ಕನಕಪುರ: ನಗರಸಭೆ ಅಧಿಕಾರಿಗಳ ಬೇಜವಾ ಬ್ದಾರಿಯಿಂದ ಅಗೆದು ಹಾಕಿರುವ ರಸ್ತೆ ಗುಂಡಿಗಳು, ಸಾರ್ವಜನಿಕರ ಪ್ರಾಣಕ್ಕೆ ಕಂಟಕ ಪ್ರಾಯವಾಗಿ ಪರಿಣಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯುಜಿಡಿ ಕಾಮಗಾರಿ ನೆಪದಲ್ಲಿ ಹೆದ್ದಾರಿ ರಸ್ತೆ ಅಗೆದು ಹಾಕಿರುವ ನಗರಸಭೆ ಅಧಿಕಾರಿಗಳು, ತಿಂಗಳು ಕಳೆದರೂ, ರಸ್ತೆ ಸರಿಯಾಗಿ ಮುಚ್ಚದೆ ಹೆದ್ದಾರಿಯಲ್ಲಿ ಓಡಾಡುವ ಸವಾರರು ಅಪಘಾತಕ್ಕೀಡಾಗುವ ಪರಿಸ್ಥಿತಿ ನಿರ್ಮಾಣ ಮಾಡಿರುವ ನಗರಸಭೆ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ನಗರದಲ್ಲಿ ಕೊಳಾಯಿ ಸಂಪರ್ಕ, ದುರಸ್ತಿ, ಯುಜಿಡಿ ಕಾಮಗಾರಿ ಸೇರಿದಂತೆ ನಾನಾ ಕಾರಣಗಳಿಗೆ ರಸ್ತೆಯನ್ನು ಅಗೆಯುವ ನಗರಸಭೆ ಅಧಿಕಾರಿಗಳು ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಇರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.
ಕಾಟಾಚಾರಕ್ಕೆ ಗುಂಡಿ ಮುಚ್ಚಿದ್ದಾರೆ: ಯಾವುದೇ ರಸ್ತೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಮುನ್ನ ಯುಜಿಡಿ ಮತ್ತು ಕೊಳಾಯಿ ಸಂಪರ್ಕ ಕಲ್ಪಿಸಿ ನಂತರ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಆದರೆ, ನಗರಸಭೆ ಅಧಿಕಾರಿಗಳು ಅಭಿವೃದ್ಧಿಯಾಗಿರುವ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಗುಂಡಿಗಳು ಬಿದ್ದಿದ್ದರೂ, ಅದರ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ರಸ್ತೆಗಳನ್ನು ಅಗೆದು ಕೆಲಸ ಮುಗಿದ ನಂತರ ಕಾಟಾಚಾರಕ್ಕೆ ಗುಂಡಿ ಮುಚ್ಚಿ ಕೈತೊಳೆದುಕೊಳ್ಳುವ ಅಧಿಕಾರಿಗಳು, ರಸ್ತೆ ಗುಂಡಿ ಸರಿಯಾಗಿ ಮುಚ್ಚಿದ್ದಾರೂ, ಇಲ್ಲವೂ ಎಂದು ತಿರುಗಿ ಸಹ ನೋಡುವುದಿಲ್ಲ ಎಂಬುದು ಸಾರ್ವಜನಿಕರಿಂದ ಕೇಳಿ ಬಂದಿರುವ ಆರೋಪ.
ಕಾಮಗಾರಿ ನೆಪದಲ್ಲಿ ರಸ್ತೆ ಅಗೆದ ಅಧಿಕಾರಿಗಳು: ನಗರದ ಕೆಎನ್‌ಎಸ್ ವೃತ್ತದ ಸಮೀಪವಿರುವ ಎಸ್‌ಬಿಎಂ ಬ್ಯಾಂಕಿನ ಮುಂಭಾಗದಲ್ಲಿ 209 ರಾಷ್ಟ್ರೀಯ ಹೆದ್ದಾರಿ ರಸ್ತೆ ಯುಜಿಡಿ ಕಾಮಗಾರಿ ನೆಪದಲ್ಲಿ ಅಗೆದು ಹಾಕಿರುವ ನಗರಸಭೆ ಅಧಿಕಾರಿಗಳು, ಗುಂಡಿಗಳನ್ನು ಮುಚ್ಚದೆ ಇರುವುದು ಸಾರ್ವಜನಿಕರ ಪ್ರಾಣಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಯುಜಿಡಿ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದ ನಗರಸಭೆ ಅಧಿಕಾರಿಗಳು ಕಾಮಗಾರಿ ಮುಗಿದು ತಿಂಗಳು ಕಳೆದರೂ ರಸ್ತೆ ಗುಂಡಿಯನ್ನು ಸರಿಯಾಗಿ ಮುಚ್ಚಿ ಸಮತಟ್ಟು ಮಾಡುವ ಗೋಜಿಗೆ ಹೋಗಿಲ್ಲ.
ಹೆದ್ದಾರಿ ರಸ್ತೆ ದುರಸ್ತಿಗೊಳಿಸಿ: ಗುಂಡಿ ಬಗೆದ ಮಣ್ಣನ್ನು ಬೇಕಾಬಿಟ್ಟಿಯಾಗಿ ಹಾಕಿರುವುದು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಹೆದ್ದಾರಿಯಲ್ಲಿ ವೇಗವಾಗಿ ಓಡಾಡುವ ಸವಾರರು ಗುಂಡಿಗಳಲ್ಲಿ ವಾಹನಗಳನ್ನು ಚಲಾಯಿಸಿ ಸ್ವಲ್ಪದರಲ್ಲೇ ಅಪಾಯಗಳಿಂದ ಪಾರಾಗಿರುವ ಉದಾಹರಣೆಗಳು ಸಾಕಷ್ಟಿವೆ. ವಾಹನ ಸವಾರರು ಅಪಘಾತಕ್ಕೀಡಾಗಿ ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆದ್ದಾರಿ ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಸಾರ್ವ ಜನಿಕರ ಆಗ್ರಹ.