ಬೆಂಗಳೂರು: ಕಾರ್ಮಿಕ ಸಂಘನೆಗಳು ನೀಡಿದ್ದ ಭಾರತ್ ಬಂದ್‌ಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಿನಪೂರ್ತಿ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ರಜೆಯ ವಾತಾವರಣ ಕಂಡುಬಂತು. ಈ ನಡುವೆ ಶಾಲಾ ಕಾಲೇಜು ಹೊರತುಪಡಿಸಿ ಬಹುತೇಕ ಸರ್ಕಾರಿ, ಖಾಸಗಿ ಸಂಸ್ಥೆಗಳು ತೆರೆದಿದ್ದವು.
ಮಂಗಳವಾರ ಮುಂಜಾನೆ ಮೆಜೆಸ್ಟಿಕ್, ಯಶವಂತಪುರ, ಜಯನಗರ ಮೊದಲಾದ ಕಡೆಗಳಿಂದ ಬಿಎಂಟಿಸಿ ಬಸ್ ಹೊರಟವಾದರೂ, ಮಲ್ಲೇಶ್ವರ, ಯಶವಂತಪುರ, ಚಿಕ್ಕಜಾಲ, ಶೇಷಾದ್ರಿಪುರ, ಬ್ಯಾಟರಾಯನಪುರದಲ್ಲಿ ಬಸ್‌ಗೆ ಕಲ್ಲು ಎಸೆದಿದ್ದರಿಂದ ದಿಢೀರನೇ ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಆಟೋ ಮತ್ತು ಟ್ಯಾಕ್ಸಿಗಳು ಎಂದಿನಂತೆ ಸಂಚರಿಸುತ್ತಿದ್ದರೂ, ವಾಹನ ಸಂಚಾರದ ಪ್ರಮಾಣ ತುಂಬ ಕಡಿಮೆ ಇತ್ತು. ಜನ ಜೀವನದ ಮೇಲೆ ಬಂದ್ ಯಾವುದೇ ಪರಿಣಾಮ ಬೀರಿರಲಿಲ್ಲ.
ಬೆಳಗ್ಗೆ 11 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರ ಬಹುತೇಕ ಕಡೆ ನಿಲ್ಲಿಸಲಾಗಿತ್ತು. 11 ಗಂಟೆಯ ನಂತರ ಎಲ್ಲ ರೂಟ್‌ಗಳಲ್ಲಿ ಬೆರಳೆಣಿಕೆಯ ಬಸ್ ಸಂಚಾರ ಆರಂಭವಾಯಿತು. ಮಧ್ಯಾಹ್ನ 2 ಗಂಟೆಯ ನಂತರ ಬಸ್‌ಗಳ ಸಂಖ್ಯೆ ಹೆಚ್ಚಾಯಿತು. ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮಾಲ್‌ಗಳು ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದರೂ, ಚಲನಚಿತ್ರ ಪ್ರದರ್ಶನ ಎಂದಿನಂತೆ ನಡೆದಿದೆ.
ಆಸ್ಪತ್ರೆ, ಔಷಧಾಲಯ, ದಿನಸಿ ಅಂಗಡಿಗಳು, ಟೀ-ಕಾಫಿ ಸ್ಟಾಲ್ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಎಂದಿನಂತೆ ತೆರೆದಿದ್ದವು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಹಾಗೂ ನೃಪತುಂಗ ರಸ್ತೆಯ ಶಿಕ್ಷಣ ಇಲಾಖೆ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೇವೆಗೆ ಹಾಜರಾಗಲು ಯಾವುದೇ ರೀತಿಯ ಅಡೆತಡೆಯಾಗಿರಲಿಲ್ಲ. ಕಚೇರಿಯಲ್ಲಿ ಹಾಜರಾತಿ ಸ್ವಲ್ಪ ಕಡಿಮೆ ಇತ್ತು. ಐಟಿ, ಬಿಟಿ ಹಾಗೂ ಹಲವು ಖಾಸಗಿ ಸಂಸ್ಥೆಗಳು ಮುಂಚಿತವಾಗಿಯೇ ರಜೆ ಘೋಷಣೆ ಮಾಡಿದ್ದವು. ಇನ್ನು ಕೆಲವು ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ.
ಪರೀಕ್ಷೆ ಮುಂದೂಡಿಕೆ: ಸೋಮವಾರ ಸಂಜೆಯೇ ಶಾಲಾ ಕಾಲೇಜುಗಳಿಗೆ ರಜೆ ಘೋಸಿದ್ದರಿಂದ ಯಾವುದೇ ರೀತಿಯ ಶೈಕ್ಷಣಿಕ ಚುಟುವಟಿಕೆ ನಡೆದಿರಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಕೇಂದ್ರ ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ನಗರದಾದ್ಯಂತ ಇರುವ ಗಾರ್ಮೆಂಟ್‌ಗಳು ಬಂದ್‌ಗೆ ಬೆಂಬಲ ರಜೆ ಘೋಸಿದ್ದವು. ಕೆಲವು ಖಾಸಗಿ ಶಾಲೆಗಳಲ್ಲಿ ಬಂದ್ ನಿಮಿತ್ತ ಎರಡು ದಿನ ರಜೆ ಘೋಷಿಸಲಾಗಿದೆ ಎಂದು ಶಾಲಾ ಸೂಚನ ಫಲಕದಲ್ಲಿ ನೋಟಿಸ್ ಹಾಕಲಾಗಿದೆ.
ಬೆಳಗ್ಗೆಯಿಂದಲೇ ರಸ್ತೆಗೆ ಇಳಿದ ಕಾರ್ಮಿಕ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು, ಟೌನ್‌ಹಾಲ್‌ನಿಂದ ಕೆ.ಜಿ.ರಸ್ತೆ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದವರೆಗೂ ಕೆಂಪು ಬಾವುಟ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ ಪೀಣ್ಯ ಎರಡನೇ ಹಂತದಿಂದ ಜಾಲಹಳ್ಳಿ ಕ್ರಾಸ್‌ವರೆಗೂ ಸುಮಾರು 3 ಸಾವಿರ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೆ.ಆರ್.ಪುರ ಸಹಿತ ನಗರದ ಹೊರವಲಯದ ಹಲವುಕಡೆ ಪ್ರತಿಭಟನಾ ರ್ಯಾಲಿ ನಡೆಯಿತು. ಕಾರ್ಮಿಕ ಸಂಘಟನೆಗಳ ಬಂದ್ ಕರೆಗೆ ಬೆಂಬಲ ಸೂಚಿಸಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಗಿರೀಶ್‌ಗೌಡ ಮೊದಲಾದವರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ರಸ್ತೆ ಮೇಲೆ ಮಲಗುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ವಹಿವಾಟು ಕುಸಿತ: ಕೆ.ಆರ್.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಹಾಗೂ ಎಪಿಎಂಸಿ ಯಾರ್ಡ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯಶವಂತಪುರ ಎಪಿಎಂಸಿಗೆ ಮಂಗಳವಾರ ದವಸಧ್ಯನ ಮತ್ತು ಬೆಳೆಕಾಳು ತುಂಬಿಕೊಂಡು ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದಿರುವ ಲಾರಿಗಳ ಸಂಖ್ಯೆ ಕಡಿಮೆ ಇತ್ತು. ದಿನಪೂರ್ತಿ ಸರಿಸುಮಾರು 50 ಕೋಟಿಯಷ್ಟು ನಡೆಯುತ್ತಿದ್ದ ವಹಿವಾಟು ಬಂದ್‌ನಿಂದ 30ರಿಂದ 25 ಕೋಟಿಗೆ ಇಳಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬಿ.ಎಲ್.ಶಂಕರಪ್ಪ ಮಾಹಿತಿ ನೀಡಿದರು.