ಎಚ್.ಡಿ.ಕೋಟೆ: ತಾಲೂಕು ಕೇಂದ್ರ ಎಚ್.ಡಿ.ಕೋಟೆ ಪಟ್ಟಣದಲ್ಲಿ ಸರ್ಕಾರಿ ಮತ್ತು ಪ್ರತಿಷ್ಠಿತ ಖಾಸಗಿ ಶಾಲಾ ಮಕ್ಕಳನ್ನು ಪ್ಯಾಸೇಂಜರ್ ಮತ್ತು ಗೂಡ್ಸ್ ಆಟೋಗಳು ಕುರಿಗಳಂತೆ ತುಂಬಿಕೊಂಡು ಸಂಚರಿಸುತ್ತಿವೆ.
ಮಕ್ಕಳನ್ನು ಶಾಲೆಗಳಿಗೆ ಕರೆತರುವ ಪ್ಯಾಸೇಂಜರ್ ಆಟೋಗಳ ಚಾಲಕರು ಇಲ್ಲಿ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಸಂಚಾರ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಶಾಲಾ ತೆರೆಯುವ ಹಾಗೂ ಬಿಡುವ ವೇಳೆಯಲ್ಲಿ ಪೊಲೀಸ್ ಠಾಣೆ ಮುಂದೆ ಜೀಪು, ಆಟೋ ಹಾಗೂ ಹೆಲ್ಮೆಟ್ ಇಲ್ಲದೇ ದ್ವಿಚಕ್ರವಾಹನಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಬೇಕಾಬಿಟ್ಟಿಯಾಗಿ ಸಂಚರಿಸಲಾಗುತ್ತಿದೆ. ಜತೆಗೆ ಜೀಪುಗಳಲ್ಲಿ ಕೇರಳಿಗರ ಶುಂಠಿ ಜಮೀನುಗಳಿಗೆ ಬಡ ಕೂಲಿ ಕಾರ್ಮಿಕರನ್ನು ಕಿಕ್ಕಿರಿದು ತುಂಬಿಕೊಂಡು ಹೊಗಲಾಗುತ್ತಿದೆ. ಎಚ್.ಡಿ.ಕೋಟೆ ಪೊಲೀಸರು ತಮ್ಮ ಕಣ್ಣೇದುರೇ ಇಂತಹ ಘಟನೆಗಳು ಕಂಡು ಬಂದರೂ ಯಾವುದೇ ಕ್ರಮಕೈಗೊಳ್ಳದೇ ಮೌನವಹಿಸಿದ್ದಾರೆ. ಹೀಗೆ ಜನರು ಹಾಗೂ ಮಕ್ಕಳನ್ನು ತುಂಬಿಕೊಂಡು ಹೋಗುವಾಗ ಯಾವುದೇ ಅಪಘಾತ ಸಂಭವಿಸಿ, ಸಾವು ನೋವು ಆದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ತಾಲೂಕು ಆಡಳಿತ ಕಂಡರೂ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದ್ದಾರೆ.ಶಾಲಾ ವಾಹನಗಳಲ್ಲಿ ಇಂತಿಷ್ಟು ಜನ, ವಾಹನ ಸುರಕ್ಷತೆ, ಭದ್ರತೆ ಮತ್ತಿತರ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಇದ್ಯಾವುದೂ ಇಲ್ಲಿ ಲೆಕ್ಕಕ್ಕಿಲ್ಲ. ತಮಗಿಷ್ಟ ಬಂದಂತೆ ವಾಹನಗಳನ್ನು ಓಡಿಸುತ್ತಿದ್ದರೂ ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ.
ಪ್ಯಾಸೇಂಜರ್ ಆಟೋ, ಸರಕು ಸಾಗಣೆ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಮಂದೆ ಕುರಿಗಳಂತೆ ತುಂಬಿಕೊಂಡು ಸಂಚಾರ ನಡೆಸುವ ವಾಹನ ಸವಾರರು ವಿದ್ಯಾರ್ಥಿಗಳು ಹಾಗೂ ಬಡಕೂಲಿ ಕಾರ್ಮಿಕರ ಬದುಕಿನಲ್ಲಿ ಚಲ್ಲಾಟವಾಡುತ್ತಿದ್ದಾರೆ. ಸಾರಿಗೆ ನಿಯಮ ಉಲ್ಲಂಘಿಸುವ ಸವಾರರ ಮೇಲೆ ಎಚ್.ಡಿ.ಕೋಟೆ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಏನಾದರೂ ಅನಾಹುತ ಜರುಗಿದರೇ ಯಾರು ಹೊಣೆ, ಇನ್ನಾದರೂ ಸಾರಿಗೆ ನಿಯಮ ಉಲ್ಲಂಘಿಸುವ ಸವಾರರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಘಟಕದ ಅಧ್ಯಕ್ಷ ಆಕಾಶ್ ರವೀಂದ್ರ ಮನವಿ ಮಾಡಿದ್ದಾರೆ.
ಈ ಕುರಿತು ಪೊಲೀಸರು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಸಂಚಾರ ನಿಯಮ ಉಲ್ಲಂ ಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
– ಬಿ.ನಿಂಗಣ್ಣ ಕೋಟೆ