Advertisement

ಚೈನ್‌ಲಿಂಕ್‌ ವ್ಯವಹಾರವೆಂಬ ದಂಧೆ: ಯುವ ಸಮುದಾಯಕ್ಕೆ ಬಲೆ!

12:05 PM Sep 09, 2017 | Karthik A |

ಪುತ್ತೂರು: ಬುದ್ಧಿವಂತರು ಎಂಬ ಹೆಗ್ಗಳಿಕೆಯ ಅವಿಭಜಿತ ದ. ಕ. ಜಿಲ್ಲೆಯವರು ಮೋಸ ಹೋಗುವಲ್ಲಿಯೂ ಮುಂಚೂಣಿಯವರು. ಚೈನ್‌ಲಿಂಕ್‌ ಹೆಸರಿನಲ್ಲಿ ಹುಟ್ಟಿಕೊಂಡಿರುವ ನೂರಾರು ಸಂಸ್ಥೆಗಳಲ್ಲಿ ಸಾವಿರಾರು ಮಂದಿ ವಂಚನೆಗೊಳಗಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಖಾಸಗಿ ಸಂಸ್ಥೆಯೊಂದನ್ನು ಆರಂಭಿಸಿ ಅದಕ್ಕೆ ಒಂದೆರಡು ಸದಸ್ಯರನ್ನು ಮಾಡಿ ಆ ಸದಸ್ಯರ ಮೂಲಕ ಚೈನ್‌ ಕೊಂಡಿಯ ರೀತಿಯಲ್ಲಿ ಸದಸ್ಯರನ್ನು ಮಾಡಿ ಹಣ ಸಂಗ್ರಹಿಸುವುದು ಚೈನ್‌ಲಿಂಕ್‌ ಸಂಸ್ಥೆಗಳ ಮುಖ್ಯ ಉದ್ದೇಶ. ಸದಸ್ಯರಾಗಿ ಸೇರ್ಪಡೆಗೊಂಡವರಿಂದ ಇಂತಿಷ್ಟು ಹಣ ಸಂಗ್ರಹಿಸಿ ಆ ಹಣವನ್ನು ದ್ವಿಗುಣಗೊಳಿಸುವ, ಪ್ರವಾಸ, ದೊಡ್ಡ ಮಟ್ಟದ ಗಿಫ್ಟ್‌ಗಳನ್ನು ನೀಡುವ ಆಮಿಷಗಳನ್ನು ಒಡ್ಡಲಾಗುತ್ತದೆ. ಚೈನ್‌ಲಿಂಕ್‌ ದೊಡ್ಡದಾಗುತ್ತಿರುವಂತೆಯೇ ಅದರ ಪ್ರಮುಖರು ಸುದ್ದಿ ಇಲ್ಲದೆ ನಾಪತ್ತೆಯಾಗುತ್ತಾರೆ.

Advertisement

ವಂಚಿಸುವವರು, ವಂಚಿಸಲ್ಪಡುವವರು
ಚೈನ್‌ಲಿಂಕ್‌ಗಳಲ್ಲಿ ಮೊದಲು ಸೇರಿಸಿಕೊಳ್ಳುವವರು ವಿದ್ಯಾವಂತರು, ಉನ್ನತ ಶಿಕ್ಷಣ ಪಡೆದವರು ಎನ್ನುವುದೇ ಆತಂಕದ ವಿಚಾರ. ಇವರೆಲ್ಲರೂ 18 ರಿಂದ 30 ವರ್ಷ ವಯಸ್ಸಿನ ಯುವ ಸಮುದಾಯ. ಶಿಕ್ಷಕರು, ಉಪನ್ಯಾಸಕರು, ಮಹಿಳಾ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು, ಅಂಗನವಾಡಿ ಕಾರ್ಯಕರ್ತರು ಹೀಗೆ ಸಾರ್ವಜನಿಕ ನಿಕಟ ಸಂಪರ್ಕ ಹೊಂದಿರುವವರು ಮೊದಲು ಚೈನ್‌ಲಿಂಕ್‌ ವ್ಯವಹಾರಕ್ಕೆ ಸೇರಿಕೊಳ್ಳುತ್ತಾರೆ. ಈಗಷ್ಟೇ ಶಿಕ್ಷಣ ಮುಗಿಸಿ ದುಡಿತಕ್ಕೆ ಸೇರಿಕೊಂಡು ಹಣ ಉಳಿತಾಯದ ಉದ್ದೇಶ ಹೊಂದಿದ ಯುವ ಸಮುದಾಯ, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಟ್ಟುವ ಮಹಿಳೆಯರು ಇವರ ಟಾರ್ಗೆಟ್‌.

ಹೇಗೆ ಆಕರ್ಷಿಸುತ್ತಾರೆ ?
ಯುವಕ -ಯುವತಿಯರನ್ನು ಸ್ನೇಹಿತರಾಗಿ ಮಾಡಿಕೊಂಡು ಅವರಿಗೆ ಸುಲಭವಾಗಿ ಹಣ ಮಾಡಿದ ವ್ಯಕ್ತಿಗಳ ಉದಾಹರಣೆ ನೀಡುತ್ತಾರೆ. ಅನಂತರ ಒಂದು ದಿನ ಭರ್ಜರಿ ಔತಣ ನೀಡಿ ಸಾಕಷ್ಟು ಪಳಗಿದ ಸಂಪನ್ಮೂಲ ವ್ಯಕ್ತಿಗಳಿಂದ ಇದು ತುಂಬಾ ಒಳ್ಳೆಯ ಯೋಜನೆ ಮತ್ತು ಸುಲಭವಾಗಿ ಹಣ ಮಾಡಬಹುದು ಎಂಬ ವಿಚಾರ ತುಂಬುತ್ತಾರೆ. ಮೋಸ ಇಲ್ಲವೇ ಇಲ್ಲ ಎಂದು ಬಿಂಬಿಸಿ ದಂಧೆಗೆ ಬೀಳುವಂತೆ ಮಾಡುತ್ತಾರೆ. ವಿವಿಧ ರೀತಿಯ ಉಡುಗೊರೆಗಳು, ವಿದೇಶಿ ಪ್ರವಾಸ, ಮನೆ -ನಿವೇಶನ ಇತ್ಯಾದಿಗಳ ಆಮಿಷವೊಡ್ಡಿ ಈ ದಂಧೆಗೆ ಬಿದ್ದವರು ಸ್ನೇಹಿತರು, ಬಂಧು ಬಳಗದವರನ್ನೂ ಕರೆದುಕೊಂಡು ಬರುವಂತೆ ಪ್ರೇರೇಪಿಸುತ್ತಾರೆ. ಜತೆಗೆ ತಮ್ಮ ದಂಧೆಯನ್ನು ವಿಸ್ತರಿಸುತ್ತಾರೆ.

ವಿವಿಧ ವ್ಯವಹಾರಗಳಲ್ಲಿ
ಚೈನ್‌ಲಿಂಕ್‌ ಹೂಡಿಕೆ ಒಂದೇ ರೀತಿಯ ವ್ಯವಹಾರವಾಗಿ ಉಳಿದಿಲ್ಲ. ಪಾಲಿಸಿ, ಚಿನ್ನದ ಮೇಲೆ, ಗೃಹೋಪಯೋಗಿ ವಸ್ತುಗಳ ಮೇಲೆ ಹೂಡಿಕೆ ರೀತಿಯಲ್ಲೂ ಬೆಳೆದಿದೆ. ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಶ್ರೀವರ ಜುವೆಲ್ಲರ್, ತತ್ವಮಸಿ, ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಸಮೃದ್ಧ ಜೀವನ್‌, ಗುರುಟೀಕ್‌, ಹಿಂದೂಸ್ತಾನ್‌ ಪ್ರೈ. ಲಿ., ಆರ್‌ಎಂಪಿ, ಅಗ್ರಿಗೋಲ್ಡ್‌ನಂತಹ ಚೈನ್‌ಲಿಂಕ್‌ ಸಂಸ್ಥೆಗಳು ಸಾವಿರಾರು ಮಂದಿಯನ್ನು ವಂಚಿಸಿವೆ. ಕೆಲವೊಂದು ಸಂಸ್ಥೆಗಳು ಪ್ರಕರಣ ದಾಖಲಾದ ಬಳಿಕ ಒಂದಷ್ಟು ಹಣವನ್ನು ಮರುಪಾವತಿಸಿವೆ. ಇಂತಹ ಸಂಸ್ಥೆಗಳು ಅನಧಿಕೃತ ವ್ಯವಹಾರವನ್ನೇ ನಡೆಸುತ್ತಿವೆ. ದಾಖಲೆಗಳಲ್ಲಿ ಟ್ರಸ್ಟ್‌ ರೀತಿಯಲ್ಲಿ ಕಾರ್ಯನಿರ್ವಹಿಸುವ ಇವುಗಳು ಜನರ ವಿಶ್ವಾಸ ಗಳಿಸಿದ ಬಳಿಕ ವಂಚನೆಯನ್ನು ಶುರುಮಾಡಿಕೊಳ್ಳುತ್ತವೆ. ನೂರಕ್ಕೂ ಹೆಚ್ಚು ಅನಧಿಕೃತ ಚೈನ್‌ಲಿಂಕ್‌ ಸಂಸ್ಥೆಗಳು ಜನರಿಗೆ ಆಮಿಷ ಒಡ್ಡುವ ಕಾರ್ಯ ನಿರ್ವಹಿಸುತ್ತಿವೆ.

ಮೋಸವಿಲ್ಲವೆಂಬ ಧೈರ್ಯ ತುಂಬಲು ಚೆಕ್‌ ನೀಡುವ ಕ್ರಮವನ್ನೂ ಅನುಸರಿಸಲಾಗುತ್ತಿದೆ. ಈ ವ್ಯವಹಾರದಲ್ಲಿ ವಂಚನೆಗೆ ಒಳಗಾದವರೊಬ್ಬರಿಗೆ 2020 ಇಸವಿ ನಮೂದಿನ ಚೆಕ್‌ ನೀಡಿ ನಂಬಿಕೆ ಬರುವಂತೆ ಮಾಡಲಾಗಿದೆ. ಆ ವ್ಯಕ್ತಿ ವಂಚನೆಯ ಅರಿವಾಗಿ ಪೊಲೀಸ್‌ ದೂರು ನೀಡಿದ ಬಳಿಕ ಹೊಸ ಚೆಕ್‌ ವಸೂಲು ಮಾಡಲಾಗಿದೆ.

Advertisement

ದಂಧೆ ವಿರುದ್ಧ ಜಾಗೃತಿ ಅಗತ್ಯ
ಅತಿ ವೇಗವಾಗಿ ಹಣ ಮಾಡುವ ದಂಧೆಗಳಿಗೆ ಯಾರೂ ಸೇರಬೇಡಿ. ಇಂತಹ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ವ್ಯವಹಾರದ ಕುರಿತು ಅರಿತುಕೊಳ್ಳುವುದು ಒಳಿತು. ಈ ಕುರಿತಾಗಿ ಯುವ ಜನತೆಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಅಗತ್ಯತೆ ಇದ್ದು, ಉಪನ್ಯಾಸಕರು, ನ್ಯಾಯವಾದಿಗಳು, ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ತ್ವರಿತ ಕಾರ್ಯಪ್ರವೃತ್ತವಾಗಬೇಕು.
– ಶ್ಯಾಮ್‌ಪ್ರಸಾದ್‌ ಕೈಲಾರ್‌, ನ್ಯಾಯವಾದಿ, ಪುತ್ತೂರು

ದೂರು ನೀಡುತ್ತಿಲ್ಲ
ವಾರದ ಹಿಂದೆ ಇಂತಹ ಪ್ರಕರಣವೊಂದು ದಾಖಲಾಗಿದ್ದು, ಅವರಿಗೆ ಹಣ ವಾಪಾಸು ಮಾಡಲು ವ್ಯವಸ್ಥೆ ಮಾಡಲಾಗಿದೆ. ಹಲವು ಸಂದರ್ಭದಲ್ಲಿ ಮೋಸ ಹೋದವರು ದೂರು ನೀಡುತ್ತಿಲ್ಲ. ಬೀಟ್‌ ಪೊಲೀಸ್‌ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ.
– ಓಮನ, ಸಬ್‌ ಇನ್ಸ್‌ಪೆಕ್ಟರ್‌,  ಪುತ್ತೂರು ನಗರ ಪೊಲೀಸ್‌ ಠಾಣೆ

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next