Advertisement

ಕಾಡು ಪ್ರಾಣಿಗಳ ಹಾವಳಿಗೆ ಹೈರಾಣಾದ ಜನರು

12:43 PM May 13, 2019 | Team Udayavani |

ಚನ್ನರಾಯಪಟ್ಟಣ: ಕಾಡುಹಂದಿ, ಚಿರತೆ ಹಾಗೂ ನವಿಲಿನ ಹಾವಳಿಗೆ ತಾಲೂಕಿನ ಗ್ರಾಮೀಣ ಭಾಗದ ರೈತ ಹೈರಾಣಾಗುತ್ತಿದ್ದಾರೆ. ಕಾಡು ಪ್ರಾಣಿಗಳಿಗೆ ಬೇಸಿಗೆ ಬಿಸಿ ತಟ್ಟಿದ್ದು ನೀರು, ಆಹಾರ ಅರಸಿ ನಾಡಿನತ್ತ ಹೆಜ್ಜೆ ಹಾಕುತ್ತಿರುವುದರಿಂದ ಜನತೆ ಕಂಗಾಲಾಗಿದ್ದಾರೆ.

Advertisement

ಗ್ರಾಮೀಣ ಭಾಗದಲ್ಲಿ ಜನರು ಒಂಟಿಯಾಗಿ ತೋಟಕ್ಕೆ ತೆರಳಲು ಭಯ ಪಡುವಂತಾಗಿದೆ. ತೋಟದ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟಕ್ಕೆ ಮನೆ ಯಿಂದ ಹೊರಬರಬೇಕೆಂದರೆ ಸೂರ್ಯ ನೆತ್ತಿಯ ಮೇಲೆ ಬರಬೇಕು. ರಾತ್ರಿ ಸೂರ್ಯಾಸ್ತವಾಗುವುದರ ಒಳಗೆ ಮನೆ ಸೇರುವುದು ಅನಿವಾರ್ಯವಾಗಿದೆ. ಕುರಿ ಹಾಗೂ ರಾಸುಗಳನ್ನು ಮೇಯಿಸುವ ವಯೋವೃದ್ಧರು ತಮ್ಮ ಜೀವ ಬಿಗಿ ಹಿಡಿದುಕೊಂಡು ಕೆರೆ ಇಲ್ಲವೇ ಬಾರೆ ಅಂಗಳಕ್ಕೆ ತರಳವಂತಾಗಿದೆ.

ಕಣ್ಣು ಮುಚ್ಚಿ ಕುಳಿತ ಅರಣ್ಯ ಇಲಾಖೆ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಅಣ್ಣೇನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಮೂರ್‍ನಾಲ್ಕು ಚಿರತೆಗಳು ಒಟ್ಟಿಗೆ ಸಂಚಾರ ಮಾಡುತ್ತಿದ್ದು ಗ್ರಾಮದ ನಾಯಿ ಗಳನ್ನು ಭೇಟೆಯಾಡಿರುವುದಲ್ಲದೇ ರೈತ ಗುರು ಅವರಿಗೆ ಸೇರಿದ್ದ ಒಂದು ಕುರಿ ಹಾಗೂ ಎರಡು ಕರು ಗಳನ್ನು ತಿಂದುಹಾಕಿದೆ. ಗ್ರಾಮದ ಸಮೀಪದಲ್ಲಿ ದೂತ ನೂರು ಕಾವಲಿನಲ್ಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ವಿದೆ. ಇಲ್ಲಿ ಬೀಡು ಬಿಟ್ಟಿರುವ ಕಾಡುಪ್ರಾಣಿಗಳು ರಾತ್ರಿ ಗ್ರಾಮದ ಒಳಗೆ ಪ್ರವೇಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ.

ಕೆರೆ ಕಟ್ಟೆಯಲ್ಲಿ ನೀರಿಲ್ಲ, ಕೃಷಿಕರು ಕೊಳವೆ ಬಾವಿ ಯನ್ನು ಅವಲಂಬಿತರಾಗಿ ತೋಟಕ್ಕೆ ನೀರು ಹಾಯಿ ಸುವುದು, ಇಲ್ಲವೇ ಸೊಪ್ಪು, ತರಕಾರಿ, ರೇಷ್ಮೆ ಬೆಳೆ ಮಾಡಲು ಮುಂದಾಗಿದ್ದಾರೆ. ಆದರೆ ಕಾಡು ಪ್ರಾಣಿ ಗಳು ನೀರು ಅರಸಿ ತೋಟದಲ್ಲಿ ನಿರ್ಮಾಣ ಮಾಡಿ ರುವ ತೊಟ್ಟಿಗೆ ಆಗಮಿಸುತ್ತಿವೆ ಈ ವೇಳೆ ಒಂಟಿಯಾಗಿ ಜನ ಇಲ್ಲವೆ ಜಾನುವಾರ ಸಿಕ್ಕರೆ ಚಿರತೆ ಬೇಟೆಯಾಡು ತ್ತದೆ. ಹಾಗಾಗಿ ರೈತರು ಭಯದಿಂದ ಕೃಷಿ ಚಟುವಟಿಕೆ ಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಿದೆ.

ಬೋನಿಗೆ ಮೊರೆ ಹೋದ ಗ್ರಾಮೀಣರು: ತಾಲೂಕಿನ ಹಿರೀಸಾವೆ ಎಂ.ಕೆ.ಹೊಸೂರು ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಗ್ರಾಮದಲ್ಲಿನ ನಾಯಿಗಳು ಹಾಗೂ ರಾಸುಗಳನ್ನು ರಾತ್ರಿವೇಳೆ ಭೇಟಿಯಾಡುತ್ತಿದ್ದ ರಿಂದ ಗ್ರಾಮಸ್ಥರು ಭಯಬೀತರಾಗಿದ್ದು ಅರಣ್ಯ ಇಲಾಖೆಯ ನೆರವಿನಿಂದ ಚಿರತೆ ಸೆರೆ ಹಿಡಿಯುವ ಬೋನು ಇಟ್ಟಿದ್ದಾರೆ.

Advertisement

ಕಳೆದ 20 ದಿನಗಳಿಂದ ಎರಡು ಚಿರತೆ ಮರಿಗಳು ಸೇರಿದಂತೆ ನಾಲ್ಕು ಚಿರತೆಗಳು ಗ್ರಾಮದ ಹೊರ ವಲಯದಲ್ಲಿ ರೈತರಿಗೆ ಕಾಣಿಸಿಕೊಂಡಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಗ್ರಾಮಸ್ಥರು ಕೃಷಿ ಭೂಮಿಗೆ ತೆರಳಲು ಹಿಂಜರಿಯುತ್ತಿದ್ದರು. ಕಳೆದ ವಾರ ಗ್ರಾಮದ ಜವರೇಗೌಡ ಅವರಿಗೆ ಸೇರಿದ ಒಂದು ಕುರಿ, ವೆಂಕಟೇಶ್‌ಗೆ ಸೇರಿದ ಒಂದು ಮೇಕೆಯ ಮೇಲೆ ದಾಳಿ ಮಾಡಿದ್ದವು. ಅಲ್ಲದೇ ಗ್ರಾಮದಲ್ಲಿ ಸುಮಾರು 10 ಕ್ಕೂ ಹೆಚ್ಚು ಬೀದಿ ನಾಯಿಯನ್ನು ತಿಂದು ಹಾಕಿವೆ. ದಿನಕಳೆದಂತೆ ಗ್ರಾಮದ ರಾಸುಗಳು ಒಂದೊಂದೇ ಕಣ್ಮರೆ ಆಗುತ್ತಿರುವುದರಿಂದ ಗ್ರಾಮಸ್ಥರು ಬೋನು ಇಟ್ಟಿದ್ದಾರೆ.

ದೇವರ ಪೂಜೆಗೂ ಅಡ್ಡಿ: ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಚಿಕ್ಕೋನಹಳ್ಳೀ ಅಮರಗಿರಿ ರಂಗ ನಾಥನ ಬೆಟ್ಟದಲ್ಲಿ ಎತ್ತೇಚ್ಛವಾಗಿ ಮರ ಗಿಡಗಳು ಇರು ವುದರಿಂದ ಅಲ್ಲಿ ಚಿರತೆ ವಾಸವಾಗಿದ್ದು, ವಾರಂತ್ಯದಲ್ಲಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಕಾಣಿಸಿಕೊಂಡಿವೆ. ಬೆಟ್ಟದ ಮೇಲಿನ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕರು ದೇವರ ಪೂಜೆಯನ್ನು ಭಯದಲ್ಲಿ ಮಾಡುವಂತಾಗಿದೆ.

ಚಿರತೆಯ ಆಶ್ರಯ ತಾಣ ಗೊಮ್ಮಟಗಿರಿ: ಇತಿಹಾಸ ಪ್ರಸಿದ್ಧ ಕ್ಷೇತ್ರ ಶ್ರವಣಬೆಳಗೊಳದಲ್ಲಿ ವಿಂದ್ಯಗಿರಿ ಹಾಗೂ ಚಂದ್ರಗಿರಿ ಎರಡೂ ಬೆಟ್ಟದಲ್ಲಿಯೂ ಚಿರತೆಗಳು ಬಿಡುಬಿಟ್ಟಿವೆ. ನಿತ್ಯವೂ ನೂರಾರು ಪ್ರವಾಸಿಗರು ರಾಜ್ಯ ಹೊರರಾಜ್ಯದಿಂದ ಆಗಮಿಸಿ ಎರಡು ಬೆಟ್ಟ ವನ್ನು ಏರುತ್ತಾರೆ. ಹೀಗೆ ಬೆಟ್ಟ ಏರುವ ಪ್ರವಾಸಿಗರು ತಿಂಡಿ, ತಿನಿಸುಗಳನ್ನು ತೆಗೆದುಕೊಂಡು ಹೋಗುತ್ತಾರೆ ಬೆಟ್ಟದ ಕಲ್ಲು ಇಲ್ಲವೇ ಮರದ ಕೆಳಗೆ ಕುಳಿತು ತಿಂಡಿ ಸೇವಿಸಿ ಉಳಿದೆ ತಿಂಡಿಯನ್ನು ಅಲ್ಲಿಯೇ ಬಿಸಾಡುವುದರಿಂದ ಬೆಟ್ಟದ ಮೇಲೆ ನಾಯಿಗಳ ಸಂಖ್ಯೆ ಹೆಚ್ಚಿದೆ.

ಬೆಟ್ಟಕ್ಕೆ ಬರುವ ನಾಯಿಗಳೇ ಆಹಾರ: ಚಿರತೆಗಳು ಆಹಾರಕ್ಕಾಗಿ ಶ್ರಮ ಪಡುವಂತಿಲ್ಲ. ಬೆಟ್ಟದ ಮೇಲೆ ಬಿಸಾಡಿದ ಆಹಾರ ತಿನ್ನಲು ನಾಯಿಗಳು ಬರುತ್ತವೆ. ಈ ನಾಯಿಗಳೇ ಚಿರತೆಗೆ ಆಹಾರವಾಗಿವೆ. ನಾಯಿಗಳು ಬೆಟ್ಟವನ್ನು ಏರುವುದ ನಿಲ್ಲಿಸಿದರೆ ಚಿರತೆಗಳು ಬೆಟ್ಟದಿಂದ ಹೊರಗೆ ಹೋಗುತ್ತವೆ,

ಪ್ರೇಮಿಗಳಿಂದ ಹಿಡಿಶಾಪ: ಚಿರತೆ ಬೆಟ್ಟದಲ್ಲಿ ಬಂದು ನೆಲಸಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿ ಗರು ಮಾತ್ರ ಚಿರತೆಗೆ ಶಾಪ ಹಾಕುತ್ತಿಲ್ಲ ಪ್ರೇಮಿಗಳೂ ಹಿಡಿಶಾಪ ಹಾಕುತ್ತಿದ್ದಾರೆ. ಶ್ರವಣಬೆಳಗೊಳದಲ್ಲಿನ ಚಿಕ್ಕಬೆಟ್ಟಕ್ಕೆ ಹಿರಿಸಾವೆ, ಚನ್ನರಾಯಪಟ್ಟಣ, ಕಿಕ್ಕೇರಿ, ಕದಬಳ್ಳಿ ಹೀಗೆ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೇಮಿಗಳು ಸಾಕಷ್ಟು ಮಂದಿ ನಿತ್ಯವೂ ಆಗಮಿಸಿ ಬೆಟ್ಟದಲ್ಲಿ ಕಾಲ ಕಳೆಯು ತ್ತಾರೆ. ಬೇಸಿಗೆಯಲ್ಲಿ ಚಿರತೆ ಕಾಟ ಇರುವುದರಿಂದ ಪ್ರೇಮಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರೇಮಿಗಳು ಇಲ್ಲಿಂದ ಮೇಲುಕೋಟೆಗೆ ಶಿಪ್ಟ್: ಶ್ರವಣಬೆಳಗೊಳ ಬೆಟ್ಟದಲ್ಲಿ ಚಿರತೆ ಬೀಡು ಬಿಟ್ಟಿರು ವುದರಿಂದ ಪ್ರೇಮಿಗಳು ಇಲ್ಲಿಗೆ ಕೆಲವೇ ಕಿ.ಮೀ. ದೂರ ದಲ್ಲಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆ ಹಾಗೂ ಕೆರೆತಣ್ಣೂರು ಪ್ರವಾಸಿ ತಾಣಕ್ಕೆ ಶಿಪ್ಟ್ ಆಗಿದ್ದಾರೆ. ಪ್ರೇಮಿಗಳಿಗೆ ಬಹಳ ಅಚ್ಚು ಮೆಚ್ಚಿನ ತಾಣಗಳಲ್ಲಿ ಒಂದು ಬೆಟ್ಟ ಗುಡ್ಡಗಳು ಅದಕ್ಕಾಗಿ ಮೇಲುಕೋಟೆ ಈಗ ಪ್ರೇಮಿಗಳಿಗೆ ಬಹಳ ಸುರಕ್ಷಿತವಾದ ತಾಣ ವಾಗಿದೆ .

ಕ್ಯಾಂಪ್‌ ವ್ಯವಸ್ಥೆ ಕಲ್ಪಿಸಿ: ಜಿಲ್ಲೆಯ ಆಲೂರು ಹಾಗೂ ಸಕಲೇಶಪುರ ತಾಲೂಕುಗಳನ್ನು ಆನೆ ಓಡಿಸಲು ಕ್ಯಾಪ್‌ಗ್ಳನ್ನು ಸರ್ಕಾರ ನೇಮಿಸಿದೆ. ಇದೇ ಮಾದರಿಯಲ್ಲಿ ತಾಲೂಕಿಗೆ ನಾಲ್ಕು ಕ್ಯಾಂಪ್‌ ವ್ಯವಸ್ಥೆ ಕಲ್ಪಿಸಿದರೆ ಚಿರತೆ ಹಾವಳಿ ಇಲ್ಲದಂತೆ ಮಾಡಬಹುದು. ಇಲಾಖೆ ಯಲ್ಲಿ ಇರುವ ವಾಹನ ತೀರ ಹಳೆಯದಾಗಿದ್ದು ಗ್ರಾಮೀಣ ಭಾಗಕ್ಕೆ ಸಂಚಾರ ಮಾಡಲು ಯೋಗ್ಯವಿಲ್ಲ ದಂತಾಗಿದೆ. ಹಾಗಾಗಿ ಅಧಿಕಾರಿಗಳು ಗ್ರಾಮಗಳಿಗೆ ತೆರಳಲು ತೊಂದರೆ ಪಡುತ್ತಿದ್ದಾರೆ.

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next