ಕುಮಟಾ: ಜಿಲ್ಲಾ ಮಧ್ಯವರ್ತಿ ಸ್ಥಳ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಸೂಕ್ತ ಜಾಗವಿಲ್ಲದೇ, ನಿಲ್ದಾಣದ ಸುತ್ತ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಹೊಸ ಬಸ್ ನಿಲ್ದಾಣದಲ್ಲಿ ಬಸ್‌ಗಿಂತ ಅಧಿಕ ದ್ವಿಚಕ್ರ ವಾಹನಗಳ ನಿಲುಗಡೆಯಾಗುತ್ತಿದೆ. ಬೈಕ್ ನಿಲ್ಲಿಸಿ ಮೂರ್ನಾಲ್ಕು ದಿನ ಬೇರೆ ಬೇರೆ ಪ್ರದೇಶಗಳಿಗೆ ತೆರಳುವವರೂ ಇದ್ದಾರೆ. ಅದಲ್ಲದೇ, ಈ ಹಿಂದೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಬೈಕ್‌ಗಳು ಕಳುವಾದ ಘಟನೆಯೂ ನಡೆದಿದೆ. ಹೀಗಿರುವಾಗ ಇಲ್ಲಿರುವ ಬೈಕ್ ಗಳನ್ನು ಕಾಯುವವರು ಯಾರು ಎಂಬ ಪ್ರಶ್ನೆ ವಾಹನಸವಾರರದ್ದಾಗಿದ್ದು, ಇದರ ಬಗ್ಗೆ ಯಾವ ಅಧಿಕಾರಿಗಳೂ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿ. ರ್
ಬೇಕಾಬಿಟ್ಟಿ ನಿಲುಗಡೆ: ದ್ವಿಚಕ್ರ ವಾಹನ ಸವಾರರು ಬಸ್ ನಿಲ್ದಾಣದಲ್ಲಿ ಜಾಗವಿದ್ದೆಡೆ ನಿಲ್ಲಿಸುವುದರಿಂದ ಅವರು ಮರಳಿ ಬರುವ ತನಕ ಮುಂಬದಿ ವಾಹನಗಳನ್ನು ತೆಗೆಯುವಂತಿಲ್ಲ. ಇದರಿಂದ ಪ್ರತಿದಿನವೂ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ಬಸ್ ನಿಲ್ದಾಣದಲ್ಲಿ ಸೂಕ್ತ ಸ್ಥಳ ನಿಗದಿಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.
ಬೇಕಾಬಿಟ್ಟಿಯಾಗಿ ಬೈಕ್ ಪಾರ್ಕಿಂಗ್ ನಿಂದ ಬಸ್ ತಿರುಗಿಸಲು ಮತ್ತು ಆಗಮನ, ನಿರ್ಗಮನಕ್ಕೆ ಅಡಚಣೆಯಾಗಿದೆ. ಕೆಲವೊಮ್ಮೆ ಪುಂಡಾಟದ ಯುವಕರು ನಿಲ್ದಾಣದ ಸೆಕ್ಯುರಿಟಿ ಗಾರ್ಡ್ ಮತ್ತು ಪೊಲೀಸರ ಮಾತಿಗೂ ಕ್ಯಾರೇ ಎನ್ನದೆ, ವಾಹನಗಳನ್ನು ಕಂಡಕಂಡಲ್ಲಿ ಪಾರ್ಕ್ ಮಾಡುತ್ತಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಿಸಿ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಪಾರ್ಕಿಂಗ್‌ಗೆ ಟೆಂಡರ್ ನೀಡಿ: ಬಸ್ ನಿಲ್ದಾಣದಲ್ಲಿ ಬೈಕ್ ಪಾರ್ಕಿಂಗ್‌ಗೆ ಖಾಸಗಿ ಗುತ್ತಿಗೆದಾರರಿಗೆ ಟೆಂಡರ್ ನೀಡಿ, ಅತಿ ಕಡಿಮೆ ದರದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಕಂಡಕಂಡಲ್ಲಿನ ಬೈಕ್ ನಿಲುಗಡೆ ಕಡೆಮೆಯಾಗಲಿದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ನಿಲ್ದಾಣ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಸಂಸ್ಥೆ ವತಿಯಿಂದ ಒಬ್ಬ ಸೆಕ್ಯೂರಿಟಿ ನೇಮಕ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಕಟ್ಟಡ ಕಾಮಗಾರಿ ಚಾಲ್ತಿಯಲ್ಲಿರುವುದರಿಂದ ಸ್ವಲ್ಪದಿನ ಈ ಅಡಚಣೆ ಮುಂದುವರೆಯಬಹುದು. ಸಾರ್ವಜನಿಕರೂ ಸಹಕಾರ ನೀಡಬೇಕು
.-ಸೌಮ್ಯ ನಾಯಕ, ಡಿಪೋ ಮ್ಯಾನೇಜರ್
-ಕೆ. ದಿನೇಶ ಗಾಂವ್ಕರ