ ಕಡಿಮೆಯಾಗುತ್ತದೆ ಎಂದು ಸರಕಾರ ಹೇಳುತ್ತಿಲ್ಲ. ಬೆಲೆ ಏರಿಕೆಯ ಪ್ರಮಾಣ ಕಡಿಮಾಯಾಗುತ್ತದೆ ಎಂದಷ್ಟೆ ಹೇಳುತ್ತದೆ. 

ದೇಶ ಸ್ವಾತಂತ್ರ್ಯ ಪಡೆದಿಂದೀಚೆಗೆ ಮತ್ತು ಪ್ಲಾನಿಂಗ್‌ ಅನ್ನು ಸ್ವೀಕರಿಸಿಕೊಂಡ ಬಳಿಕ ಪ್ರತಿಯೊಂದು ವಿಷಯದಲ್ಲೂ ಅಂಕಿಅಂಶ ಹೆಚ್ಚು ಮಹತ್ವ ಪಡೆಯುತ್ತದೆ. ಆ ಅಂಕಿಅಂಶವನ್ನು ಹೆಚ್ಚು ವಿಶ್ವಸನೀಯವಾಗಿಸಲು ಪ್ರಯತ್ನ ನಡೆಯುತ್ತದೆ. ಕೇಂದ್ರ ಸಾಂಖೀಕ ಇಲಾಖೆಯು 1951ರಲ್ಲಿ ಆರಂಭವಾಯಿತು, ನೇಶನಲ್‌ ಸ್ಯಾಂಪಲ್‌ ಸರ್ವೆ 1950ರಲ್ಲಿ ನಡೆಸಲಾಯಿತು ಮತ್ತು ನೇಶನಲ್‌ ಸ್ಟಾಟಿಸ್ಟಿಕಲ್‌ ಆರ್ಗನೈಸೇಶನ್‌ ಇತ್ತೀಚೆಗಿನ ವರ್ಷದಲ್ಲಿ ಆರಂಭವಾಯಿತು. ಆದರೆ ನಮ್ಮ ದೊಡ್ಡ ಜನಸಂಖ್ಯೆ ಮತ್ತು ವಿಸ್ತಾರವಾದ ದೇಶದ ಅಂಕಿಅಂಶ ಸಂಗ್ರಹಿಸುವುದೇ ಸಮಸ್ಯೆಯಾಗಿದೆ. ದೇಶದ ಆರ್ಥಿಕ ಬೆಳವಣಿಗೆ ಮತ್ತು ನಿರುದ್ಯೋಗ ಪ್ರಮಾಣವನ್ನು ಲೆಕ್ಕ ಹಾಕುವುದೇ ಒಂದು ಸವಾಲಾಗಿದೆ. ಕಳೆದ ಬಾರಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ್ದ ಉದ್ಯೋಗ ಸೃಷ್ಟಿ ಭರವಸೆಯನ್ನು ಈಡೇರಿಸಲು ಪ್ರಧಾನಿ ವಿಫ‌ಲರಾಗಿದ್ದಾರೆ ಎಂಬ ಟೀಕೆ ಕೇಳಿ ಬರುತ್ತಿದೆ. 

ಲಘುವಾಗಿ ಹೇಳುವುದಾದರೆ ಬೆಂಗಳೂರಿನ ಸಾವಿರಾರು ಯುವ ಜನತೆ ಇತ್ತೀಚೆಗೆ ಅಂತ್ಯಸಂಸ್ಕಾರಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದನ್ನು ನಿರುದ್ಯೋಗ ಸಮಸ್ಯೆ ಎಂದು ಹೇಳಬಹುದು, ಅಂಡರ್‌ ಎಂಪ್ಲಾಯಿಮೆಂಟ್‌ ಅಥವಾ ನೀವು ಬಯಸುವ ಬೇರೆ ಶಬ್ದಗಳಿಂದಲೂ ಗುರುತಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next