Advertisement

ಜನ”ಪ್ರಿಯಾ’ಳ ಗುಟ್ಟು

05:35 PM Feb 28, 2018 | Harsha Rao |

ಕಣ್ಣ ಹುಬ್ಬಿನ ಕುಣಿತದಲ್ಲೇ ಕಚಗುಳಿ ಇಟ್ಟ ಚಿಗರೆ ಪ್ರಿಯಾ ಪ್ರಕಾಶ್‌ ವಾರಿಯರ್‌. ರಾತ್ರಿ ಬೆಳಗಾಗುವ ಮುನ್ನ, ಕಣ್ಣುಜ್ಜಿ ಪಿಳುಕಿಸುವ ಮುನ್ನ ಸೆಲೆಬ್ರಿಟಿಯಾದ ಈ ಮಲಯಾಲಂ ಚೆಲುವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನ ರಾಣಿ. ಫೇಸ್‌ಬುಕ್‌ನ ಸೆಳೆತವೇ ಈಕೆಗೆ ಭಾಗ್ಯದ ಬಾಗಿಲನ್ನು ತೆರೆಸಿತಂತೆ. ಪ್ರಿಯಾ ಮನಸ್ಸು ಬಿಚ್ಚಿ ಮಾತಾಡಿದ ಸಂದರ್ಶನವೊಂದು ಇಲ್ಲಿದೆ…

Advertisement

– ಭಾರತದ ಸೋಶಿಯಲ್‌ ಮೀಡಿಯಾದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ನೀವು ಮೂರನೇ ಸ್ಥಾನದಲ್ಲಿದ್ದೀರಿ. ಹೇಗನ್ನಿಸ್ತಾ ಇದೆ?
ನನಗೆ ಆಗ್ತಿರೋ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕೋ ಗೊತ್ತಾಗ್ತಿಲ್ಲ. ನಾನು ನಟಿಸಿದ ಆ ಹಾಡು ಭಾರೀ ಯಶಸ್ವಿಯಾದ ಹಿನ್ನೆಲೆಯಲ್ಲಿ ನನ್ನ ಕಾಲೇಜಿನಲ್ಲಿ ಒಂದು ಸಮಾರಂಭವನ್ನೇ ಮಾಡಿಬಿಟ್ಟರು. ಇವೆಲ್ಲಾ ಹೊಗಳಿಕೆ, ಹಾರ- ತುರಾಯಿಗಳು ನನಗೆ ತೀರಾ ಹೊಸತು.

– ಕುಟುಂಬ, ಕಾಲೇಜು ಮತ್ತು ಓದಿನ ಬಗ್ಗೆ…
ನಾನು ತ್ರಿಶೂರ್‌ನ ವಿಮಲಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ. ಓದ್ತಾ ಇದ್ದೀನಿ. ಪೂನಕುಣ್ಣಂ ನ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು ನಾನು. ತಂದೆ, ಪ್ರಕಾಶ್‌ ಸೆಂಟ್ರಲ್‌ ಎಕ್ಸೆ„ಸ್‌ನಲ್ಲಿದ್ದಾರೆ. ತಾಯಿ, ಪ್ರೀತಾ ಗೃಹಿಣಿ. ತಮ್ಮ, ಪ್ರಸಿದ್ಧ್ ಅಂತ. ಅಜ್ಜ- ಅಜ್ಜಿಯೂ ನಮ್ಮ ಜೊತೆಗೇ ಇದ್ದಾರೆ.

– ನಿಮ್ಮ ನಟನೆ ನೋಡಿ ಸ್ನೇಹಿತರು, ಶಿಕ್ಷಕರು ಹೇಳಿದ್ದೇನು?
ಫ್ರೆಂಡ್ಸ್‌, ಶಿಕ್ಷಕರು ನನ್ನ ನಟನೆ ನೋಡಿ ತುಂಬಾ ಸಂತೋಷಪಟ್ಟರು. ಕಾಲೇಜಿನಲ್ಲಿ ಒಂಥರಾ ಸೆಲೆಬ್ರಿಟಿಯೇ ಆಗಿಬಿಟ್ಟಿದ್ದೇನೆ.  ಹಾಡಿನ ತುಣುಕು ರಿಲೀಸ್‌ ಆಗಿದ್ದೇ ತಡ, ಎಫ್ಬಿ ಮತ್ತು ಇನ್‌ಸ್ಟಾದಲ್ಲಿ ಇದ್ದಕ್ಕಿದ್ದಂತೆ ಫಾಲೋವರ್ ಜಾಸ್ತಿಯಾಗಿದ್ದಾರೆ. ಈ ಖುಷಿಗೆ ಬೆಲೆ ಕಟ್ಟಲಾಗುತ್ತಿಲ್ಲ.

– ನಿಜಜೀವನದಲ್ಲಿ ಯಾರಿಗಾದ್ರೂ ಆ ರೀತಿ ಕಣ್ಣು ಹೊಡೆದು, ಹುಬ್ಬು ಹಾರಿಸಿದ್ದೀರ?
ಅಯ್ಯಯ್ಯೋ, ಇಲ್ಲಪ್ಪಾ… ಯಾಕಂದ್ರೆ ನಾನು ಓದ್ತಾ ಇರೋದು ಮಹಿಳಾ ಕಾಲೇಜಿನಲ್ಲಿ! ಕಾಲೇಜು ಜೀವನದಲ್ಲಿ ನಾನು ಏನನ್ನೆಲ್ಲ ಮಿಸ್‌ ಮಾಡಿಕೊಳ್ತಿದ್ದೇನೋ, ಅವೆಲ್ಲ ನನಗೆ ಸಿನಿಮಾದಲ್ಲಿ ಸಿಕ್ಕಿದೆ. ಸೆಕೆಂಡ್‌ ಪಿಯುವರೆಗೂ ಕೋ- ಎಡ್‌ನ‌ಲ್ಲಿ ಓದಿದ್ದು. ಅಲ್ಲಿನ ಖುಷಿಯ ದಿನಗಳನ್ನು ಡಿಗ್ರಿಯಲ್ಲಿ ಮಿಸ್‌ ಮಾಡಿಕೊಳ್ತಾ ಇದ್ದೀನಿ.

Advertisement

– ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು?
ಮನೆಯಲ್ಲಿ ಎಲ್ಲರೂ ಆ ವಿಡಿಯೋ ನೋಡಿ, ಖುಷಿಪಟ್ಟರು. ಅಜ್ಜ- ಅಜ್ಜಿಗೆ ನನ್ನ ಮೇಲೆ ತುಂಬಾ ಹೆಮ್ಮೆ, ಸಂತೋಷ ಇದೆ. ನಟಿಯಾಗ್ಬೇಕು ಅಂತ ಬಾಲ್ಯದಿಂದಲೂ ಕನಸು ಕಂಡಿದ್ದೆ. ಬೇರೆ ಯಾವ ಕೆರಿಯರ್‌ಗೆ ಹೋಗುವ ಯೋಚನೆಯೂ ಇಲ್ಲ.

– ಸಿನಿಮಾಕ್ಕೆ ಜಿಗಿಯಲು ಫೇಸ್‌ಬುಕ್ಕೇ ಪ್ಲಾಟ್‌ಫಾರಂ ಆಯ್ತಂತೆ?
ನಿಜ. ನಾನು ಇಲ್ಲಿವರೆಗೆ 3 ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. 2017 ನನ್ನ ಪಾಲಿಗೆ ಅದೃಷ್ಟದ ವರ್ಷ. ಯಾಕಂದ್ರೆ, ಎಲ್ಲ ಕಿರುಚಿತ್ರಗಳನ್ನೂ ಆ ವರ್ಷವೇ ಮಾಡಿದ್ದು. ನಾನು ಮಾಡೆಲ್‌, ಡ್ಯಾನ್ಸರ್‌ ಕೂಡ ಹೌದು. ಮೋಹಿನಿಅಟ್ಟಂ ಅಂದ್ರೆ ತುಂಬಾ ಇಷ್ಟ. ಶಾಸ್ತ್ರೀಯ ಸಂಗೀತ ಕೂಡ ಕಲಿತಾ ಇದ್ದೀನಿ. ಫೋಟೊ, ವಿಡಿಯೊಗಳನ್ನು ಆಗಾಗ ಎಫ್ಬಿ, ಇನ್‌ಸ್ಟಾದಲ್ಲಿ ಅಪ್ಲೋಡ್‌ ಮಾಡ್ತಾ ಇದ್ದೆ. ಅದನ್ನು ನೋಡಿ ಓಮರ್‌ ಅವರು ನನಗೆ ಕರೆ ಮಾಡಿ, “ಲೀಡ್‌ ರೋಲ್‌ ಮಾಡ್ತೀರ?’ ಅಂತ ಕೇಳಿದರು. ಅದೊಂಥರ ಕನಸು ನನಸಾದ ಗಳಿಗೆ. ಕಾಲೇಜು ಫೆಸ್ಟ್‌ಗಳಲ್ಲಿ, ಮಾಡೆಲಿಂಗ್‌ನಲ್ಲಿ ಪ್ರಶಸ್ತಿಗಳು ಬಂದಿದ್ದರೂ, ಮೊದಲ ಸಿನಿಮಾದಲ್ಲೇ ಲೀಡ್‌ ರೋಲ್‌ ಸಿಗುತ್ತೆ ಅಂತ ಕಲ್ಪನೆಯೂ ಇರಲಿಲ್ಲ.

– “ಒರು ಅಡಾರ್‌ ಲವ್‌’ನ ನಿಮ್ಮ ಪಾತ್ರದ ಬಗ್ಗೆ ಹೇಳಿ
ಅಲ್ಲಿ ನನ್ನದು ಕ್ಯೂಟ್‌, ಸ್ಮಾರ್ಟ್‌ ಕಾಲೇಜು ಹುಡುಗಿ ಪಾತ್ರ. ಆ ಪಾತ್ರಕ್ಕೂ, ನನ್ನ ವ್ಯಕ್ತಿತ್ವಕ್ಕೂ ತುಂಬಾ ಹೋಲಿಕೆಯಿದೆ. ವಾಸ್ತವದಲ್ಲೂ ನಾನು ಅದೇ ರೀತಿಯ ಹುಡುಗಿ. ನನ್ನ ಜೊತೆಗೆ ನಟಿಸಿರುವ ರೋಶನ್‌ ಈಗಾಗಲೇ ತುಂಬಾ ಹೆಸರು ಮಾಡಿದ್ದಾರೆ. ಹಾಗಾಗಿ, ಸ್ವಲ್ಪ ಅಂಜಿದ್ದೆ. ಆದರೆ, ನಿರ್ದೇಶಕ ಓಮರ್‌ ಅಗತ್ಯ ಮಾರ್ಗದರ್ಶನ ನೀಡಿದರು. ಪ್ರತಿ ದೃಶ್ಯವನ್ನು ಚೆನ್ನಾಗಿ ರಿಹರ್ಸಲ್‌ ಮಾಡೋಷ್ಟು ಸಮಯಾವಕಾಶ ನೀಡಿದರು. ಕಾಲೇಜು ಕ್ಯಾಂಪಸ್‌ನಲ್ಲಿ ಹುಡುಗ- ಹುಡುಗಿ ನಡುವಿನ ಕ್ಯೂಟ್‌ ಲವ್‌ ಸ್ಟೋರಿ ಇರೋ ಸಿನಿಮಾ. ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅನ್ನೋ ಭರವಸೆ ಇದೆ. ಸಿನಿಮಾದ ಭಾಗವಾಗೋಕೆ ನಾನು ಅದೃಷ್ಟ ಮಾಡಿದ್ದೇನೆ.
(ಕೃಪೆ: ಮನೋರಮಾ)

Advertisement

Udayavani is now on Telegram. Click here to join our channel and stay updated with the latest news.

Next