ಹಾವೇರಿ: ಸೂರ್ಯದೇವ ಜನರಿಗೆ ‘ಚುರುಕು’ ಮುಟ್ಟಿಸಿದ್ದು, ಜನರು ‘ಉಸ್ಸಪ್ಪಾ.. ಏನಿದು ಬಿಸಿಲು!’ ಎಂದು ಉದ್ಗರಿಸುತ್ತಲೇ ಬೆವರು ಒರೆಸಿಕೊಳ್ಳುವುದು ಸಾಮಾನ್ಯವಾಗಿದೆ.
ಬೆಳಗ್ಗೆ 7:30ರಿಂದಲೇ ರವಿ ತನ್ನ ಪ್ರಖರತೆಯನ್ನು ತೋರಲು ಪ್ರಾರಂಭಿಸಿದ್ದು, ಸಂಜೆ 6ರ ವರೆಗೂ ಬಿಸಿಲಿನ ಶಾಖ ಬೆವರಿಳಿಸುವಂತೆ ಮಾಡುತ್ತಿದೆ. ಮಧ್ಯಾಹ್ನ 1ರಿಂದ 4ಗಂಟೆ ವರೆಗಿನ ಸಮಯವಂತೂ ಕಾದ ಹೆಂಚಿನಂತೆ ಭೂಮಿ ಸುಡುತ್ತಿರುತ್ತದೆ. ಮಣ್ಣಿನ ರಸ್ತೆಗಳಲ್ಲಿ ಧೂಳು ಇನ್ನಷ್ಟು ಒಣಗಿ ಮೇಲೆದ್ದರೆ, ಡಾಂಬರ್ ರಸ್ತೆಗಳು ಶಾಖವನ್ನು ಪ್ರತಿಫಲಿಸಿ, ಇಡೀ ವಾತಾವರಣವನ್ನು ಇನ್ನಷ್ಟು ಸುಡುಬೆಂಕಿಯನ್ನಾಗಿಸುತ್ತಿವೆ.
ಮಹಿಳೆಯರು, ಮಕ್ಕಳು ಹಾಗೂ ಹಿರಿಯರಿಗೆ ಮಧ್ಯಾಹ್ನ 12 ಗಂಟೆಯ ನಂತರದ ಸಂಚಾರ ಸಂಕಟಮಯವಾಗುತ್ತಿದೆ. ಆಸ್ಪತ್ರೆ, ಕಚೇರಿ ಓಡಾಟ ಅನಿವಾರ್ಯವಾದರಿಗೆ ಈ ಸುಡುಬಿಸಿಲಿನ ತೀವ್ರತೆ ತುಸು ಹೆಚ್ಚೇ ತನ್ನ ‘ಬಿಸಿ’ಮೂಡಿಸುತ್ತಿದೆ.
ಕಾದ ಕಾವಲಿ: ಮನೆಗಳಲ್ಲಿ, ಕಚೇರಿಗಳಲ್ಲಿ ಬೆಳಗ್ಗೆಯಿಂದಲೇ ಫ್ಯಾನ್‌ಗಳು ತಿರುಗಲು ಪ್ರಾರಂಭಿಸುತ್ತಿವೆ. ಬಿಸಿಲಿನ ತೀವ್ರತೆ ಹೆಚ್ಚಾದಂತೆ ಫ್ಯಾನ್‌ನ ಗಾಳಿಯೂ ಬಿಸಿಯಾದಾಗ ಬದುಕು ಬಹಳ ಸಂಕಷ್ಟಮಯ ಎನಿಸಿ ‘ಮಳೆ ಬಂದರೆ ಸಾಕಪ್ಪ’ ಎಂದು ಅಪೇಕ್ಷೆಯ ಮಾತುಗಳು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯದ ಪಾಳಿಯೂ ಇದೆ. ವಿದ್ಯುತ್ ಎಷ್ಟೊತ್ತಿಗೆ ಇರುತ್ತದೆ, ಎಷ್ಟೋತ್ತಿಗೆ ಇರುವುದಿಲ್ಲ ಎಂಬುದು ತಿಳಿಯದ ರೀತಿಯಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ವಿದ್ಯುತ್ ಹೋದ ಮೇಲಂತೂ ಫ್ಯಾನಿನ ಬಿಸಿಗಾಳಿಯೂ ಮಾಯವಾಗಿ ಮನೆ, ಕಚೇರಿಗಳು ಮಂಡಕ್ಕಿ ಭಟ್ಟಿಯಂತೆ ಕಾವು ತುಂಬಿಕೊಳ್ಳುತ್ತಿವೆ.
Advertisement
ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಲು ಶುರುವಾಗಿದೆ. ಜಿಲ್ಲೆಯಲ್ಲಿ ಈಗ ಸೂರ್ಯ ಸರಾಸರಿ 36ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತನ್ನ ಪ್ರತಾಪ ತೋರುತ್ತಿದ್ದು, ಜನಜೀವನದ ಮೇಲೆ ಭಾರಿ ತಾಪದ ದುಷ್ಪರಿಣಾಮ ಬೀರುತ್ತಿದೆ.
Related Articles
Advertisement
ನೀರಿನ ಬವಣೆ: ಕುಡಿಯುವ ನೀರಿನ ಸಮಸ್ಯೆಗೂ ಹಾವೇರಿಗೂ ‘ಬಿಡದ’ ನಂಟು. ಜಿಲ್ಲೆಯ ಹಲವೆಡೆ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಹಲವೆಡೆ ಕೊಳವೆಬಾವಿಗಳಲ್ಲಿ ಅಂತರ್ಜಲವೂ ಖಾಲಿಯಾಗಿ ಬಂದ್ ಆಗಿವೆ. ನೀರು ಇರುವ ಕೊಳವೆ ಬಾವಿಗಳ ಬಳಿ ನಿತ್ಯ ನೂರಾರು ಜನರು ಕೊಡ ಹಿಡಿದು ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.
ನೀರು ವ್ಯಾಪಾರ: ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿರುವ ಜಿಲ್ಲೆಯಲ್ಲಿ ನೀರಿನ ವ್ಯಾಪಾರ ಬೇಸಿಗೆಯಲ್ಲಿ ಬಲು ಜೋರಾಗಿಯೇ ನಡೆಯುತ್ತಿದೆ. ವಿಶೇಷವಾಗಿ ನಗರ ಪ್ರದೇಶದ ಜನರಿಗೆ ನೀರುಣಿಸಲು ಕೆಲವರು ದೂರದ ಪ್ರದೇಶಗಳಿಂದ ಕುಡಿಯುವ ನೀರನ್ನು ಟ್ಯಾಂಕರ್‌ನಲ್ಲಿ ನೀರು ತಂದು ಮಾರುತ್ತಾರೆ. ಒಂದು ಟ್ಯಾಂಕರ್‌ಗೆ 400-500ರೂ., ಒಂದು ಕೊಡ ನೀರಿಗೆ 1ರಿಂದ 5- 10 ರೂ.ವರೆಗೂ ಮಾರುತ್ತಾರೆ. ನೀರಿನ ತುಟಾಗ್ರತೆ ಹೆಚ್ಚಿದಂತೆ ನೀರಿನ ದರವೂ ಏರುವುದು ಇಲ್ಲಿ ಮಾಮೂಲು.
ಹಣ್ಣು, ಕೋಲ್ಡ್: ಬಿರುಬಿಸಿಲಲ್ಲಿ ಬೆಂದಾದ ಮೈ, ಮನ ತಂಪಿಗಾಗಿ ಹಾತೊರೆಯುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ತಂಪು ಪಾನೀಯ ಅಂಗಡಿಗಳಿಗೆ, ಹಣ್ಣಿನ ಅಂಗಡಿಗಳಿಗೆ ವ್ಯಾಪಾರ ಬಲು ಜೋರು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ತಂಪು ಪಾನೀಯಗಳ ಅಂಗಡಿಗಳು ತಲೆ ಎತ್ತಿವೆ. ಐಸ್‌ಕ್ರೀಮ್ ಅಂಗಡಿಗಳಲ್ಲೂ ಜನ ಕೂಲ್ ಕೂಲ್ ಆಗುತ್ತಿದ್ದಾರೆ. ದೇಹಕ್ಕೆ ತಂಪು ಅನುಭವ ನೀಡುವ ಕಲ್ಲಂಗಡಿ ಹಣ್ಣು, ಎಳನೀರು ಬೆಲೆ ದುಪ್ಪಟ್ಟಾಗಿದೆ. ಸಾಮಾನ್ಯ ಗಾತ್ರ ಕಲ್ಲಂಡಗಿ ಹಣ್ಣು 80-150ರೂ. ವರೆಗೆ ಮಾರುತ್ತಿದ್ದರೆ, ಒಂದು ಎಳನೀರಿಗೆ 25-30ರೂ. ಆಗಿದೆ.
ನಾಳೆ, ನಾಡಿದ್ದು ಅಧಿಕ ತಾಪಮಾನ ಸಾಧ್ಯತೆ:
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ 10 ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ತಾಪಮಾನ ಸಾಧ್ಯತೆ ಹೀಗಿದೆ: ಮೇ 15ರಂದು 39 ಡಿಗ್ರಿ ಸೆಲ್ಸಿಯಸ್, ಮೇ 16ರಂದು 40 ಡಿಗ್ರಿ ಸೆಲ್ಸಿಯಸ್, ಮೇ 17ರಂದು 41ಡಿಗ್ರಿ ಸೆಲ್ಸಿಯಸ್, ಮೇ 18ರಂದು 40 ಡಿಗ್ರಿ ಸೆಲ್ಸಿಯಸ್, ಮೇ 19ರಂದು 39 ಡಿಗ್ರಿ ಸೆಲ್ಸಿಯಸ್, ಮೇ 20ರಂದು 39 ಡಿಗ್ರಿ ಸೆಲ್ಸಿಯಸ್, ಮೇ 21ರಂದು 38 ಡಿಗ್ರಿ ಸೆಲ್ಸಿಯಸ್, ಮೇ 22ರಂದು 38ಡಿಗ್ರಿ ಸೆಲ್ಸಿಯಸ್.