Advertisement

ಕೆಎಫ್‌ಡಿ ಗುಮ್ಮ-ಲಸಿಕೆ ಹಾಕಿಸ್ಕೋ ತಮ್ಮ!

02:38 PM Jan 14, 2020 | Suhan S |

ಶಿವಮೊಗ್ಗ: ಜನರ ಅಸಹಕಾರದಿಂದ ಮತ್ತೂಮ್ಮೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಅಥವಾ ಮಂಗನ ಕಾಯಿಲೆಯು ಮಲೆನಾಡಿನಲ್ಲಿ ತನ್ನ ಆರ್ಭಟ ಮುಂದುವರಿಸಿದೆ. ಕಳೆದ ಬಾರಿ 20ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ ಜನರಲ್ಲಿ ತಿಳಿವಳಿಕೆ ಮೂಡಿಲ್ಲ. ವ್ಯಾಕ್ಸಿನ್‌ ಪಡೆಯಲು ಹಿಂದೇಟು ಹಾಕುತ್ತಿರುವುದೇ ಕಾಯಿಲೆ ಉಲ್ಬಣಕ್ಕೆ ಕಾರಣವಾಗಿದೆ. ಜನವರಿ ತಿಂಗಳಲ್ಲಿ ಏಳು ಜನರಲ್ಲಿ ವೈರಸ್‌ ಕಾಣಿಸಿಕೊಂಡಿದ್ದು, ಮಹಿಳೆ ಮೃತಪಟ್ಟಿದ್ದಾರೆ.

Advertisement

ಈ ವರ್ಷ ಶೇ.30ರಷ್ಟು ಜನ ಲಸಿಕೆ ಪಡೆದಿಲ್ಲ. ಕಳೆದ ಬಾರಿ ನವೆಂಬರ್‌ ಕೊನೆ ವಾರದಲ್ಲಿ ಆರಂಭವಾದ ಕಾಯಿಲೆ ವೇಗವಾಗಿ ಹರಡಿ ಜನರನ್ನು ಬಲಿ ಪಡೆಯಿತು. ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲೇ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಅನೇಕರು ಸೋಂಕಿನಿಂದ ನರಳಿದರು. ಪ್ರತಿ ವರ್ಷ ಸಾವು, ನೋವುಗಳು ಸಂಭವಿಸುತ್ತಿದ್ದರೂ ಜನರಲ್ಲಿ ತಿಳಿವಳಿಕೆ ಮೂಡಿಲ್ಲ. ಪರಿಣಾಮ ಲಸಿಕೆ ಹಾಕುವ ಆರೋಗ್ಯ ಇಲಾಖೆ ಪ್ರಯತ್ನಕ್ಕೆ ನಿಗದಿತ ಯಶಸ್ಸು ಸಿಕ್ಕಿಲ್ಲ. ಆರೋಗ್ಯ ಇಲಾಖೆ ಪ್ರತಿ ವರ್ಷ ಕೆಎಫ್‌ಡಿ ಕಾಣಿಸಿಕೊಳ್ಳುವ ಪ್ರದೇಶಗಳನ್ನು ಮ್ಯಾಪಿಂಗ್‌ ಮಾಡಿದ್ದು, ಆ ಗ್ರಾಪಂ ಅಥವಾ ಆರೋಗ್ಯ ಕೇಂದ್ರದ  ಜನರ ಮಾಹಿತಿ ಕಲೆ ಹಾಕಿ ಲಸಿಕೆ ನೀಡುತ್ತಿದೆ.  ಕಳೆದ ಬಾರಿ ದೊಡ್ಡ ಪ್ರಮಾಣದಲ್ಲಿ ಸಾವು, ನೋವು ಉಂಟಾಗಿದ್ದರಿಂದ ಜೂನ್‌ ತಿಂಗಳಿನಿಂದಲೇ ಲಸಿಕೆ ನೀಡುವ ಕಾರ್ಯ ಶುರು ಮಾಡಲಾಗಿತ್ತು. ಆದರೆ ಅದು ಗುರಿ ಮುಟ್ಟಿಲ್ಲ.

ಶೇ.30ರಷ್ಟು ಜನರ ಅಸಹಕಾರ: ಕೆಎಫ್‌ಡಿ ಬಾಧಿತ ಪ್ರದೇಶಗಳಲ್ಲಿನ ಅಂದಾಜು 2.20 ಲಕ್ಷ ಜನರಿಗೆ ಲಸಿಕೆ ಕೊಡಲು ಈ ಬಾರಿ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಈ ವರೆಗೆ 1.75 ಲಕ್ಷ ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಉಳಿದವರು ಎಷ್ಟೇ ಬಲವಂತ ಮಾಡಿದರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ವ್ಯಾಕ್ಸಿನೇಷನ್‌ ಪಡೆದವರು ವಿಪರೀತ ನೋವು ಕಾಣಿಸಿಕೊಳ್ಳುವುದರಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಾರೆ ಎಂಬುದು ವೈದ್ಯಾಧಿಕಾರಿಗಳ ಅಧಿಕಾರಿಗಳು ಮಾತು. ಕೆಲವರಲ್ಲಿ ಕಾಯಿಲೆ ಬಂದಾಗ  ನೋಡೋಣ ಎಂಬ ಉದಾಸೀನ ಮನೋಭಾವ ಕೂಡ ಇದೆ. ಲಸಿಕೆ ಬಗ್ಗೆ ಅನೇಕ ವದಂತಿಗಳು ಹರಡಿವೆ.

ಮಲೆನಾಡಿನ ಭಾಗದಲ್ಲಷ್ಟೇ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು. ಕಿಮೀಗೆ ಒಂದೊಂದು ಮನೆ ಇರುತ್ತವೆ. ಇಂತಹ ಕಡೆಗಳಲ್ಲೂ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿ ಹೋದರೂ ಜನ ಅಸಹಕಾರ ತೋರುತ್ತಿದ್ದಾರೆ. ಕೆಲವರು ಒಂದು ಡೋಸ್‌ ಪಡೆದು ಎರಡು ಮತ್ತು ಮೂರನೇ ಡೋಸ್‌ ಪಡೆದಿಲ್ಲ. ಇಂತಹ ಅನೇಕ ಮಂದಿ ಸಹ ಇದ್ದಾರೆ. ಕಳೆದ ಬಾರಿ ಲಸಿಕೆಗೆ ಕೊರತೆ ಕಂಡುಬಂದ ಹಿನ್ನೆಲೆ ಈ ಬಾರಿ ಅಗತ್ಯಕ್ಕಿಂತ ಹೆಚ್ಚು ಸರಬರಾಜು ಮಾಡಲಾಗಿತ್ತು. ಹಳ್ಳಿಗಳಲ್ಲಿ ಸಮುದಾಯ ಮುಖಂಡರು, ಗ್ರಾಮದ ಮುಖ್ಯಸ್ಥರು, ಶಿಕ್ಷಕರು ಇತರೆ ಪ್ರಮುಖರನ್ನು ಕರೆದುಕೊಂಡು ಹೋಗಿ ತಿಳಿವಳಿಕೆ ಮೂಡಿಸಲಾಗಿದೆ. ಎಷ್ಟೋ ಬಾರಿ ಸಮುದಾಯದ ಮುಖಂಡರೇ ಲಸಿಕೆ ಪಡೆಯದಿರುವುದು ಕಂಡುಬಂದಿದೆ.

ತುಮರಿಯಲ್ಲಿ ಜನರ ಉತ್ಸಾಹ: ತುಮರಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ವಾರ ಕೆಎಫ್‌ಡಿಯಿಂದ ಓರ್ವ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಸೋಮವಾರ 150ಕ್ಕೂ ಜನ ಖುದ್ದು ಆಗಮಿಸಿ ಲಸಿಕೆ ಪಡೆದಿದ್ದಾರೆ. ಜನರು ಕಾಯಿಲೆ ಹತ್ತಿರ ಬಂದಾಗಲಷ್ಟೇ ಹೆದರುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಏಳು ಮಂದಿಯಲ್ಲಿ ವೈರಸ್‌: ಸಾಗರ ತಾಲೂಕಿನ ಕಾನೂರು, ತುಮರಿಯಲ್ಲಿ ತಲಾ ಒಂದು ಹಾಗೂ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ ನಾಲ್ಕು, ಕುಡವಳ್ಳಿಯಲ್ಲಿ ಒಂದು ಸೇರಿ ಜಿಲ್ಲೆಯಲ್ಲಿ ಏಳು ಪಾಸಿಟಿವ್‌ ಪ್ರಕರಣ ಕಂಡುಬಂದಿವೆ. ಏಳು ಜನರಲ್ಲಿ ನಾಲ್ವರು ಒಂದು ಬಾರಿಯೂ ಲಸಿಕೆ ಪಡೆದಿಲ್ಲ. ಉಳಿದವರು ಒಂದು ಬಾರಿ ಪಡೆದು ಸುಮ್ಮನಾಗಿದ್ದಾರೆ. ಸಾಗರ ತಾಲೂಕಿನ ಶೀಗೆಮಕ್ಕಿ ಗ್ರಾಮದಲ್ಲಿರುವ ಶನಿವಾರ ಮೃತಪಟ್ಟಿರುವ ಹೂವಮ್ಮ (58) ಕೂಡ ಲಸಿಕೆ ಪಡೆದಿರಲಿಲ್ಲ. ಅವರ ಕುಟುಂಬದಲ್ಲಿ ಏಳು ಜನ ಸದಸ್ಯರಿದ್ದಾರೆ.

ಅರಳಗೋಡಲ್ಲೂ ಗುರಿ ಮುಟ್ಟಿಲ್ಲ: ಕಳೆದ ಬಾರಿ 10ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ಬಾರಿ ಲಸಿಕೆ ನಿಗದಿತ ಗುರಿ ಮುಟ್ಟಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಶೇ.92ರಷ್ಟು ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಯಾರಲ್ಲೂ ವೈರಸ್‌ ಕಂಡುಬಂದಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.

 

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next