ಬೆಂಗಳೂರು: “2016ರ ಮಾ. 4, ಶುಕ್ರವಾರದಂದು ನಾನು ಪ್ರಾರ್ಥನೆಯಲ್ಲಿ ತೊಡಗಿದ್ದೆ. ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿ ಬಂದಿದ್ದರಿಂದ ಬೆಚ್ಚಿಬಿದ್ದು ಪ್ರಾರ್ಥನಾ ಮಂದಿರದಿಂದ ಹೊರಗೆ ಬಂದೆ. ಕೆಲವು ಅಪರಿಚಿತರು ನನ್ನನ್ನು ಅಪಹರಿಸಿ ಒಂದು ವೃದ್ಧಾಶ್ರಮಕ್ಕೆ ಕರೆದೊಯ್ದರು. ಅಲ್ಲಿ ರಕ್ತದ ಕೋಡಿಯೇ ಹರಿದಿತ್ತು. ನನ್ನ ಕಣ್ಣ ಮುಂದೆಯೇ ನಾಲ್ವರ ಹತ್ಯೆ ನಡೆದಿತ್ತು, ಮುಂದಿನ ಸರದಿ ನನ್ನದೇ ಎಂದು ಮನಸ್ಸಿನಲ್ಲಿ ತೀರ್ಮಾನಿಸಿದ್ದೆ’.
– ಇದು ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ 556 ದಿನ ನರಕಯಾತನೆ ಅನುಭವಿಸಿ ಬಿಡುಗಡೆ ಯಾಗಿರುವ ಕೇರಳ ಮೂಲದ ಫಾದರ್ ಟಾಮ್ ಉಳುನ್ನಲಿಲ್ ಅವರ ಮಾತುಗಳು.
ಡಾನ್‌ಬಾಸ್ಕೋ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಉಗ್ರರ ವಶದಲ್ಲಿದ್ದಾಗ ಪ್ರತಿನಿತ್ಯ ರಕ್ತದ ಕೋಡಿ ಕಣ್ಣಾರೆ ಕಂಡು ತಮ್ಮ ಕಥೆಯೂ ಇದೇ ಎಂಬುದನ್ನು ನಿರ್ಧರಿಸಿ ದಿನ ಕಳೆಯುತ್ತಿದ್ದ ಬಗ್ಗೆ ಹಾಗೂ ಪ್ರಪಂಚದ ಸಂಪರ್ಕವೇ ಇಲ್ಲದೆ 18 ತಿಂಗಳುಗಳ ಕಾಲ ಒಂದು ಕಡೆಯಿಂದ ಮತ್ತೂಂದು ಕಡೆಗೆ ಕರೆದೊಯ್ದ ಭಯಾನಕ ಸತ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಯೆಮೆನ್‌ನಲ್ಲಿ ತಮ್ಮನ್ನು ಅಪಹರಿಸಿದ ಗುಂಪು, ಅನಂತರ ತಮ್ಮನ್ನು ವೃದ್ಧಾಶ್ರಮಕ್ಕೆ ಕರೆದೊಯ್ದಿತು. ಈ ವೃದ್ಧಾಶ್ರಮ ಏಳು ಸುತ್ತಿನ ಕೋಟೆಯಂತಿತ್ತು. ಸುತ್ತಲೂ ಬಿಗಿ ಭದ್ರತೆ ಇತ್ತು. ಅಲ್ಲದೆ, ವೃದ್ಧಾಶ್ರಮದಲ್ಲಿ ಎಲ್ಲೆಂದರಲ್ಲಿ ರಕ್ತವೇ ಕಾಣುತ್ತಿತ್ತು. ನನ್ನನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬ ನನ್ನ ಪರಿಚಯ ಕೇಳಿದ. ನಾನು ಭಾರತೀಯ ಎಂದು ಪರಿಚಯಿಸಿಕೊಂಡೆ. ಆ ಇಡೀ ಪ್ರದೇಶವಂತೂ ಭಯಾನಕವಾಗಿತ್ತು. ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡೆ. ಅಲ್ಲಿ ರಕ್ತ ಸಾಮಾನ್ಯ. ನನ್ನ ಎದುರೇ ಕೊಲೆಗಳನ್ನು ಮಾಡುತ್ತಿದ್ದರು’.
ವೃದ್ಧಾಶ್ರಮದಿಂದ ಆ ಗುಂಪು ನನ್ನನ್ನು ಮತ್ತೂಂದು ಭಯೋತ್ಪಾದಕ ಗುಂಪಿಗೆ ಹಸ್ತಾಂತರಿಸಿತು. ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನನ್ನ ಕಣ್ಣು ಕಟ್ಟಿ ಕರೆದೊಯ್ಯಲಾಗುತ್ತಿತ್ತು. ಒಮ್ಮೊಮ್ಮೆ ಕೈ ಕಾಲು ಕಟ್ಟಿ ಊಟ ನೀಡಲಾಗುತ್ತಿತ್ತು. ಪದೇ ಪದೇ ಸ್ಥಳ ಬದಲಾವಣೆ ಮಾಡಲಾಗುತ್ತಿತ್ತು. ಅವರು ಅರೆಬಿಕ್ ಮಾತನಾಡುತ್ತಿದ್ದರು. ನಾನು ಇಂಗ್ಲಿಷ್ ಮಾತನಾಡುತ್ತಿದ್ದೆ. ಅರೆಬಿಕ್‌ನಲ್ಲಿ ಅವರೊಂದಿಗೆ ಸಂವಹನ ನಡೆಸಲು ಕಷ್ಟವಾಗುತ್ತಿತ್ತು. ಇಷ್ಟರ ನಡುವೆಯೂ ನಾನು ಅನಾರೋಗ್ಯ ಪೀಡಿತನಾಗಿದ್ದಾಗ ಹಾಗೂ ರಮ್ಜಾನ್ ಮಾಸದಲ್ಲಿ ಔಷಧ ಮತ್ತು ಆಹಾರ ಸರಿಯಾಗಿ ನೀಡಿ, ನೋಡಿಕೊಂಡಿದ್ದರು’ ಎಂದರು.
ಇಡೀ ವಿಶ್ವದ ಜನತೆ ನನಗಾಗಿ ಪ್ರಾರ್ಥಿಸುತ್ತಿದ್ದುದ ರಿಂದ ಉಗ್ರರಿಗೂ ನನ್ನನ್ನು ಏನೂ ಮಾಡಲಾಗಲಿಲ್ಲ. ಹೀಗಾಗಿಯೇ, ನಾನು ಸಾವಿನ ಮನೆಯಿಂದ ಬಿಡುಗಡೆಯಾಗಿ ಬಂದೆ. ಜನರ ಪ್ರಾರ್ಥನೆಯೇ ನನ್ನನ್ನು ಉಳಿಸಿತು. ಜನರ ಪ್ರಾರ್ಥನೆಗೆ ಅಷ್ಟು ಶಕ್ತಿಯಿದೆ’ ಎಂದು ಬಣ್ಣಿಸಿದರು.
ಉಗ್ರರ ವಶದಲ್ಲಿದ್ದ ತನ್ನ ಬಿಡುಗಡೆಗೆ ಸಹಾಯ ಮಾಡಿದ ಪ್ರಧಾನಿ ಮೋದಿ, ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೂ ಟಾಮ್ ಕೃತಜ್ಞತೆ ಸಲ್ಲಿಸಿದರು. ಯೆಮೆನ್ ಉಗ್ರರಿಂದ ಬಿಡುಗಡೆಯಾಗಿದ್ದ 59 ವರ್ಷದ ಫಾದರ್ ಟಾಮ್ ವ್ಯಾಟಿಕನ್ ಸಿಟಿಯ ಮೂಲಕ ಗುರುವಾರ ದಿಲ್ಲಿಗೆ ಬಂದಿಳಿದಿದ್ದರು.