ಬೆಂಗಳೂರು: ಬಸವಣ್ಣನವರು, ಕನಕದಾಸರು, ಕುವೆಂಪುರಂತಹ ಮಹನೀಯ ರನ್ನು ಕಂಡಿರುವ ಕರ್ನಾಟಕದ ಜನರು ಉದಾರ ಗುಣವುಳ್ಳವರು ಎಂದು ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹೇಳಿದರು.
ಎನ್‌ಡಿಎ ಹಾಗೂ ಇತರ ಪಕ್ಷಗಳ ಬೆಂಬಲದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಅವರು ರವಿವಾರ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಬೆಂಬಲ ಕೋರಿದ್ದು, ತನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ರವಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಅವರು, ಖಾಸಗಿ ಹೊಟೇಲ್‌ನಲ್ಲಿ ಜರಗಿದ ಬಿಜೆಪಿ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ತಮ್ಮನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ತಾವು ಬುಡಕಟ್ಟು ಹಿನ್ನೆಲೆಯಿಂದ ಹಂತ ಹಂತವಾಗಿ ರಾಜಕೀಯ ವಾಗಿ ಬೆಳೆದಿರುವ ಬಗ್ಗೆ ತಿಳಿಸಿದರು.
ರಾಷ್ಟ್ರಪತಿ ಹುದ್ದೆಯ ಮಹತ್ವದ ಜವಾಬ್ದಾರಿ ಯನ್ನು ನೀಡಲು ಬಿಜೆಪಿ ಹಾಗೂ ಎನ್‌ಡಿಎ ಬೆಂಬಲಿತ ಪಕ್ಷಗಳು ತೀರ್ಮಾನಿಸಿದ್ದು, ದೇಶ ಸೇವೆಗೆ ಒಂದು ಅವಕಾಶ ನೀಡಿವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ದ್ರೌಪದಿ ಮುರ್ಮು ಅವರು, ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಸಾಕಷ್ಟು ಪರಿಶ್ರಮದಿಂದ ಮೇಲೆ ಬಂದಿದ್ದು, ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಅವರು ಸ್ಪಷ್ಟ ಬಹುಮತದಿಂದ ಚುನಾಯಿತ ರಾಗುವ ವಿಶ್ವಾಸವಿದೆ ಎಂದರು.
ಮಾಡಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದ ಗೌಡ ಮತ್ತಿತರರಿದ್ದರು.
ದ್ರೌಪದಿ ಅವರು ರವಿವಾರ ರಾತ್ರಿಯೇ ದಿಲ್ಲಿಗೆ ವಾಪಸ್ ಮರಳಿದ್ದಾರೆ.
ಬೆಂಬಲ ಸೂಚಿಸಿದ ಸುಮಲತಾ
ದ್ರೌಪದಿ ಅವರನ್ನು ಖಾಸಗಿ ಹೊಟೇಲ್‌ನಲ್ಲಿ ಭೇಟಿ ಮಾಡಿದ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅವರು ತಮ್ಮ ಬೆಂಬಲ ಘೋಷಿಸಿದ್ದಾರೆ.