Advertisement

ಕೆಂಡೋತ್ಸವ ಸಂಭ್ರಮದಲ್ಲಿ ಕೋವಿಡ್‌ ಲೆಕ್ಕಕ್ಕೇ ಇಲ್ಲ!

04:22 PM Oct 27, 2020 | Suhan S |

ಚನ್ನಗಿರಿ: ತಾಲೂಕಿನ ಕರೇಕಟ್ಟೆ ಗ್ರಾಮದಲ್ಲಿ ದಸರಾ ಹಾಗೂ ವಿಜಯದಶಮಿ ಅಂಗವಾಗಿ ನಡೆದ ಗಾಳಿ ಮಾರಮ್ಮ ದೇವಿಯ ಕೆಂಡೋತ್ಸವದಲ್ಲಿ ಸಾವಿರಾರು ಜನರು ಕೊರೊನಾ ಲೆಕ್ಕಿಸದೆಪಾಲ್ಗೊಂಡಿದ್ದರು. ಇದರಿಂದ ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕು ವ್ಯಾಪಿಸುವ ಭೀತಿ ಎದುರಾಗಿದೆ.

Advertisement

ಜನರು ಗುಂಪು ಗುಂಪಾಗಿ ಸೇರಿದ್ದೇ ಅಲ್ಲದೆ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಆದರೂ ಯಾವ ಅಧಿಕಾರಿಯೂ ಈಬಗ್ಗೆ ಗಮನ ನೀಡದಿರುವುದು ಸೋಜಿಗ ಮೂಡಿಸಿದೆ. ರಾಜ್ಯದಲ್ಲಿ ಪ್ರತಿ ದಿನ ಕೂಡ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ತಾಲೂಕಿನಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇದ್ಯಾವುದನ್ನೂ ಲೆಕ್ಕಿಸದೇ ಗಾಳಿಮಾರಮ್ಮ ಜಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.  ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ್ದ ಸಾವಿರಾರು ಮಂದಿ ಕರೇಕಟ್ಟೆ ಗ್ರಾಮದಲ್ಲಿ ನಡೆಯುವ ಜಾತ್ರೆಗೆ ಮರಳಿದ್ದಾರೆ. ಕೋವಿಡ್‌ ಸೋಂಕಿನ ಬಗ್ಗೆ ಯಾವುದೇ ಮುಂಜಾಗ್ರತಾ ವಹಿಸದೆ ಕೆಂಡೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರ ಜಾಗೃತಿ ಮೂಡಿಸುತ್ತಲೇ ಇದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಆದರೆ ಕರೇಕಟ್ಟೆಯಲ್ಲಿ ನಡೆದ ಕೆಂಡೋತ್ಸವದಲ್ಲಿ ಪಾಲ್ಗೊಂಡಿದ್ದವರಲ್ಲಿ ಬಹುತೇಕ ಜನರು  ಕನಿಷ್ಠ ಪಕ್ಷ ಮಾಸ್ಕ್ ಕೂಡ ಧರಿಸಿರಲಿಲ್ಲ. ಕೆಂಡೋತ್ಸವ ನಡೆಯುವ ಬಗ್ಗೆ ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ.

ಕೋವಿಡ್‌ ಬಗ್ಗೆ ಮುಂಜಾಗ್ರತೆ ವಹಿಸದಿದ್ದರೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವ್ಯಾಪಿಸುವುದು ಖಚಿತ. ಆದ್ದರಿಂದ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಬಿಗಿ ಕ್ರಮ ಕೈಗೊಳ್ಳಲು ಸಂಬಂಧಿಸಿದವರು ಮುಂದಾಗಬೇಕಿದೆ.

ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಪಿಡಿಒ ಗಮನಕ್ಕೆ ಬಾರದೆ  ಧಾರ್ಮಿಕ ಆಚರಣೆ ನಡೆಯುವಂತಿಲ್ಲ. ಕರೇಕಟ್ಟೆ ಗ್ರಾಮದಲ್ಲಿ ನಡೆದ ಕೆಂಡೋತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ತಾಪಂ ಇಒ ಜೊತೆ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ಪಟ್ಟರಾಜ ಗೌಡ, ಚನ್ನಗಿರಿ ತಹಶೀಲ್ದಾರ್‌

 

Advertisement

-ಶಶೀಂದ್ರ ಸಿ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next