ಮುಂದೆ ಸಿನಿಮಾ ನಿರ್ದೇಶನ ಮಾಡುವವರಿಗೆ ಈಗ ಮೊದಲು ವೇದಿಕೆಯಾಗೋದು ಹಾಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಗೋದು ಕಿರುಚಿತ್ರಗಳಲ್ಲಿ. ಅದೇ ಕಾರಣದಿಂದ ಇವತ್ತು ಅನೇಕ ಪ್ರತಿಭೆಗಳು ಕಿರುಚಿತ್ರ ಮಾಡುತ್ತಿದ್ದಾರೆ. ಈಗ ಆ ಸಾಲಿಗೆ ವಿಜಯ್ ಭರಮಸಾಗರ ಕೂಡಾ ಸೇರಿದ್ದಾರೆ. ಸುಮಾರು 18 ವರ್ಷಗಳ ಕಾಲ ಪತ್ರಕರ್ತರಾಗಿ ಅನುಭವ ಹೊಂದಿರುವ, ಸಿನಿಮಾ ವರದಿಗಾರಿಕೆಯ ಜೊತೆಗೆ ಸಿನಿಮಾ ಸಂಭಾಷಣೆ, ಸಾಹಿತ್ಯದಲ್ಲೂ ಗುರುತಿಸಿಕೊಂಡಿರುವ ವಿಜಯ್ ಈಗ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದು “ಭಾರತಿಪುರ ಕ್ರಾಸ್’.
ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ನಡೆಯಿತು. ನಟ ಗಣೇಶ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಚಿತ್ರ ನೋಡಿ ಮೆಚ್ಚುಗೆ ಮಾತುಗಳನ್ನಾಡಿದರು. “ಪತ್ರಕರ್ತ ವಿಜಯ್ ಸುಮಾರು 15 ವರ್ಷಗಳಿಂದ ನನಗೆ ಪರಿಚಯ. ಸಿನಿಮಾ ವರದಿಗಾರರಾಗಿರುವ ಅವರು ಸಿನಿಮಾದ ಹಾಡು, ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಕಿರುಚಿತ್ರ ಮಾಡಿದ್ದಾರೆ. ಇದು ಅವರ ಸಿನಿಮಾ ಮೇಲಿನ ಆಸಕ್ತಿಯನ್ನು ತೋರಿಸುತ್ತದೆ. ಸಿನಿಮಾದಲ್ಲಿ ಚಿಕ್ಕದು, ದೊಡ್ಡದು ಎಂದಿಲ್ಲ. ಪ್ರಯತ್ನವಷ್ಟೇ ನಮ್ಮದು. ಉಳಿದಿದ್ದನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ. ವಿಜಯ್‌ಗೆ ಒಳ್ಳೆಯದಾಗಲಿ’ ಎಂದರು.
ಲಹರಿ ವೇಲು ಮಾತನಾಡಿ, “ಕಿರುಚಿತ್ರ ನೋಡಿ ಖುಷಿಯಾಯಿತು. ಕಿರುಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ನೀಡಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು.
ತಮ್ಮ ಮೊದಲ ಕಿರುಚಿತ್ರದ ಬಗ್ಗೆ ಮಾತನಾಡಿದ ವಿಜಯ್ ಭರಮಸಾಗರ, “ನನಗೆ ಮೊದಲಿನಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. ಅದಕ್ಕೆ ಪೂರಕವಾಗಿ ಸಂಭಾಷಣೆ, ಸಾಹಿತ್ಯ ಬರೆಯುತ್ತಲೇ ನಿರ್ದೇಶನದ ಕನಸು ಕಂಡೆ. ಈಗ “ಭಾರತಿಪುರ ಕ್ರಾಸ್’ ಮೂಲಕ ಈಡೇರಿದೆ. ಒಳ್ಳೆಯ ತಂಡ ಸಿಕ್ಕಿದ್ದರಿಂದ ಚಿತ್ರ ಮಾಡಿದೆ. ಇಲ್ಲಿ ಮನುಷ್ಯನಿಗೆ ತಾಳ್ಮೆ ಎಷ್ಟು ಮುಖ್ಯ ಎಂಬ ಅಂಶದೊಂದಿಗೆ ಈ ಕಿರುಚಿತ್ರ ಸಾಗುತ್ತದೆ’ ಎಂದರು. ಅಂದು ಸಾಕಷ್ಟು ಕಲಾವಿದರು, ತಂತ್ರಜ್ಞರು ಬಂದು, ವಿಜಯ್ ಮತ್ತು ತಂಡದ ಪ್ರಯತ್ನವನ್ನು ಪ್ರಶಂಸಿಸಿದರು.
ಚಿತ್ರದ ನಾಯಕ ಲಿಖೀತ್ ಸೂರ್ಯ ಹಾಗೂ ನಾಯಕಿ ಪೂಜಾ ಹುಣಸೂರು ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ನಟ ಸುದೀಪ್ ಧ್ವನಿ ನೀಡಿದ್ದು, ಅನೂಪ್ ಸೀಳೀನ್ ಹಿನ್ನೆಲೆ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನವಿದೆ.