Advertisement

ಮಾದಿಗ ಸಮುದಾಯದವರು ಜಾಗೃತರಾಗಿ

12:22 PM May 10, 2017 | Team Udayavani |

ತಿ.ನರಸೀಪುರ: ರಾಜ್ಯದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ಇನ್ನೂ ಹಿಂದುಳಿದಿರುವ ಮಾದಿಗ ಸಮುದಾಯದವರು ಜಾಗೃತರಾಗಿ, ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನಾ ಹೇಳಿದರು.

Advertisement

ಪಟ್ಟಣದ ಬಾಬು ಜಗಜೀವನ್‌ರಾಂ ಸಮುದಾಯ ಭವನದಲ್ಲಿ ಎನ್‌.ರಾಚಯ್ಯ ವಿವಿಧೋದ್ದೇಶ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ಎನ್‌.ರಾಚಯ್ಯರ 97ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮುದಾಯದಲ್ಲಿನ ಜನರಲ್ಲಿ ರಾಜಕೀಯ ಬದ್ಧತೆ ಹಾಗೂ ರಾಜಕೀಯ ಚಿಂತನೆ ಕ್ಷಿಣಿಸುತ್ತಿದ್ದು, ಬದಲಾಗುವ ರಾಜಕೀಯ ಸನ್ನಿವೇಶಗಳ ತಾಳಕ್ಕೆ ತಕ್ಕಂತೆ ಗೊಂಬೆಗಳಾಗಿ ವರ್ತಿಸುವುದರಿಂದ ರಾಜಕೀಯ ಪಕ್ಷಗಳಲ್ಲಿನ ಪ್ರಾತಿನಿಧ್ಯವೂ ಕುಗ್ಗುತ್ತಿದೆ. ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿಕ್ಕೂ ಸಾಧ್ಯವಾಗದೆ ರಾಜಕೀಯ ಅಧಿಕಾರ ಕೈ ತಪ್ಪುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಜಾತಿವಾರು ಗಣತಿಯ ಮಾಹಿತಿಯಂತೆ ರಾಜ್ಯದಲ್ಲಿ 35 ಲಕ್ಷದಷ್ಟು ಜನಸಂಖ್ಯೆ ಇರುವ ಮಾದಿಗ ಸಮುದಾಯದಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಜನಸಂಖ್ಯೆ ಗನುಗುಣವಾಗಿ ಸಂಸದರು, ಶಾಸಕರು, ಪುರಪಿತೃಗಳು, ಜಿಪಂ ಹಾಗೂ ತಾಪಂ ಸದಸ್ಯರು ಕೂಡ ಆಯ್ಕೆಯಾಗುತ್ತಿಲ್ಲ ಎಂದು ತಿಳಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಂದ ಕಲಿತದ್ದನ್ನೇ ಎನ್‌.ರಾಚಯ್ಯ ನನಗೆ ಹೇಳಿಕೊಟ್ಟಿದ್ದಾರೆ. ರಾಜಕೀಯ ಜೀವನದುದ್ದಕ್ಕೂ ಆತ್ಮವಂಚನೆ ಮಾಡಿಕೊಂಡು ರಾಜಕಾರಣ ಮಾಡಿಲ್ಲ. ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದಿಲ್ಲ. ರಾಜ್ಯದಲ್ಲಿ ಸಮುದಾಯದ ಏಕೈಕ ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಗೊಂಡಿದ್ದೇನೆ. ಸಮುದಾಯದ ಪರವಾಗಿ ಶಾಸನಸಭೆಯಲ್ಲಿ ಹೋರಾಟ  ಮಾಡುತ್ತೇನೆ ಎಂದರು.

Advertisement

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಕೆ.ಲೋಲಾಕ್ಷಿ ಮಾತನಾಡಿ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಆರಂಭಿಸಿದ ಅಂಬೇಡ್ಕರ್‌ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯ  ಕಲ್ಪಿಸದಿದ್ದರೆ ದಲಿತ ಸಮುದಾಯಗಳು ಬಲಾಡ್ಯರ ಕಾಲಿನ ಚಂಡುಗಳಾಗುತ್ತಿದ್ದರು ಎಂದು ಹೇಳಿದರು.

ಎನ್‌.ರಾಚಯ್ಯ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಾಜಪ್ಪಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕನಿಷ್ಠ 500 ಸದಸ್ಯರನ್ನು ನೋಂದಾಯಿಸಿ 5 ಲಕ್ಷ ರೂಗಳ ಷೇರು ಧನವನ್ನು ಸಂಗ್ರಹಿಸಿ ಸಹಕಾರಿ ಬ್ಯಾಂಕ್‌ ಆರಂಭಿಸುವ ಗುರಿಯಿದೆ. ತಾಲೂಕಿನಲ್ಲಿರುವ ಸಮುದಾಯದ ಜನರು 500 ರೂಗಳ ಷೇರುಧನದೊಂದಿಗೆ ಷೇರುದಾರರಾಗಬೇಕು.

ಪಟ್ಟಣದ ವಿವೇಕಾನಂದ ನಗರದಲ್ಲಿರುವ ಸಂಘದಲ್ಲಿ ಗ್ರಾಹಕ ಸೇವಾ ಕೇಂದ್ರವನ್ನು ಆರಂಭಿಸಿ, ಅಂತಜಾಲ ಸೇವೆಯನ್ನು ನೀಡುತ್ತಿದ್ದೇವೆ. ಸಮುದಾಯದ ಆರ್ಥಿಕ ಪ್ರಗತಿಯೊಂದಿಗೆ ಹಲವು ಸಮಾಜಸೇವಾ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ನಡೆಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಆರ್‌.ಪ್ರಕಾಶ್‌ಕುಮಾರ್‌, ತಾಪಂ ಸದಸ್ಯ ಹೆಚ್‌.ಜವರಯ್ಯ, ಪುರಸಭಾ ಸದಸ್ಯ ಸಿ.ಮಹದೇವ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ನಿರ್ದೇಶಕ ಶಿವಮೂರ್ತಿ, ಹಾಸನ ಬಾಬೂಜಿ ಸಮುದಾಯ ಸಂಘದ ಜಿಲ್ಲಾಧ್ಯಕ್ಷ ಬಸವರಾಜು, ಗ್ರಾಪಂ ಸದಸ್ಯ ಹೊಸಹಳ್ಳಿ ಮಾದೇಶ, ಮಾಜಿ ಸದಸ್ಯ ದೇಮಳ್ಳಿ ರಾಚಯ್ಯ, ಎನ್‌.ರಾಚಯ್ಯ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಡಾ.ಬಿ.ಪ್ರದೀಪ, ಕಾರ್ಯದರ್ಶಿ ವಜ್ರಪ್ಪ, ನಿರ್ದೇಶಕರಾದ ರಾಹುಲ್‌ ಬಾಲು, ನಿಂಗರಾಜು, ಶಿವಣ್ಣ, ಲಕ್ಷ್ಮೀ, ನಾಗಮ್ಮ, ಟಿ.ರವಿ, ಮುಖಂಡರಾದ ತಲಕಾಡು ಕೆಂಪರಾಜು, ಭೈರಾಪುರ ಶೇಷಯ್ಯ, ಮಹೇಶ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next