Advertisement

ತಂಬಾಕು ವಿರುದ್ಧ ಜನ ಜಾಗೃತಿ ಅಗತ್ಯ: ದೀಪಾ

08:34 AM Jun 01, 2020 | Suhan S |

ಧಾರವಾಡ: ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಕೆ ಮಾಡದಂತೆ ಸಮಾಜದಲ್ಲಿ ಹೆಚ್ಚು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತಂಬಾಕು ರಹಿತ ದಿನಾಚರಣೆ ಕುರಿತ ಘೋಷವಾಕ್ಯ ಮುದ್ರಿತ ಮಾಸ್ಕ್ಗಳನ್ನು ವಿತರಿಸಿ ಅವರು ಮಾತನಾಡಿದರು. ತಂಬಾಕು ಹಾಗೂ ನಿಕೋಟಿನ್‌ ಪದಾರ್ಥಗಳನ್ನು ಸೇವಿಸುವುದು ಸಾಮಾಜಿಕ ಪಿಡುಗಾಗಿ ರೂಪುಗೊಂಡಿದೆ. ಇದರ ನಿಯಂತ್ರಣಕ್ಕೆ ಶಾಲೆ-ಕಾಲೇಜು ಸೇರಿದಂತೆ ಹೆಚ್ಚು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯುವಕರಲ್ಲಿ, ಪಾಲಕರಲ್ಲಿ ತಂಬಾಕು ಸೇವನೆಯಿಂದ ಆಗುವ ಹಾನಿ, ರೋಗಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾ ಹಾಗೂ ತಂಬಾಕು ನಿಯಂತ್ರಣಾಧಿಕಾರಿ ಡಾ| ಸುಜಾತಾ ಹಸವಿಮಠ ಮಾತನಾಡಿ, 2019 ಏ. 1ರಿಂದ 2020 ಮಾ. 30ರವರೆಗಿನ ಅವ ಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿದ ಕುರಿತು 1139 ಪ್ರಕರಣಗಳನ್ನು ದಾಖಲಿಸಿ 1,35,770 ರೂ. ದಂಡ ಆಕರಿಸಲಾಗಿದೆ. ತಂಬಾಕು ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಐದು ತರಬೇತಿ ಶಿಬಿರ ಮತ್ತು ಶಾಲಾ-ಕಾಲೇಜುಗಳಲ್ಲಿ 100ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಜಿಲ್ಲೆಯ 50ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ತಂಬಾಕು ಮುಕ್ತ ಪ್ರದೇಶಗಳಾಗಿವೆ ಎಂದು ತಿಳಿಸಿದರು.

ಸಾರ್ವಜನಿಕರಲ್ಲಿ ತಂಬಾಕು ಸೇವನೆ ಮಾಡದಂತೆ ಮತ್ತು ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್‌ ದಂತ ರೋಗಗಳ ಬಗೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಐದು ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಗುಲಾಬಿ ಹೂ ವಿತರಿಸುವ ಮೂಲಕ ತಂಬಾಕು ನಿಯಂತ್ರಣದ ಬಗ್ಗೆ ಗಮನ ಸೆಳೆಯಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಯಶವಂತ ಮದೀನಕರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಎಸ್‌.ಎಂ. ಹೊನಕೇರಿ ವಂದಿಸಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಧಿಕಾರಿ ಡಾ| ಶಶಿ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|ಕೆ.ಎನ್‌. ತನುಜಾ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next