ಬೆಂಗಳೂರು: ಬಿಜೆಪಿಯವರು ಗೂಂಡಾಗಿರಿ ಮಾಡಿಕೊಂಡು ಬರುತ್ತಿದ್ದು, ಈ ಗೂಂಡಾಗಳಿಂದ ಬೆಂಗಳೂರು ಜನರನ್ನು ರಕ್ಷಿಸಬೇಕಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಡೆಸಲು ಉದ್ದೇಶಿಸಿರುವ “ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮದೇ ಪಕ್ಷದ ಶಾಸಕನ ಪುತ್ರ ಮಹಮದ್ ನಲಪಾಡ್ ಪ್ರಕರಣದಲ್ಲಿ ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತಪ್ಪು ಯಾರೇ ಮಾಡಿದ್ದರೂ ಕ್ರಮಕೈಗೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದರು.
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಿಜೆಪಿ ಮಹಾನುಭಾವರು 8 ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ದರು. 11 ಪಾರಂಪರಿಕ ಕಟ್ಟಡಗಳನ್ನು ಅಡಮಾನವಿರಿಸಿ, ಗಾರ್ಡನ್ ಸಿಟಿ ಬೆಂಗಳೂರಿಗೆ ಗಾಬೇìಜ್ ಸಿಟಿ ಅಪಖ್ಯಾತಿ ತಂದಿದ್ದರು. ನಾವು ಬಂದ ನಂತರ ತ್ಯಾಜ್ಯ ಸಂಸ್ಕರಣೆಗೆ ಕ್ರಮಕೈಗೊಂಡಿದ್ದು, ಅಡಮಾನವಿರಿಸಿದ ಕಟ್ಟಡಗಳನ್ನು ಬಿಡಿಸಿಕೊಳ್ಳುತ್ತಿದ್ದೇವೆ. ಇಂತಹವರು ಬೆಂಗಳೂರು ರಕ್ಷಿಸಿ ಎಂದು ಹೇಳುತ್ತಿದ್ದು, ಬಿಜೆಪಿಯವರಿಂದ ಮೊದಲು ನಗರದ ಜನತೆಯನ್ನು ರಕ್ಷಿಸಬೇಕಿದೆ ಎಂದರು.
ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಶೇ.8ರಷ್ಟಿತ್ತು. ನಮ್ಮ ಸರ್ಕಾರ ಬಂದ ನಂತರ ಅದು ಶೇ.5ಕ್ಕೆ ಇಳಿಕೆಯಾಗಿದೆ. ಅಪರಾಧ ಪ್ರಮಾಣದಲ್ಲಿ ಬೆಂಗಳೂರು ದೇಶದಲ್ಲಿ 10ನೇ ಸ್ಥಾನದಲ್ಲಿದ್ದು, ಬೆಂಗಳೂರು 2ನೇ ಸ್ಥಾನದಲ್ಲಿದೆ ಎಂದು ಹೇಳುವ ಈ ಹಿಂದಿನ ಗೃಹ ಸಚಿವರು ಮಾಧ್ಯಮಗಳ ಮುಂದೆ ಬಹಿರಂಗ ಚರ್ಚೆಗೆ ಬರಲಿ ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ಈ ಕ್ಷಣ ಚುನಾವಣೆ ನಡೆದರೂ ಗೆಲ್ಲೋದು ನಾವೇ: ವಿಧಾನಸಭಾ ಚುನಾವಣೆ ಈ ಕ್ಷಣ ನಡೆದರೂ, ನಾಳೆ ನಡೆದರೂ ಅಧಿಕಾರಕ್ಕೆ ಬರುವವರು ನಾವೇ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಹೋಗುತ್ತಾರೆ? ಇವರು ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಗಳಾದರು. ಅದೆಷ್ಟು ಮುಖಂಡರು ಜೈಲಿಗೆ ಹೋದರೋ…
ರೈತರ ಸಮಸ್ಯೆ, ಮಹದಾಯಿ ವಿಚಾರ, ರೈತರ ಸಾಲ ಮನ್ನಾ, ಬರಗಾಲದಲ್ಲಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ನೀಡುವುದು ಹಾಗೂ ಕಾವೇರಿ ವಿಚಾರದಲ್ಲಿ ಸ್ಪಂದಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವನ್ನು ರಾಜ್ಯ ಬಿಜೆಪಿಯವರು ಮಾಡಲೇ ಇಲ್ಲ. ಹೀಗಾಗಿ ಇವರ ಮುಖ ನೋಡಿ ಯಾರು ಓಟು ಹಾಕುತ್ತಾರೆ ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.