ಕೋಲಾರ: ಬೆಂಗಳೂರಿನ ಐಎಂಎ ಜುವೆಲರಿಯಲ್ಲಿ ಹಣ ಹೂಡಿಕೆ ಮಾಡಿ ಜಿಲ್ಲೆಯ ನೂರಾರು ಮಂದಿ 100 ಕೋಟಿ ರೂ.ಗೂ ಅಧಿಕ ಹಣ ಕಳೆದು ಕೊಂಡಿರುವ ಮಾಹಿತಿ ಲಭ್ಯವಾಗುತ್ತಿದೆ. ಈಗಾಗಲೇ ಮಾಲೂರು ತಾಲೂಕಿನ ಹಲವರು ಬಹಿರಂಗವಾಗಿ ಐಎಂಎಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಕುರಿತು ದೂರಿದ್ದಾರೆ. ಆದರೆ, ಇದಕ್ಕಿಂತಲೂ 20 ಪಟ್ಟು ಜನ ಐಎಂಎಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವುದನ್ನು ಬಹಿರಂಗವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮೂಕಾಂಬಿಕಾ ಮೋಸ: 30 ವರ್ಷಗಳ ಹಿಂದೆ ಕೋಲಾರದ ಪಿ.ಸಿ. ಬಡಾವಣೆಯಲ್ಲಿ ತಮಿಳುನಾಡು ಮೂಲದ ಕೆಲವರು ಮನೆಯೊಂದನ್ನು ಬಾಡಿಗೆ ಪಡೆದು ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತು ನೀಡುವ ಆಮಿಷ ತೋರಿಸಿ, ಆರಂಭದಲ್ಲಿ ನೂರು ಇನ್ನೂರು ಠೇವಣಿ ಇಟ್ಟವರಿಗೆ ಸರಿಯಾಗಿ ಒಂದು ತಿಂಗಳ ಅದೇ ದಿನಾಂಕಕ್ಕೆ ಠೇವಣಿಗಿಂತಲೂ ಹತ್ತು ಪಟ್ಟು ಮೌಲ್ಯದ ವಸ್ತುಗಳನ್ನು ನೀಡುವುದಾಗಿ ಸಂಸ್ಥೆ ಹೇಳಿತ್ತು.
ಆರಂಭದಲ್ಲಿ ನೂರು ಇನ್ನೂರು ನೀಡಿ ಗೃಹೋಪಯೋಗಿ ವಸ್ತುಗಳನ್ನು ಪಡೆದುಕೊಂಡಿದ್ದವರು ಆನಂತರ ಸಾವಿರಾರು ರೂ. ಅನ್ನು ಸಂಸ್ಥೆಯಲ್ಲಿ ತೊಡಗಿಸಿದ್ದರು. ಕಡಿಮೆ ದರಕ್ಕೆ ಮಾರುತಿ ಕಾರು ನೀಡುವುದಾಗಿ ಪ್ರಕಟಿಸಿದ್ದ ಸಂಸ್ಥೆಯು, ಕಾರು ನಿಲ್ಲಿಸಲು ಶೆಡ್ ನಿರ್ಮಾಣವನ್ನು ಮಾಡುತ್ತಿತ್ತು. ಕಚೇರಿ ಕೆಲಸಕ್ಕೆ ಸ್ಥಳೀಯರನ್ನೇ ನೇಮಕ ಮಾಡಿಕೊಂಡಿತ್ತು. ಸಂಸ್ಥೆಯು ಇಲ್ಲೇ ಉಳಿಯುತ್ತದೆ ಎಂದು ಭಾವಿಸಿದ್ದ ಜನ ಆಗಿನ ಕಾಲಕ್ಕೆ ನೂರಾರು ಮಂದಿ ಕೋಟ್ಯಂತರ ರೂ. ಅನ್ನು ಮೂಕಾಂಬಿಕೆ ಸಂಸ್ಥೆಯಲ್ಲಿ ತೊಡಗಿಸಿದ್ದರು.
ದೊಡ್ಡ ಮೊತ್ತ ಕ್ರೋಡೀಕರಣವಾಗುತ್ತಿದ್ದಂತೆ ನಾಲ್ಕು ಮಂದಿ ಸುಳಿವು ನೀಡದೆ ಕಾರು ಸಮೇತ ರಾತ್ರೋ ರಾತ್ರಿ ನಾಪತ್ತೆಯಾಗಿದ್ದರು. ಅಳಿದುಳಿದ ವಸ್ತುಗಳನ್ನು ಕೆಲವರು ಕೈಗೆ ಸಿಕ್ಕಷ್ಟು ದೋಚಿದರು. ಬಹುತೇಕ ಕೋಲಾರಕ್ಕೆ ಆಘಾತ ತಂದಿದ್ದ ಈ ಘಟನಾವಳಿ ನೆನಪಿದ್ದವರು ಯಾರೂ ಸುಲಭದ ಆಮಿಷಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿರಲಿಲ್ಲ. ಇದರ ಭೀತಿಯಲ್ಲಿ ಹತ್ತಾರು ವರ್ಷ ಕಾಲ ಕೋಲಾರದಲ್ಲಿ ಯಾವುದೇ ಬ್ಲೇಡ್ ಕಂಪನಿ ತಲೆ ಎತ್ತಿರಲಿಲ್ಲ.
ಹಲವು ಕಂಪನಿಗಳ ಮೋಸ: ಮೂಕಾಂಬಿಕೆ ಸಂಸ್ಥೆಯ ಮೋಸದ ನಂತರ ಕೋಲಾರ ಜನತೆ ಒಂದಷ್ಟು ಹುಷಾರಾಗಿದ್ದರೂ, ಅವರನ್ನು ವಿವಿಧ ರೀತಿಯಲ್ಲಿ ಮರಳು ಮಾಡುವ ಸಂಸ್ಥೆಗಳು ಆಗಾಗ್ಗೆ ವಿವಿಧ ರೂಪಗಳಲ್ಲಿ ತಲೆ ಎತ್ತುತ್ತಲೇ ಇವೆ. ಕೆಲವರು ದೀಪಾವಳಿ, ತಿಂಗಳ ಚೀಟಿ, ಲಕ್ಕಿ ಡ್ರಾ, ವಾಹನಗಳ ಚೀಟಿ, ವಿದೇಶ ಪ್ರವಾಸದ ಚೀಟಿ, ದುಬಾರಿ ಬಡ್ಡಿ ಚೀಟಿ ಹೆಸರಿನಲ್ಲಿ ಮೋಸ ಹೋಗುತ್ತಿರುವುದು, ಆನ್‌ಲೈನ್ ವಂಚನೆ… ನಡೆದೇ ಇದೆ. ಮೋಸ ಹೋಗುವವರು ಇರುವಷ್ಟು ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದು ಕೋಲಾರದಲ್ಲಿ ನಡೆದ ಅನೇಕ ಘಟನೆಗಳು ಸಾಬೀತು ಮಾಡಿವೆ.
ಪೈಸೆಯೂ ವಾಪಸ್ ಬಂದಿಲ್ಲ: ಇವೆಲ್ಲಾ ಘಟನೆಗಳ ನಡುವೆಯೂ ಬಹುರಾಷ್ಟ್ರೀಯ ಕಂಪನಿಗಳ ಸ್ಪರೂಪದಲ್ಲಿ ಕೋಲಾರಕ್ಕೆ ಕಾಲಿಟ್ಟ ಸ್ವಯಂಕೃಷಿ, ಅಗ್ರಿ ಗೋಲ್ಡ್ನಂತ ಮತ್ತಿತರ ಸಂಸ್ಥೆಗಳ ಮೂಲಕವೂ ಜಿಲ್ಲೆಯ ಜನತೆ ಕೋಟ್ಯಂತರ ರೂ. ತೊಡಗಿಸಿ ಮೋಸ ಹೋಗಿದ್ದರು. ಈ ಸಂಸ್ಥೆಗಳಲ್ಲಿ ಹಣ ತೊಡಗಿಸಿದ್ದವರು ಈಗಲೂ ಹಣ ಬರುವಿಕೆಗಾಗಿ ಕಾದಿದ್ದಾರೆಯೇ ಹೊರತು ಒಂದು ಪೈಸೆಯೂ ವಾಪಸ್ ಬಂದಿಲ್ಲ.
ಮೋಸ ಮಾಡಿದವನಿಗೆ ಥಳಿತ: 15 ದಿನಗಳ ಹಿಂದಷ್ಟೇ ಹೊಸಕೋಟೆ ಮೂಲದ ವ್ಯಕ್ತಿಯೊಬ್ಬರು ವೇಮಗಲ್, ನರಸಾಪುರ ಭಾಗದ ನೂರಾರು ರೈತರಿಂದ ಸೌಹಾರ್ದ ಸಹಕಾರ ಬ್ಯಾಂಕ್ ನೆಪದಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ ಮೋಸ ಮಾಡಿ, ಕೋಲಾರಕ್ಕೆ ಬಂದು ಶಾಖೆ ಆರಂಭಿಸಿದ್ದರು. ಇದನ್ನು ಗಮನಿಸಿದ್ದ ಜನತೆ ಆ ವ್ಯಕ್ತಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿ ಹಣ ವಾಪಸ್ ಮಾಡುವ ವಾಗ್ಧಾನ ಪಡೆದುಕೊಂಡಿದ್ದರು.
● ಕೆ.ಎಸ್.ಗಣೇಶ್