Advertisement

ಕುಡಿಯುವ ನೀರಿಗಾಗಿ ಜನರ ಪ್ರತಿಭಟನೆ

01:04 PM Apr 01, 2022 | Team Udayavani |

ಬೆಳಗಾವಿ: ಕಳೆದ ಎರಡು ವಾರಗಳಿಂದ ನಗರದ ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಅಸಮರ್ಪಕ ನೀರು ಪೂರೈಕೆಯ ವಿರುದ್ದ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Advertisement

ವೈಭವನಗರ, ಬಸವ ಕಾಲೋನಿ ನಿವಾಸಿಗಳು ಖಾಲಿ ಕೊಡಗಳೊಂದಿಗೆ ರಸ್ತೆಗೆ ಇಳಿದಿದ್ದಲ್ಲದೆ ಶಾಸಕ ಅನಿಲ ಬೆನಕೆ ಸಮ್ಮುಖದಲ್ಲೇ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ವಹಿಸಿಕೊಂಡಿರುವ ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಸವ ಕಾಲೋನಿ, ವೈಭವ ನಗರದಲ್ಲಿ ಕಳೆದ 15 ದಿನಗಳಿಂದ ನೀರಿನ ಪೂರೈಕೆ ಇಲ್ಲ. ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಯಾವ ಕಾರಣಕ್ಕೆ ಪೂರೈಕೆ ಮಾಡುತ್ತಿಲ್ಲ. ಪ್ರತಿ ಸಲ ಒಂದಿಲ್ಲಾ ಒಂದು ಕಾರಣ ಹೇಳಿ ದಿನ ದೂಡುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗಿದೆ ಎಂದು ನಾಗರಿಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

24 ಗಂಟೆ ನೀರು ಪೂರೈಕೆ ಮಾಡಬೇಕಾದ ಬಡಾವಣೆಯಲ್ಲಿ ಎರಡು ಗಂಟೆಯೂ ಸರಿಯಾಗಿ ನೀರು ಬರುತ್ತಿಲ್ಲ. ಕಾರಣ ಕೇಳಿದರೆ ವಿದ್ಯುತ್‌ ಸಮಸ್ಯೆ, ಪಂಪ್‌ ಹಾಳಾಗಿದೆ ಎಂಬ ನೆಪ ಹೇಳುತ್ತೀರಿ. ಎಲ್ಲರಿಗೂ ಮನವಿ ಕೊಟ್ಟು, ಸಮಸ್ಯೆಯ ಬಗ್ಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ ಎಂದು ಎಲ್‌ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಅನಿಲ್‌ ಬೆನಕೆ ಮಾತನಾಡಿ, ನೀರಿನ ಸಮಸ್ಯೆ ಪರಿಹರಿಸಲು 8 ದಿನಗಳ ಗಡುವು ಕೊಟ್ಟಿದ್ದೇವೆ. ಈಗ ನಾಲ್ಕು ದಿನ ಮುಗಿದಿದೆ. ಇನ್ನು ನಾಲ್ಕು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ನಾನು ಈಗಾಗಲೇ ಹೇಳಿದಂತೆ ಅಧಿಕಾರಿಗಳನ್ನು ಗಿಡಕ್ಕೆ ಕಟ್ಟಿ ಹಾಕಿ ತೋರಿಸುತ್ತೇನೆ. ಶೀಘ್ರವೇ ಈ ಭಾಗದಲ್ಲಿ ನೀರಿನ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಭರವಸೆ ನೀಡಿದರು.

Advertisement

ಎಲ್‌ ಆ್ಯಂಡ್‌ ಟಿ ಕಂಪನಿ ಮ್ಯಾನೇಜರ್‌ ಸುಭಾಷ ಮಾತನಾಡಿ, ಕಳೆದ 10 ದಿನಗಳಿಂದ ನಗರದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ. ಹಂತ ಹಂತವಾಗಿ ಸಮಸ್ಯೆ ಪರಿಹರಿಸುತ್ತಿದ್ದೇವೆ. ಬಸವಕಾಲೋನಿ, ವೈಭವನಗರ ಪ್ರದೇಶಗಳ ಜನರಿಗೆ ಹಿಂಡಾಲಗಾದಿಂದ ನೀರು ಬರುತ್ತದೆ. ಅಲ್ಲಿಯ ಮೋಟರ್‌ ರಿಪೇರಿಗೆ ಬಂದಿದ್ದು ಅದನ್ನು ಸರಿಪಡಿಸಲಾಗಿದೆ. ಇನ್ನು ಮುಂದೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next