Advertisement

ಬಾಲ್ಯವಿವಾಹ ಬಗ್ಗೆ ಜನ ಜಾಗೃತಿ ಅಗತ್ಯ

07:31 AM Feb 15, 2019 | Team Udayavani |

ತುಮಕೂರು: ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ 2016ರಲ್ಲಿ ತಿದ್ದುಪಡಿಯಾಗಿದ್ದು, ವಿವಾಹಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗುವ ಎಲ್ಲರ ಮೇಲೆಯೂ ಕೇಸು ದಾಖಲಿಸಲು ಪೊಲೀಸರಿಗೆ ಅವಕಾಶ ನೀಡಿರುವ ಕಾರಣ ಈ ಕಾಯ್ದೆಯ ಬಗ್ಗೆ ಹೆಚ್ಚಿನ ಜನ ಜಾಗೃತಿ ಅಗತ್ಯ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್‌ ಹೇಳಿದರು.

Advertisement

ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮುದ್ರಣ ಮಾಲೀಕರು, ಛತ್ರಗಳ ಮಾಲೀಕರು ಮತ್ತು ವ್ಯವಸ್ಥಾಪಕರು, ಪೂಜಾರಿಗಳು, ಧಾರ್ಮಿಕ ಮುಖಂಡರುಗಳಿಗಾಗಿ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಅರಿವು ಕಾರ್ಯಾಗಾರದಲ್ಲಿ  ಮಾತನಾಡಿ, 2006ರಲ್ಲಿಯೇ ಈ ಕಾಯ್ದೆ ರಚನೆಯಾಗಿದ್ದರೂ ಇಂದಿಗೂ ಸಹ ಬಾಲ್ಯ ವಿವಾಹಗಳು ಜೀವಂತವಾಗಿರುವುದು ನಾಚಿಕೆಯ ವಿಷಯ ಎಂದರು.

ಕಾಯ್ದೆ ಜಾರಿಗೆ ಬಂದ ಬಹಳಷ್ಟು ವರ್ಷಗಳ ಕಾಲ ಎಚ್ಚರಿಕೆ ನೀಡುವ ಅರಿವು ಮೂಡಿಸಲಾಗುತ್ತಿತ್ತು. ಈಗ ಕಾಯ್ದೆ ತೀಕ್ಷ್ಣವಾಗಿದ್ದು, ಕೂಡಲೇ ಪ್ರಕರಣ ದಾಖಲಿಸಲು ಪೊಲೀಸರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಪೋಷಕರು ಮಾತ್ರವಲ್ಲದೆ, ಲಗ್ನಪತ್ರಿಕೆ ಮುದ್ರಿಸುವವರು, ಛತ್ರ ನೀಡುವವರು, ಪೌರೋಹಿತ್ಯ ನಡೆಸುವವರು ಎಲ್ಲರ ಮೇಲೆ ಕಾನೂನಿನ ಅಸ್ತ್ರ ಬಳಕೆಯಾಗಲಿದ್ದು, ಬಾಲ್ಯ ವಿವಾಹಗಳ ಬಗ್ಗೆ ಎಚ್ಚರದಿಂದ ಇರಬೇಕು.

ಛತ್ರಗಳ ಮುಂದೆ ಬಾಲ್ಯ ವಿವಾಹ ನಿಷೇಧ ಎಂದು ಫ‌ಲಕ ಅಳವಡಿಸಿರಬೇಕು ಎಂದು ಸೂಚಿಸಿದರು. ಕೆಲವು ಸಮುದಾಯಗಳಲ್ಲಿ ಇಂದಿಗೂ ಬಾಲ್ಯ ವಿವಾಹ ನಡೆಯುತ್ತಿದ್ದು, ಆ ಸಮುದಾಯಗಳ ಮುಖಂಡರು ಎಚ್ಚರಿಕೆ ವಹಿಸಬೇಕು. ಕಾನೂನಿಗೆ ಮಾತ್ರವೇ ಹೆದರದೆ, ಹೆಣ್ಣು ಮಕ್ಕಳ ಭವಿಷ್ಯವೂ ಇದರಲ್ಲಿ ಅಡಗಿರುವುದರಿಂದ ಅವರ ಜೀವನದ ಬಗ್ಗೆಯೂ ಚಿಂತಿಸಬೇಕು ಎಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಲಾ ಕಾಂಬ್ಳೆàರ್‌ ಮಾತನಾಡಿ, 18 ವರ್ಷದ ಒಳಗಿರುವ ಹೆಣ್ಣು ಮಕ್ಕಳು, 21 ವರ್ಷ ಒಳಗಿರುವ ಗಂಡು ಮಕ್ಕಳ ವಿವಾಹವನ್ನು ಬಾಲ್ಯ ವಿವಾಹ ಎಂದು ಘೋಷಿಸಲಾಗಿದ್ದು, ಇಂತಹ ವಿವಾಹಗಳಿಗೆ ಕಾನೂನಿನ ಯಾವುದೇ ಮಾನ್ಯತೆ ಇರುವುದಿಲ್ಲ.

Advertisement

ತಕ್ಷಣಕ್ಕೆ ವಿವಾಹ ಮಾಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮುಂದಿನ ಅನಾಹುತಗಳಿಗೆ ತಲೆ ಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು, ಪೂಜಾರಿಗಳು, ಛತ್ರದ ಮುಖ್ಯಸ್ಥರುಗಳ ಜವಾಬ್ದಾರಿ ಹೆಚ್ಚಿದ್ದು, ತಮ್ಮ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಅಂಗನವಾಡಿ ಮೇಲ್ವಿಚಾರಕಿ ಸುಪ್ರೀತಾ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ವಿವಾಹ ನಡೆದಾಗ ತಡೆಗಟ್ಟುವುದಕ್ಕಿಂತ ಮುಂಚಿತವಾಗಿಯೇ  ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದರೆ, ಮುಂದಾಗುವ‌ ಅನಾಹುತಗಳನ್ನು ತಪ್ಪಿಸಬಹುದು.

ಇದಕ್ಕಾಗಿಯೇ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಇದ್ದು, ಅವರಿಗೆ ಮಾಹಿತಿ ನೀಡಬೇಕು ಎಂದರು. ಮೇಲ್ವಿಚಾರಕಿ ಶಮೀಮ, ತುಮಕೂರು ಗ್ರಾಮಾಂತರ ಮೇಲ್ವಿಚಾರಕಿಯರಾದ ಸರೋಜ, ಅನುಸೂಯ, ಯಲ್ಲವ್ವ, ಶಾಂತಮ್ಮ, ವಿನೋದ‌, ಶಾರದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next