ಬೆಂಗಳೂರು: ಅಂಚೆ ಇಲಾಖೆಯು ಪ್ರತಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಖಾತೆಗೆ 8,000 ರೂ. ಹಣ ಜಮೆ ಮಾಡಲಿದೆ ಎನ್ನುವ ಸುಳ್ಳು ವದಂತಿ ನಂಬಿದ ಜನರು ಅಂಚೆ ಕಚೇರಿಗಳಿಗೆ ತೆರಳಿ, ಐಪಿಪಿಬಿ ಖಾತೆ ತೆರೆಯಲು ಮುಂದಾಗುತ್ತಿದ್ದಾರೆ.
ಐಪಿಪಿಬಿ ಖಾತೆಯ ಮೂಲಕ ಗ್ರಾಹಕರು ತಮ್ಮ ಖಾತೆಯಿಂದ ಆನ್‌ಲೈನ್ ಮೂಲಕ ನೇರವಾಗಿ ವಿದ್ಯುತ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ನೇರ ಹಣ ವರ್ಗಾವಣೆ ಸೇರಿದಂತೆ ಸೌಲಭ್ಯಗಳಿವೆ. ಜತೆಗೆ ಸರ್ಕಾರದ ವಿವಿಧ ಯೋಜನೆಗಳು ಈ ಖಾತೆಯೊಂದಿಗೆ ಜೋಡಿಸಲಾಗಿದೆ. ಆದರೆ ಇದೀಗ ಅಂಚೆ ಕಚೇರಿಯ ಐಪಿಪಿಬಿ ಖಾತೆಯಿದ್ದರೆ ಮಾಸಿಕ 8000 ರೂ. ಪಾವತಿ ಯಾಗಲಿದೆ ಎನ್ನುವ ವದಂತಿ ಸೃಷ್ಟಿಯಾಗಿದ್ದು, ಕಳೆದ 10 ದಿನಗಳಿಂದ ಬೆಂಗಳೂರು ಜಿಪಿಒ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆಯಲು ಮುಂಜಾನೆ 5 ಗಂಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಜನರ ನಿಯಂತ್ರಣಕ್ಕೆ ಅಂಚೆ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಕಚೇರಿ ಮುಂದೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದರೂ, ಜನರು ಮಾತ್ರ ಖಾತೆ ಮಾಡುವುದರಲ್ಲಿ ಮುಳುಗಿ ಹೋಗಿದ್ದಾರೆ.
ಪ್ರತಿದಿನ 800 ಅರ್ಜಿ ಸಲ್ಲಿಕೆ:
ಬೆಂಗಳೂರು ಅಂಚೆ ಕಚೇರಿಯಲ್ಲಿ ಈ ಹಿಂದೆ ಪ್ರತಿದಿನ 50 ರಿಂದ 60 ಐಪಿಪಿಬಿ ಖಾತೆಯನ್ನು ತೆರೆಯಲಾಗುತ್ತಿತ್ತು. ಆದರೆ ಇದೀಗ 700 ರಿಂದ 800 ಖಾತೆಗಳನ್ನು ತೆರೆಯಲು ಅರ್ಜಿ ಸ್ವೀಕಾರವಾಗುತ್ತಿದೆ. ಇದುವರೆಗೆ ಸುಮಾರು 8,000 ಅರ್ಜಿ ಸ್ವೀಕರಿಸಲಾಗಿದೆ. ಸುಮಾರು 7 ಮಂದಿ ಪೋಸ್ಟ್ ಮಾಸ್ಟರ್ ಹೊಸ ಖಾತೆ ತೆರೆ ಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಜನ ದಟ್ಟಣೆಯನ್ನು ಕಡಿಮೆಗೊಳಿ ಸಲು ಅಂಚೆ ಸಿಬ್ಬಂದಿ ಖಾತೆ ತೆರೆಯಲು ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಬೆಂಗಳೂರು ಸೇರಿದಂತೆ ಕಡೆಯಲ್ಲಿ ಪೋಸ್ಟ್ ಮಾಸ್ಟರ್ ಅವರೇ ಮನೆಗಳಿಗೆ ತೆರಳಿ, ಐಪಿಪಿಬಿ ಖಾತೆಯನ್ನು ತೆರೆಯಲು ಮುಂದಾಗಿದ್ದಾರೆ.
ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆದರೆ ಮಾಸಿಕ 8,000 ಜಮೆಯಾಗುತ್ತದೆ ಎನ್ನುವ ವಂದತಿ ನಂಬಿ ಜನರು ಅಂಚೆ ಕಚೇರಿಯತ್ತ ಮುಗಿ ಬೀಳುತ್ತಿದ್ದಾರೆ. ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಸಹ ಖಾತೆ ತೆರೆಯಲು ಮುಂದಾಗುತ್ತಿದ್ದಾರೆ.
-ಎಚ್.ಎಂ. ಮಂಜೇಶ್, ಮುಖ್ಯ ಪೋಸ್ಟ್ ಮಾಸ್ಟರ್, ಬೆಂಗಳೂರು