ಸುಳ್ಯ: ತಾಲೂಕಿನ 75 ಗ್ರಾಮಗಳು ಹಳ್ಳಿ ಪ್ರದೇಶಗಳು ಆಗಿದ್ದು, ರಸ್ತೆ, ಸೇತುವೆ ಇಲ್ಲದಿರುವಂತಹ ನೂರಾರು ಸಮಸ್ಯೆ ಗಳು ಇವೆ. ಅವುಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಸ್. ಅಂಗಾರ ಹೇಳಿದರು.
ಪೆರುವಾಜೆ ಗ್ರಾಮದ ನೀರ್ಕಜೆ- ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಂಪರ್ಕ ರಸ್ತೆಗೆ ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿ ಯೋಜನೆಯಲ್ಲಿ ಮಂಜೂರುಗೊಂಡ 10 ಲಕ್ಷ ರೂ. ಮತ್ತು ಜಿ.ಪಂ. ನಿಧಿಯಿಂದ ಮಂಜೂರುಗೊಂಡ 2 ಲಕ್ಷ ರೂ. ಮೊತ್ತದ ಕಾಂಕ್ರೀಟ್ ಮತ್ತು ಡಾಮರು ಕಾಮಗಾರಿಗೆ ರವಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರಕಾರದ ಹಂತದಿಂದ ಅನುದಾನವನ್ನು ತರಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿದೆ. ಎಲ್ಲವನ್ನೂ ಏಕಕಾಲದಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಸ್ಪಂದಿಸಲಾಗುವುದು. ಕ್ಷೇತ್ರದ ಜನಪ್ರತಿನಿಧಿಯಾಗಿ, ಗರಿಷ್ಠ ಪ್ರಯತ್ನದ ಮೂಲಕ ಜನರ ಬೇಡಿಕೆಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ ಎಂದು ಅವರು ಹೇಳಿದರು.
ಸಹಕಾರ ಅಗತ್ಯ
ಅಭಿವೃದ್ಧಿಗೆ ಜನರು ಸಹಕಾರ ನೀಡಬೇಕು. ರಸ್ತೆ ನಿರ್ಮಾಣದ ವೇಳೆ ಸ್ಥಳ ಬೇಕಿದ್ದಲ್ಲಿ, ನೀಡುವ ಮನಸ್ಸು ನಮ್ಮದಾಗಬೇಕು. ಅನುದಾನ ಬಂದರಷ್ಟೆ ಕೆಲಸ ಆಗದು. ಜನರಿಗೆ ಕೆಲಸ ಪೂರ್ಣಗೊಳ್ಳುವ ಇಚ್ಛಾಶಕ್ತಿ ಬೇಕು ಎಂದು ಹೇಳಿದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಸುರೇಶ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸಂದೇಶ್, ಎಪಿಎಂಸಿ ನಿದೇರ್ಶಕ ನವೀನ್ ಸಾರಕೆರೆ, ಗ್ರಾ.ಪಂ. ಸದಸ್ಯ ಚನಿಯ ಕುಂಡಡ್ಕ, ಬೆಳ್ಳಾರೆ ಸಿ.ಎ. ಬ್ಯಾಂಕ್ ನಿರ್ದೇಶಕ ಪದ್ಮನಾಭ ಶೆಟ್ಟಿ ಪೆರುವಾಜೆ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಪೆರುವಾಜೆ ಜಲ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಕುಶಾಲಪ್ಪ ಪೆರುವಾಜೆ, ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಶಾರದೋತ್ಸವ ಸಮಿತಿ ಉಪಾಧ್ಯಕ್ಷ ವಿಜಯ ಕುಮಾರ್ ರೈ ಪೆರುವೋಡಿ, ಸತ್ಯನಾರಾಯಣ ಕೋಡಿಬೈಲು, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಮಂಜುನಾಥ ಗೌಡ ಕಂಡಿಪ್ಪಾಡಿ ಉಪಸ್ಥಿತರಿದ್ದರು.
ಸಲಹೆ -ಸೂಚನೆ ನೀಡಿ
ಪೆರುವಾಜೆ ಗ್ರಾ.ಪಂ. ಸದಸ್ಯ ಉಮೇಶ್ ಕೆ.ಎಂ.ಬಿ. ಮಾತನಾಡಿ, ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಶಾಸಕರು ಅನುದಾನ ಒದಗಿಸಿದ್ದು, ರಸ್ತೆಯ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿ ಸಂದರ್ಭ ಜನರು ಸ್ಥಳದಲ್ಲಿದ್ದು ಸೂಕ್ತ ಸಲಹೆ -ಸೂಚನೆ ನೀಡಬೇಕು ಎಂದು ಅವರು ಹೇಳಿದರು.