ಎಚ್.ಡಿ.ಕೋಟೆ: ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ಬೀದಿ ನಾಯಿಗಳು ಮನೆ ಮುಂದೆ ಆಟ ಆಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯ ಗೊಳಿಸಿರುವ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಂಚರಿಸಲು ಭಯಭೀತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲೊಂದು ಸುತ್ತು ಹೊಡೆದರೆ ಎಲ್ಲಿ ನೋಡಿದರೂ ಬೀದಿ ನಾಯಿಗಳ ಹಿಂಡು ಕಣ್ಣಿಗೆ ರಾಚುತ್ತದೆ. ಸೆರೆ ಹಿಡಿದು ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಸಾರ್ವಜನಿಕರು ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ವಾಹನ ಸವಾರರಿಗೆ ಕಿರಿಕಿರಿ: ಪಟ್ಟಣದ ಎಲ್ಲಾ ಬಡಾವಣೆಗಳಲ್ಲೂ ಬೀದಿನಾಯಿಗಳು ಹಿಂಡು ಹಿಂಡಾಗಿ ಕಾಣಿಸಿಕೊಂಡು ಗದ್ದಲವನ್ನು ಉಂಟುಮಾಡುವುದರ ಜೊತೆಗೆ ಕೆಲ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ನಿದರ್ಶನಗಳು ಇವೆ. ಇನ್ನೂ ದ್ವಿಚಕ್ರ ವಾಹನ ಸವಾರರಿಗೂ ಅಡ್ಡ ಬಂದು ಸವಾರರು ಬಿದ್ದು ಗಾಯಗೊಂಡಿರುವುದನ್ನು ಕಾಣ ಬಹುದಾಗಿದೆ.
ಪುರಸಭೆ ವಿರುದ್ಧ ಆಕ್ರೋಶ: ಮಕ್ಕಳು, ವಯಸ್ಕರು, ವೃದ್ಧರಷ್ಟೇ ಅಲ್ಲದೇ ದನ, ಕರು, ಕುರಿ, ಕೋಳಿ, ಮೇಕೆಗಳ ಮೇಲೂ ಬೀದಿನಾಯಿಗಳ ಹಿಂಡು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ. ಶ್ವಾನಗಳ ಸಮಸ್ಯೆ ಪಟ್ಟಣದ ನಾಗರೀಕರನ್ನು ಬೆಂಬಿಡದೇ ಕಾಡುತ್ತಿದ್ದರೂ ಪುರಸಭೆ ಅಧಿಕಾರಿಗಳು ಶೀಘ್ರ ಬೀದಿ ನಾಯಿಗಳನ್ನು ಸೆರೆಹಿಡಿದು ಸಮಸ್ಯೆ ತಿಳಿ ಗೊಳಿಸಲು ಮುಂದಾಗದಿರುವುದಕ್ಕೆ ಸಾರ್ವ ಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇನ್ನಾದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೀಘ್ರ ಬೀದಿನಾಯಿಗಳನ್ನು ಸೆರೆಹಿಡಿಸಿ ಮುಂದಾಗ ಬಹುದಾದ ಅನಾಹುತವನ್ನು ತಪ್ಪಿಸಿ ಸಾರ್ವ ಜನಿಕರು, ಪಟ್ಟಣಿಗರು ನಿರ್ಭೀತಿಯಿಂದ ಓಡಾಡಲು ಅನುಕೂಲ ಕಲ್ಪಿಸಬೇಕಾಗಿದೆ.