ಸಕಲೇಶಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲ ಬದಲಾವಣೆಗಳನ್ನು ತಾಲೂಕು ಆಡಳಿತ ಕೈಗೊಂಡಿದ್ದ ರಿಂದ ಪಟ್ಟಣದ ಕೆಲವೆಡೆ ಜನಜಂಗುಳಿ ಉಂಟಾಗಿ ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಂದಾಗದೆ ಅಗತ್ಯ ವಸ್ತು ಖರೀದಿಸಲು ಮುಗಿಬಿದ್ದರು.
ಪಟ್ಟಣದ ಕೆಲವು ಅಂಗಡಿಗಳಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಹಣ್ಣು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ತಾಲೂಕು ಆಡಳಿತ ಸ್ಥಳಾಂತರಿಸಿದ್ದರಿಂದ ವ್ಯಾಪಕ ಜನದಟ್ಟಣೆ ಉಂಟಾಯಿತು.
ಇನ್ನು ಎಪಿಎಂಸಿ ಆವರಣದ ಪಕ್ಕದಲ್ಲೇ ಇರುವ ಜೆಎಸ್‌ಎಸ್ ಶಾಲೆ ಆವರಣದಲ್ಲಿ ಟಿಎಪಿಸಿಎಂಎಸ್‌ವತಿಯಿಂದ ರೈತರಿಗೆ ತರಕಾರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾರ್ಕಿಂಗ್ ಮಾಡಿದ್ದರೂ ತಲೆ ಕೆಡಿಸಿಕೊಳ್ಳದೆ ತರಕಾರಿ ಖರೀದಿಗೆ ಮುಗಿಬಿದ್ದರು.
ಇದೇ ರೀತಿ ಪಟ್ಟಣದ ಹಳೆ ಬಸ್ ನಿಲ್ದಾಣದ ಸೂಪರ್ ಮಾರ್ಕೆಟ್ ಸೇರಿದಂತೆ ಕೆಲ ದಿನಸಿ ಅಂಗಡಿ ಗಳಲ್ಲೂ ಜನ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದರು. ಈ ಹಿಂದೆ ಅಗತ್ಯ ವಸ್ತು ಕೊಳ್ಳಲು ಮುಂಜಾನೆ 8ರಿಂದ 10ಗಂಟೆ ಸಂಜೆ 5ರಿಂದ 8 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಜಿಲ್ಲಾಡಳಿತದ ನಿರ್ದೇಶನದಂತೆ ಸಮ ಬೆಸ ನಿಯಮ ಅನುಷ್ಠಾನಕ್ಕೆ ತಂದ ಮೇಲೆ ಅಗತ್ಯ ವಸ್ತುಗಳನ್ನು ಕೊಳ್ಳುವಾಗ ಜನರಲ್ಲಿ ಸಾಮಾಜಿಕ ಅಂತರವೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಸಲು ಮುಂದಾಗಬೇಕಾಗಿದೆ.
ಒಂದು ದಿನ ಲಾಕ್ ಡೌನ್ ಮತ್ತೂದು ದಿನ ಅಗತ್ಯ ವಸ್ತು ಕೊಳ್ಳಲು ಅವಕಾಶ ನೀಡಿರುವುದು ಪ್ರಯೋಜನವಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.