ಹೊಸದಿಲ್ಲಿ : ತ್ರಿಪುರದಲ್ಲಿ ಬಿಜೆಪಿಯ ಐತಿಹಾಸಿಕ ವಿಜಯ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮಿತ್ರ ಪಕ್ಷಗಳ ಉತ್ತಮ ನಿರ್ವಹಣೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಜನರು ಅಭಿವೃದ್ಧಿಪರ ಎನ್‌ಡಿಎ ಮೇಲೆ ವಿಶ್ವಾಸ ಇರಿಸಿದ್ದಾರೆ ಮತ್ತು ಅದೇ ವೇಳೆ ನೇತ್ಯಾತ್ಮಕ ಮತ್ತು ಸಂಪರ್ಕರಹಿತ ರಾಜಕಾರಣವನ್ನು ತಿರಸ್ಕರಿದ್ದಾರೆ’ ಎಂದು ಹೇಳಿದ್ದಾರೆ.
ತ್ರಿಪುರದಲ್ಲಿನ ಬಿಜೆಪಿಯ ಐತಿಹಾಸಿಕ ವಿಜಯವು ಸೈದ್ಧಾಂತಿಕ ನೆಲೆಯಲ್ಲಿ ಸಾಧಿತವಾಗಿದೆ ಎಂದವರು ಹೇಳಿದರು.
ಸರಣಿ ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಅವರು, “ಜನರು ಪದೇ ಪದೇ, ಚುನಾವಣೆಯ ಬಳಿಕ ಚುನಾವಣೆಯಲ್ಲಿ ಎನ್‌ಡಿಎ ಕೂಟದ ಧನಾತ್ಮಕ ಮತ್ತು ಅಭಿವೃದ್ಧಿ ಪರ ಕಾರ್ಯಸೂಚಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಅದೇ ವೇಳೆ ನೇತ್ಯಾತ್ಮಕ, ಬುಡಮೇಲು ಮಾಡುವ ಸಂಪರ್ಕರಹಿತ ರಾಜಕಾರಣವನ್ನು ನಿರಾಕರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತ್ರಿಪುರದಲ್ಲಿನ ವಿಜಯವು ಕ್ರೂರ ಶಕ್ತಿ ಮತ್ತು ಬೆದರಿಕೆ ವಿರುದ್ಧ ಪ್ರಜಾಸತ್ತೆ ಸಾಧಿಸಿರುವ ವಿಜಯವಾಗಿದೆ. ಇವತ್ತು ಭಯದ ವಿರುದ್ಧ ಅಹಿಂಸೆ ಮತ್ತು ಶಾಂತಿಯು ವಿಜಯ ಸಾರಿದೆ. ತ್ರಿಪುರಕ್ಕೆ ನಾವು ಉತ್ತಮ ಸರಕಾರವನ್ನು ನೀಡಲಿದ್ದೇವೆ ಮತ್ತು ಅದು ಅಂತಹ ಉತ್ತಮ ಆಡಳಿತೆಗೆ ಅರ್ಹವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಬೆಂಬಲಿಸಿರುವ ನಾಗಾಲ್ಯಾಂಡ್ ಜನತೆಗೆ ಮೋದಿ ಧನ್ಯವಾದ ಹೇಳಿದ್ದಾರೆ.
ಮೇಘಾಲಯದ ಅಭ್ಯುದಯವು ನಮ್ಮ ಸರಕಾರಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ಮೋದಿ ಹೇಳಿದರು.