ಅಫಜಲಪುರ: ಆರೋಗ್ಯ ಕಾಪಾಡಿಕೊಳ್ಳುವುದು, ರೋಗ ತಡೆಗಟ್ಟುವುದರ ಕುರಿತು ನಮ್ಮ ಜನರಲ್ಲಿ ಅರಿವಿನ ಕೊರತೆ ಇದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆ, ಸಂಘ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಬಡಜನರಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಬಂಡೆಪ್ಪ ಖಾಶೆಂಪುರ ಹೇಳಿದರು.
ತಾಲೂಕಿನ ಚವಡಾಪುರದ ವಿ.ಎಲ್. ಭಟ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜೆಡಿಎಸ್ ಮುಖಂಡ ಗೋವಿಂದ ಭಟ್ ಹಾವನೂರ ಅವರು ಏರ್ಪಡಿಸಿದ್ದ ಆರೋಗ್ಯವೇ ಭಾಗ್ಯ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಾವು ನಮ್ಮ ವಾಹನಗಳಿಗೆ 50 ಸಾವಿರ ರೂ. ಬೇಕಿದ್ದರೂ ಕಟ್ಟುತ್ತೇವೆ. ಆದರೆ ಜೀವ ವಿಮೆ ಕಟ್ಟಲು ಹಿಂದೆಮುಂದೆ ನೋಡುತ್ತೇವೆ.
ಹೀಗಾಗಿಯೇ ಎಷ್ಟೋ ಜನರು ಆಪತ್ತು ತಂದುಕೊಂಡಿದ್ದಾರೆ. ಅನಾರೋಗ್ಯವಾದಾಗಲೇ ನಾವು ವೈದ್ಯರನ್ನು ನೆನೆಯುತ್ತೇವೆ. ಈ ಪದ್ಧತಿ ಹೋಗಬೇಕು. ಉಚಿತ ಆರೋಗ್ಯ ಶಿಬಿರಗಳು ಕಾಟಾಚಾರಕ್ಕೆ ಆಗಬಾರದು. ಎಲ್ಲರನ್ನೂ ಸರಿಯಾಗಿ ಪರೀಕ್ಷಿಸಿ ಯಾರಿಗೆ ಯಾವ ಚಿಕಿತ್ಸೆ ನೀಡಬೇಕು ಎಂದು ತಿಳಿದು ಅದನ್ನು ಪೂರ್ತಿಗೊಳಿಸಿದರೆ ಅವರಿಗೆ ಪ್ರಯೋಜನವಾಗಲಿದೆ.
ಈ ನಿಟ್ಟಿನಲ್ಲಿ ಗೋವಿಂದ ಭಟ್ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಜೇವರ್ಗಿ ಜೆಡಿಎಸ್ ಮುಖಂಡ ಕೇದಾಲಿಂಗಯ್ಯ ಹಿರೇಮಠ ಮಾತನಾಡಿ, ಉಚಿತ ಆರೋಗ್ಯ ಶಿಬಿರ ಆಯೋಜಿಸುವುದರಿಂದ ತಾಲೂಕಿನ ಎಲ್ಲ ಬಡ ಜನರಿಗೆ ತಲುಪಲಾಗುವುದಿಲ್ಲ. ಬದಲಿಗೆ ಅಫಜಲಪುರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಉಚಿತ ಆರೋಗ್ಯ ಸೇವೆ ನೀಡಿದರೆ ನಿಮ್ಮ ಕಾರ್ಯಕ್ಕೆ ಜನರೆಲ್ಲ ಮೆಚ್ಚಿಕೊಳ್ಳುತ್ತಾರೆ ಎಂದು ಹೇಳಿದರು.
ರೈತರ, ಬಡವರ ನೋವಿಗೆ, ಕಷ್ಟಗಳಿಗೆ ಸ್ಪಂದಿಸಿ ನೆರವು ನೀಡುವ ಪಕ್ಷ ಎಂದರೆ ಜೆಡಿಎಸ್ ಮಾತ್ರ. ಹೀಗಾಗಿ ಜೆಡಿಎಸ್ ಮತ್ತು ಗೋವಿಂದ ಭಟ್ ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಚಿನ್ಮಯಗಿರಿ ಮಹಾಂತ ಮಠದ ಸಿದ್ದರಾಮ ಶ್ರೀ ಮಾತನಾಡಿ, ಬೆವರು ಸುರಿಸಿ ದುಡಿಯುವ ರೈತರಿಗೆ ಬೆಲೆ ಸಿಗುತ್ತಿಲ್ಲ. ರೈತರ ಕಷ್ಟಕ್ಕೆ ಸ್ಪಂದಿಸುವ ಮತ್ತು ರೈತರ ನೆರವಿಗೆ ಧಾವಿಸುವ ಪಕ್ಷ ಅಧಿಕಾರಕ್ಕೆ ಬರಬೇಕು.
ಉಚಿತ ಆರೋಗ್ಯ ಸೇವೆ ಮಾಡುತ್ತಿರುವ ಗೋವಿಂದ ಭಟ್ ಅವರ ರಾಜಕೀಯ ಭವಿಷ್ಯ ಬೆಳಗಲಿ ಎಂದು ಹಾರೈಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ಜೆಡಿಎಸ್ ಮುಖಂಡ ಗೋವಿಂದ ಭಟ್ ಮಾತನಾಡಿದರು. ಆರೋಗ್ಯ ಶಿಬಿರದಲ್ಲಿ ಹೃದಯ, ನೇತ್ರ, ಕಿಡ್ನಿ ಸೇರಿದಂತೆ ಇನ್ನಿತರ ರೋಗಗಳ ಪರೀಕ್ಷೆ ನಡೆಸಲಾಯಿತು.
ಬೆಂಗಳೂರಿನ ನಾರಾಯಣ ಹೃದಯಾಲಯ, ಜಯದೇವ ಆಸ್ಪತ್ರೆ, ಕಲಬುರಗಿಯ ಗಂಗಾ, ಭರೂಕಾ ಮತ್ತು ಗೊಬ್ಬೂರ(ಕೆ) ವಿ.ಎಲ್. ಭಟ್ ಆಸ್ಪತ್ರೆ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಜೆಡಿಎಸ್ ಪಕ್ಷದ ಮುಖಂಡರಾದ ದೇವೇಗೌಡ ತೆಲ್ಲೂರ, ಸಮೀರ್ ಬಾಗವಾನ್, ಕೃಷ್ಣಾ ರೆಡ್ಡಿ, ಸುನೀಲ ಹೊಸ್ಮನಿ, ಶರಣಗೌಡ ಕಲಶೆಟ್ಟಿ, ಪ್ರಭುಗೌಡ, ಗುರುನಾಥ ಪೂಜಾರಿ, ಡಾ| ಸ್ಮಿತಾ ಪಾಟೀಲ, ಡಾ| ಮಧುಸೂಧನ, ಡಾ| ಪ್ರದೀಪ ಸಿನ್ಹಾ, ಡಾ| ಶಿಲ್ಪಾ ನಾರಾಯಣ, ಡಾ| ಸೌಜನ್ಯ ಇದ್ದರು.