Advertisement

ಜಿಲ್ಲೆಯ ಜನರು ಹೊಸ ಬದಲಾವಣೆಯ ಹುಮ್ಮಸ್ಸಿನಲ್ಲಿದ್ದಾರೆ : ಮಿಥುನ್‌ ರೈ

02:16 AM Apr 03, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ಜಿಲ್ಲಾ ಯುವ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಅವರು ಕಣಕ್ಕಿಳಿದಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಆಗಬೇಕಾದ ಅಭಿವೃದ್ಧಿ ಕೆಲಸಗಳು ಬಹಳಷ್ಟಿವೆ. ಹೀಗಿರುವಾಗ, ಕ್ಷೇತ್ರದಲ್ಲಿ ಅಭಿವೃದ್ಧಿ ಮೂಲಕ ಅಮೂಲಾಗ್ರ ಬದಲಾವಣೆ ತರಲು ಚುನಾವಣಾ ಕಣಕ್ಕಿಳಿದಿರುವುದಾಗಿ ಮಿಥುನ್‌ ರೈ ಹೇಳುತ್ತಿದ್ದಾರೆ. ಪ್ರಸ್ತುತ ಪ್ರಚಾರದ ಕಾವು ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಿಥುನ್‌ ರೈ ತಮ್ಮ ಚೊಚ್ಚಲ ಲೋಕಸಭೆ ಚುನಾವಣಾ ಪ್ರಚಾರದ ಬಗ್ಗೆ “ಉದಯವಾಣಿ’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Advertisement

– ನೇರವಾಗಿ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದಕ್ಕೆ ಏನನ್ನಿಸುತ್ತಿದೆ?
ಕಾರ್ಯಕರ್ತರ ಸಹಕಾರ, ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌, ಡಿ.ಕೆ.ಶಿವಕುಮಾರ್‌, ಡಾ| ಎಂ. ವೀರಪ್ಪ ಮೊಲಿ, ಯು.ಟಿ.ಖಾದರ್‌, ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಬಿ.ಕೆ.ಹರಿಪ್ರಸಾದ್‌, ವಸಂತ ಬಂಗೇರ, ಅಭಯಚಂದ್ರ, ಐವನ್‌ ಡಿ’ಸೋಜ, ಶಕುಂತಳಾ ಶೆಟ್ಟಿ, ಜೆ.ಆರ್‌.ಲೋಬೋ, ಮೊದಿನ್‌ ಬಾವಾ, ಹರೀಶ್‌ ಕುಮಾರ್‌, ಡಾ| ರಘು, ಯು.ಕೆ. ಮೋನು, ಸೇರಿದಂತೆ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಯ ನಾಯಕರೆಲ್ಲರೂ ಆಶೀರ್ವಾದ ಮಾಡಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷ ಯುವಕರಿಗೆ ಅವಕಾಶಗಳನ್ನು ನೀಡುತ್ತಾ ಬಂದಿದೆ. ಚುನಾವಣಾ ಅಭ್ಯರ್ಥಿಯಾಗುವುದು ಮೊದಲ ಬಾರಿಯಾದರೂ ಹಲವು ಚುನಾವಣೆಗಳನ್ನು ಎದುರಿಸಿದ ಅನುಭವವಿದೆ. ಬೂತ್‌ ಮಟ್ಟದಿಂದ ಚುನಾವಣಾ ಕೆಲಸ ಮಾಡಿದ ಅನುಭವವಿದೆ.

– ಕ್ಷೇತ್ರಕ್ಕೆ ನೀವು ಹೊಸ ಮುಖವಲ್ಲವೇ?
ದಕ್ಷಿಣ ಕನ್ನಡ ಜಿಲ್ಲೆ ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ನಾಡು. ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಈ ನಾಡಿನ ಸಾಂಸ್ಕೃತಿಕ ಪರಂಪರೆ, ಸೌಹಾರ್ದಕ್ಕೆ ಪೂರಕವಾಗಿ ನಾನು ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ತಿರುವೈಲು ಕಂಬಳ ಸಮಿತಿಯ ಗೌರವಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಿಲಿನಲಿಕೆ ಟ್ರಸ್ಟ್‌ ಸ್ಥಾಪಿಸಿ ಪಿಲಿನಲಿಕೆ ಕಲೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡಿದ್ದೇನೆ.

ದೀಪಾವಳಿ ಹಬ್ಬ ಆಚರಣೆ, ಗೋವುಗಳ ದಾನ, ಇಫ್ತಾರ್‌ ಸೌಹಾರ್ದ ಕೂಟ, ಕ್ರಿಸ್ಮಸ್‌ ಆಚರಣೆಯನ್ನು ವರ್ಷಂಪ್ರತಿ ಸಂಘಟಿಸುತ್ತಿದ್ದೇನೆ. ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ; ಮಾತ್ರವಲ್ಲದೆ 15 ವರ್ಷಗಳಿಂದ ಇದರ ಸಂಚಾಲಕನಾಗಿದ್ದೇನೆ. ನನಗೆ ಯುವಜನರ ಆಶೋತ್ತರಗಳ ಬಗ್ಗೆ ಚೆನ್ನಾಗಿ ಅರಿವಿದೆ. ಇದಲ್ಲದೆ ಕಾಂಗ್ರೆಸ್‌ ಸರಕಾರದ ಜನಪರ ಯೋಜನೆಗಳು ಜನರ ಮನಸ್ಸಿನಲ್ಲಿವೆ. ಆದುದರಿಂದ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ತರುತ್ತಾರೆ. ಕಾಂಗ್ರೆಸ್‌ಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ.

– ನಿಮ್ಮ ಪ್ರತಿಸ್ಪರ್ಧಿ ಎರಡು ಬಾರಿಯ ಸಂಸದರು; ಹೀಗಾಗಿ, ನಿಮಗೆ ಸ್ಪರ್ಧೆ ಕಠಿನ ಅನಿಸುತ್ತಿದೆಯೇ ?
ಕಠಿನ ಎಂಬ ಶಬ್ದವೇ ಇಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿಸ್ಪರ್ಧಿ ಯಾರು ಎಂಬುದು ನಮಗೆ ಮುಖ್ಯವಲ್ಲ. ನಮ್ಮ ಗುರಿ ಚುನಾವಣೆಯಲ್ಲಿ ಗೆಲ್ಲುವುದು ಮಾತ್ರ. ಅದಕ್ಕೆ ಅವಶ್ಯವಿರುವ ಕಾರ್ಯತಂತ್ರಗಳನ್ನು ರೂಪಿಸುತ್ತೇವೆ. 25 ವರ್ಷಗಳಿಂದ ಬಿಜೆಪಿಗೆ ಅವಕಾಶ ನೀಡಿದ್ದೀರಿ. ಈ ಬಾರಿ ಬದಲಾವಣೆ ಮಾಡಿ; ನನಗೊಂದು ಅವಕಾಶ ಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತಿದ್ದೇವೆ.

Advertisement

– ಜಿಲ್ಲೆಯಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಹೇಗಿದೆ?
ಕ್ಷೇತ್ರದಲ್ಲಿ ಈಗಾಗಲೇ ಪಕ್ಷ ಚುನಾವಣಾ ಪ್ರಚಾರವನ್ನು ಬಹಳಷ್ಟು ಪರಿಣಾಮಕಾರಿ ರೀತಿಯಲ್ಲಿ ನಡೆಸುತ್ತಿದೆ. ಬೂತ್‌ ಮಟ್ಟದ ಕಾರ್ಯಕರ್ತರಿಂದ ಮತದಾರರ ಸಂಪರ್ಕ ಕಾರ್ಯ ನಡೆಯುತ್ತಿದೆ. ಜಿಲ್ಲಾ ಹಾಗೂ ಬ್ಲಾಕ್‌ಮಟ್ಟದಲ್ಲಿ ಸಮಾವೇಶಗಳು ನಡೆದಿವೆ. ಪಕ್ಷದ ರಾಷ್ಟ್ರೀಯ ನೇತಾರರು ಹಾಗೂ ರಾಜ್ಯ ಮುಖಂಡರು ಕೆಲವೇ ದಿನದಲ್ಲಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಹೊಸ ಬದಲಾವಣೆಗೆ ಈ ಚುನಾವಣೆ ವೇದಿಕೆಯಾಗಲಿದೆ.

– ಪ್ರಧಾನಿ ನರೇಂದ್ರ ಮೋದಿ ಅಲೆ ಕಾಂಗ್ರೆಸ್‌ಗೆ ಈ ಬಾರಿಯೂ ಹೊಡೆತ ನೀಡಲಿದೆಯೇ?
ನಮ್ಮ ಜಿಲ್ಲೆಯಲ್ಲಿ ಸಮಸ್ಯೆಗಳು ಬಹಳಷ್ಟಿವೆ. ಇಲ್ಲಿನ ಹೆದ್ದಾರಿ, ರೈಲ್ವೇ ಸೇರಿದಂತೆ ವಿವಿಧ ರೀತಿಯಲ್ಲಿ ಅಭಿವೃದ್ಧಿಯಾಗಬೇಕು ಎಂಬ ಬೇಡಿಕೆ ಜನರಿಂದ ಕೇಳಿ ಬರುತ್ತಲೇ ಇದೆ. ಕಳೆದ 10 ವರ್ಷದಲ್ಲಿ ಸಂಸದರಾದವರು ಇದನ್ನು ಪೂರ್ಣಗೊಳಿಸಿದ್ದರೆ ಈ ಬೇಡಿಕೆ ಪಟ್ಟಿ ಬೆಳೆಯುತ್ತಿರಲಿಲ್ಲ. ಆದರೆ ಅವರ ಕಾಲದಲ್ಲಿ ಏನೂ ಆಗಿಲ್ಲ. ಇನ್ನಾದರೂ ಆಗಲಿ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಹೀಗಾಗಿ ಯಾವ ಅಲೆಯೂ ಇಲ್ಲಿ ಪರಿಣಾಮ ಬೀರದು. ಜಿಲ್ಲೆಯ ಜನರು ಈ ಬಾರಿ ಬದಲಾವಣೆಯ ಹುಮ್ಮಸ್ಸಿನಲ್ಲಿದ್ದಾರೆ.

“ಉದ್ಯೋಗ ಸೃಷ್ಟಿ-ಶಾಂತಿ ಸೌಹಾರ್ದಕ್ಕೆ ಒತ್ತು’
– ಈ ಬಾರಿ ಮತ ಕೇಳುವ ಮುನ್ನ ದ.ಕ. ಜಿಲ್ಲೆಗೆ ನಿಮ್ಮ ಯೋಜನೆಗಳೇನು?
ವಿದ್ಯಾ ಕೇಂದ್ರವಾದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡುವೆ. ಯುವ ಸಮುದಾಯ ದೇಶದ ಬಹುದೊಡ್ಡ ಸೊತ್ತು ಎಂಬ ಆಶಯದಿಂದ ಅವರ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋ
ಜಿಸುವೆ. ಸರ್ವ ಧರ್ಮ, ಜಾತಿಯ ಬಂಧುಗಳು ನೆಲೆಸಿರುವ ಜಿಲ್ಲೆಯಲ್ಲಿ ಸೌಹಾರ್ದಕ್ಕೆ ಪ್ರಾಮುಖ್ಯ ನೀಡಿ ಶಾಂತಿಯುತ ಜಿಲ್ಲೆಯಾಗಿ ರೂಪಿಸುವೆ. ಸಾಂಸ್ಕೃತಿಕವಾಗಿಯೂ ವಿಶೇಷ ಹಾಗೂ ವಿಭಿನ್ನ ಜಿಲ್ಲೆಯಾದ ದ.ಕ.ದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇನ್ನಷ್ಟುಮೆರುಗು ನೀಡುವೆ. ಸಿಆರ್‌ಝಡ್‌ ನಿಯಮಾವಳಿಯಲ್ಲಿ ಸದ್ಯ ಎದುರಾಗಿರುವ ಸಮಸ್ಯೆಗಳಿಗೆ ಮುಕ್ತಿ ನೀಡುವುದು, ಪ್ರವಾಸೋದ್ಯಮದಲ್ಲಿ ಜಿಲ್ಲೆಯು ಹೊಸ ಭಾಷ್ಯ ಬರೆಯುವಂತಾಗಲು ಯೋಜನೆಗಳನ್ನು ರೂಪಿಸುವುದು ನನ್ನ ಗುರಿ. ಆಶಾ ಕಾರ್ಯಕರ್ತೆಯರು ಸೇರಿದಂತೆ ಯಾವೆಲ್ಲ ವಿಭಾಗಗಳಲ್ಲಿ ಕೆಲಸದ ಅಭದ್ರತೆ ಎದುರಿಸುತ್ತಿದ್ದಾರೋ ಅವರಿಗೆ ಉದ್ಯೋಗ ಭರವಸೆ ಒದಗಿಸುವೆ. ಇದಕ್ಕಾಗಿ ದ.ಕ. ಜಿಲ್ಲೆಯ ಜನರು ಆಶೀರ್ವಾದ ಮಾಡುವರೆಂಬ ವಿಶ್ವಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next