ಸುಳ್ಯ: ಜನರು ಜನಪ್ರತಿನಿಧಿಗಳ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸ್ಪಂದಿಸಬೇಕಾದುದು ನನ್ನ ಕರ್ತವ್ಯ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಸುಳ್ಯ, ಪುತ್ತೂರು ತಾಲೂಕಿನಲ್ಲಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ದುಡಿಯುವ ತಮಿಳು ರಬ್ಬರ್ ಕಾರ್ಮಿಕ ಸಮಸ್ಯೆಯನ್ನು ನಿವಾರಿಸುವಲ್ಲಿ ಶ್ರಮಿಸಿದ ರಾಜ್ಯ ಸರಕಾರ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತು ನಿಗಮದ ಅಧಿಕಾರಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಸುಳ್ಯ, ಕಡಬ, ಪುತ್ತೂರು ತಮಿಳು ಕಾರ್ಮಿಕರ ಒಕ್ಕೂಟದ ಆಶ್ರಯದಲ್ಲಿ ಸುಳ್ಯದ ಪುರಭವನದಲ್ಲಿ ರವಿವಾರ ನಡೆಯಿತು.
ರಬ್ಬರು ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗಾಗಿ 87 ದಿನ ಧರಣಿ ನಡೆಸಿದ ಸಂದರ್ಭದಲ್ಲಿ ವಿರೋಧಪಕ್ಷದ ಶಾಸಕನಾಗಿದ್ದೆ. ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ನಿಮ್ಮ ಸಮಸ್ಯೆ ನೀಗಿಸುವುದಾಗಿ ಭರವಸೆ ನೀಡಿದ್ದೆ. ನಮ್ಮ ಕಾಂಗ್ರೆಸ್ ಆಡಳಿತಕ್ಕೆ ಬಂದ ಅನಂತರ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಂದಿಸಿದ್ದಾರೆ. ತಮಿಳರಿಗೆ ಜಾತಿ ಪ್ರಮಾಣಪತ್ರ. ಬಿಪಿಎಲ್, ಪಡಿತರ ಚೀಟಿ, ನಿವೃತ್ತ ಕಾರ್ಮಿಕರಿಗೆ ತಡೆಹಿಡಿದಿದ್ದ ಸೇವಾ ವೇತನ ಮತ್ತು ಗೃಹವಸತಿ ಸೌಲಭ್ಯಗಳನ್ನು ಒದಗಿಸಿ ವೇತನವನ್ನು ಪ್ಯಾಕೇಜ್‌ರೂಪದಲ್ಲಿ ಏರಿಸಿಕೊಟ್ಟಿದ್ದೇವೆ ಎಂದರು.
ಸಮಾರಂಭವನ್ನು ಕೆಎಫಡಿಸಿ ರಾಜ್ಯಾಧ್ಯಕ್ಷ ನಾಗರಾಜ್ ಶಭಿ ಉದ್ಘಾಟಿಸಿ, ತಮಿಳರ ಸಮುದಾಯ ಭವನಕ್ಕೆ 5 ಲಕ್ಷ ರೂ. ಅನುದಾನ ನಿಗಮದಿಂದ ಕೊಟ್ಟಿದೆ. ಕಾರ್ಮಿಕರ ಸಂತೋಷವೇ ನಮ್ಮ ಸಂತೋಷವೆಂದರು.
ಈ ಸಂದರ್ಭದಲ್ಲಿ ಶಭಿ ಅವರನ್ನು, ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಿಶಾನ್‌ಸಿಂಗ್ ಸುಗರ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸಮಿತಿ ಗೌರವಾಧ್ಯಕ್ಷ ಎಂ. ವೆಂಕಪ್ಪ ಗೌಡ ಅಭಿನಂದನ ಮಾತುಗಳನ್ನಾಡಿದರು. ಸಮಿತಿ ಅಧ್ಯಕ್ಷ ಎ.ಎಸ್. ಚಂದ್ರಲಿಂಗಂ ಪ್ರಾಸ್ತಾವಿಕ ಮಾತುಗಳನ್ನಾಡಿ ಬೇಡಿಕೆಗಳನ್ನು ಮುಂದಿಟ್ಟರು. ಜತೆ ಕಾರ್ಯದರ್ಶಿ ಮೋಹನಸುಂದರಂ ಸ್ವಾಗತಿಸಿ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ, ಮಹಿಳಾ ಘಟಕದ ಸಂಚಾಲಕಿ ಶಕುಂತಳಾ ನಾಗರಾಜ್ ವಂದಿಸಿದರು. ಕಣ್ಣದಾಸ್ ನಿರೂಪಿಸಿದರು.
ವೇದಿಕೆಯಲ್ಲಿ ಮುಖಂಡರಾದ ಡಾ| ರಘು, ರಾಜೀವಿ ರೈ, ಟಿ.ಎಂ. ಶಹೀದ್, ನಿತ್ಯಾನಂದ ಮುಂಡೋಡಿ, ಪಿ.ಎ. ಮಹಮ್ಮದ್, ಎಸ್. ಸಂಶುದ್ದೀನ್, ಪಿ.ಸಿ. ಜಯರಾಮ, ಕೆ.ಎಂ. ಮುಸ್ತಾಫ, ಗೀತಾ ಕೋಲ್ಚಾರ್, ಕಾರ್ಮಿಕ ಸಂಘಟನೆಯ ಕಂದಸ್ವಾಮಿ, ಸುಂದರಲಿಂಗಂ, ಮುತ್ತುಸ್ವಾಮಿ, ಗಣೇಶ್ ನೆಲ್ಲಿಕಟ್ಟೆ, ಸುಬ್ರಹ್ಮಣ್ಯಂ, ಕೃಷ್ಣಸ್ವಾಮಿ ಕಂದಡ್ಕ, ಬಿ. ಸುಬ್ರಹ್ಮಣ್ಯಂ, ನಾರಾಯಣ ಸ್ವಾಮಿ, ವಿವಿಧ ಸಮಿತಿ ಮುಖ್ಯಸ್ಥರು, ಹುಬ್ಬಳ್ಳಿಯ ಮಾಜಿ ಮೇಯರ್ ಪ್ರಕಾಶ್, ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಮನೋಜ್, ಪಿ.ಎಂ.ರಂಗನಾಥ್, ಕಿಶೋರ್‌ಕುಮಾರ್, ಗೋಪಾಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.