Advertisement

ಕೋವಿಡ್ “ಲಾಕ್‌ಡೌನ್‌’ಲೆಕ್ಕಿಸದ ಜನ

09:18 AM Jul 06, 2020 | Suhan S |

ಕಲಬುರಗಿ: ಒಂದೆಡೆ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮತ್ತೂಂದೆಡೆ ಸೋಂಕಿನಿಂದ ನಿತ್ಯವೂ ಸಾವುಗಳು ಸಂಭವಿಸುತ್ತಲೇ ಇವೆ. ಹೀಗೆ ತನ್ನ ಕಬಂಧ ಬಾಹು ವಿಸ್ತರಿಸುತ್ತಿರುವ ಮಹಾಮಾರಿಗೆ ಕಡಿವಾಣ ಹಾಕಲು ರವಿವಾರ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಸಹಜವಾಗಿ ರವಿವಾರ ರಜೆ ದಿನವಾಗಿದ್ದರಿಂದ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಬಂದ್‌ ಆಗಿದ್ದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಅನಗತ್ಯ ಅಂಗಡಿ-ಮುಂಗಟ್ಟು, ಹೋಟೆಲ್‌ಗ‌ಳು ಮುಚ್ಚಿದ್ದವು. ಸಾರಿಗೆ ಬಸ್‌, ಖಾಸಗಿ ವಾಹನಗಳು, ಆಟೋಗಳ ಸಂಚಾರಕ್ಕೆ ನಿಷೇಧವಿತ್ತು. ತರಕಾರಿ, ಹಾಲು ಮಾರಾಟ, ದಿನಸಿ ಅಂಗಡಿಗಳು, ಇಂದಿರಾ ಕ್ಯಾಂಟೀನ್‌, ಆಸ್ಪತ್ರೆಗಳು, ಔಷಧಿ ಅಂಗಡಿಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ಲಾಕ್‌ಡೌನ್‌ ಬಗ್ಗೆ ಶನಿವಾರ ಸಂಜೆಯಿಂದಲೇ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರೂ ಅನೇಕ ನೆಪ ಮಾಡಿಕೊಂಡು ನಗರದ ಪ್ರಮುಖ ರಸ್ತೆಗಳಿಗೆ ಜನರು ಇಳಿದಿದ್ದರು. ಬೆಳಗ್ಗೆಯಿಂದಲೇ ಕಾರು, ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದರು. ಅಲ್ಲಲ್ಲಿ ಆಟೋಗಳೂ ನಿರ್ಭೀತಿಯಿಂದ ಸಂಚರಿಸಿದವು.

ಸಾರಿಗೆ ಬಸ್‌ ಸಂಚಾರ ಬಂದ್‌ ಆಗಿದ್ದರೂ, ಬೇರೆಡೆಯಿಂದ ರಾತ್ರಿ ಹೊರಟಿದ್ದ ಸಾರಿಗೆ ಮತ್ತು ಖಾಸಗಿ ಬಸ್‌ಗಳು ಬೆಳಗ್ಗೆ ನಗರಕ್ಕೆ ಬಂದವು. ಹೀಗಾಗಿ ಕೇಂದ್ರ ಬಸ್‌ ನಿಲ್ದಾಣ ಸುತ್ತ ಕೆಲ ಹೊತ್ತು ಜನ ದಟ್ಟಣೆ ಕಂಡು ಬಂತು. ಅಲ್ಲದೇ, ಬಸ್‌ ನಿಲ್ದಾಣದ ಸುತ್ತಮುತ್ತಲಿನ ಕಾಂಪ್ಲೆಕ್ಸ್‌ಗಳ ಎದುರು ಜನರು ಗುಂಪು-ಗಂಪಾಗಿ ಸೇರಿದ್ದರು. ರಾಷ್ಟ್ರಪತಿ ವೃತ್ತ, ಹಳೆ ಜೇವರ್ಗಿ ರಸ್ತೆ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತ, ರಾಮ ಮಂದಿರ, ಜಗತ್‌ ವೃತ್ತ, ಸೂಪರ್‌ ಮಾರ್ಕೆಟ್‌, ಕಿರಾಣಾ ಬಜಾರ್‌ನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದ್ದರೂ, ಜನರ ಓಡಾಟ ನಿರಂತರವಾಗಿ ಕಂಡು ಬರುತ್ತಿತ್ತು. ಪಟೇಲ್‌ ವೃತ್ತ ಸೇರಿದಂತೆ ಕೆಲವೆಡೆ ಬೆಳಗ್ಗೆ ಕೆಲ ಹೋಟೆಲ್‌ನವರು ಪಾರ್ಸಲ್‌ ಕೊಡುತ್ತಿದ್ದರು. ಇನ್ನು ಕೆಲವೆಡೆ ಮೊಬೈಲ್‌ ಅಂಗಡಿಗಳು ಸೇರಿ ಅನಗತ್ಯ ಅಂಗಡಿಗಳು ತೆರೆದಿದ್ದವು. ಮಾಹಿತಿ ಅರಿತು ಸ್ಥಳಕ್ಕೆ ಬಂದ ಪೊಲೀಸರು ಅವುಗಳನ್ನು ಮಚ್ಚಿಸಿದರು. ಪ್ರಮುಖ ಸ್ಥಳಗಳು, ವಿವಿಧ ವೃತ್ತಗಳಲ್ಲಿ ಪೊಲೀಸರು ನಿಂತಿದ್ದರು. ಅನಶ್ಯಕವಾಗಿ ಸುತ್ತಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು. ಪೊಲೀಸರ ಹೊಡೆತದಿಂದ ಬೈಕ್‌ ಸವಾರರು ತಪ್ಪಿಸಿಕೊಳ್ಳಲು ಯತ್ನಿಸಿದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next