ಕುಕನೂರು: ತಾಲೂಕನ್ನು ಸರ್ಕಾರ ಬರಗಾಲ ಪೀಡಿತವೆಂದು ಘೋಷಿಸಿ 50 ಲಕ್ಷ ರೂ. ಮಂಜೂರು ಮಾಡಿ, ಪ್ರತಿ ರೈತನ ಖಾತೆಗೆ ಇಂತಿಷ್ಟು ಎಂದು ಹಣ ಜಮೆ ಮಾಡಿ ಪರಿಹಾರ ನೀಡಿದ್ದೇವೆ ಎಂದು ಕೈ ತೊಳೆದುಕೊಂಡಿದೆ. ಆದರೆ ಬರ ನಿರ್ವಹಣೆಗೆ ಸಮಪರ್ಕ ಕಾರ್ಯ ನಿರ್ವಹಿಸಿಲ್ಲ. ತಾಲೂಕಿನಲ್ಲಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.
ಗಗನಕ್ಕೇರಿದ ಮೇವಿನ ಬೆಲೆ: ಜಾನುವಾರುಗಳಿಗೆ ಮೇವು ಖರೀದಿಸಿ, ಸಂಗ್ರಹಿಸಬೇಕೆಂದಿರುವ ರೈತರಿಗೆ ಹಣ ನೀಡಿದರೂ ಮೇವು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಬರಗಾಲದಲ್ಲಿ ಮೇವಿಗೆ ತಾಲೂಕಿನಲ್ಲಿ ಚಿನ್ನದ ಬೆಲೆ ಬಂದಿದೆ. ರೈತರು ನೀರಾವರಿ ಭಾಗದಿಂದ ಹೆಚ್ಚಿನ ಬೆಲೆಕೊಟ್ಟು ನೆಲ್ಲುಹುಲ್ಲನ್ನು ಖರೀದಿಸಿ ತರುತ್ತಿದ್ದಾರೆ. ನೀರಾವರಿ ವಂಚಿತ ತಾಲೂಕಿನ ಕುಕನೂರು, ತಳಕಲ್ ಹಾಗೂ ಮಂಗಳೂರು ಹೋಬಳಿಗಳ ಬಹುತೇಕ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಹೆಚ್ಚಿದೆ.
ಜಾನುವಾರುಗಳನ್ನು ಸದೃಢಗೊಳಿಸುವ ಕಾಳುಕಡಿ ಬಿಟ್ಟು ಮೆಕ್ಕೆಜೋಳದ ಮೇವು ಬಂಡಿಗೆ 1200, ಟ್ರ್ಯಾಕ್ಟರ್‌ಗೆ 3500, ಜೋಳದ ಮೇವು ಕ್ರಮವಾಗಿ 4000 ಮತ್ತು 6000, ಭತ್ತದ ಹುಲ್ಲು ಕ್ರಮವಾಗಿ 5500 ಮತ್ತು 6500 ಹಾಗೂ ಶೇಂಗಾ ಹೊಟ್ಟು ಕ್ರಮವಾಗಿ 4000 ಮತ್ತು 5000 ಕೊಟ್ಟು ತರುವುದು ಅನಿವಾರ್ಯವಾಗಿದೆ. ತಾಲೂಕಿನಲ್ಲಿ 60 ಸಾವಿರ ಜಾನುವಾರುಗಳಿವೆ. ಬರಗಾಲದ ಹಿನ್ನೆಲೆಯಲ್ಲಿ ಮೇವು ಮತ್ತು ನೀರು ಕೊರತೆಯಿಂದ 30 ಸಾವಿರ ಜಾನುವಾರುಗಳ ಸ್ಥಿತಿ ಗಂಭೀರವಾಗಲಿದೆ. ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗೋಶಾಲೆ ಆರಂಭಿಸಲಾಗಿದೆ. ಆದರೆ ಕುಕನೂರು ತಾಲೂಕಿನಲ್ಲಿ ಇದುವರೆಗೂ ಗೋ ಶಾಲೆ ಪ್ರಾರಂಭಿಸಿಲ್ಲ. ಗೋ ಶಾಲೆಯಾದರೂ ಪ್ರಾರಂಭವಾದರೆ ಹೇಗೊ ಬದಕು ಸಾಗಿಸಬಹುದು ಎನ್ನುತ್ತಾರೆ ರೈತರು.
ಜನಕ್ಕೆ ನೀರಿಲ್ಲ ದನಕ್ಕೆ ಮೇವಿಲ್ಲ
Advertisement
ಸತತ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಕುಕನೂರು ತಾಲೂಕು ಜನತೆಯ ಪರಿಸ್ಥಿತಿ ಹೇಳತೀರದು. ಒಣಬೇಸಾಯವನ್ನೇ ನಂಬಿಕೊಂಡಿರುವ ಇಲ್ಲಿನ ರೈತರ ಜಾನುವಾರುಗಳಿಗೆ ಯರೆ ಭಾಗದ ಕೆರೆ ನೀರೇ ಗತಿ. ಆದರೆ ಬರಗಾಲದಿಂದಾಗಿ ಕೆರೆ ಅಂಗಳದಲ್ಲಿ ಹನಿ ನೀರು ಸಿಗುವುದು ದುಸ್ಥರವಾಗಿದೆ.
Related Articles
Advertisement
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಬೆಳೆ ಹಾನಿಯಾದರು ಬೆಳೆವಿಮೆ ಬರುತ್ತಿರುವುದು ಬೆರೆಳನಿಕೆಯ ರೈತರಿಗೆ ಮಾತ್ರ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತಾಲೂಕಿನ ರೈತರು ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು.
•ಅಂದಪ್ಪ ಕೋಳೂರು ಜಿಲ್ಲಾ ರೈತ ಸಂಘದ ಮುಖಂಡ
ತಾಲೂಕಿನ ಚಂಡೂರು, ಭಾನಾಪೂರ ಹಾಗೂ ಮಂಗಳೂರು ಗ್ರಾಮಗಳಲ್ಲಿ ಕೂಡಿಯುವ ನೀರಿನ ಸಮಸ್ಯೆ ಇದೆ. ಈ ಕುರಿತು ಮಂಗಳವಾರ ನಡೆಯುವ ಕೋರ್ ಕಮಿಟಿ ಮಿಟಿಂಗ್‌ನಲ್ಲಿ ಚರ್ಚಿಲಾಗುವುದು. ಪಟ್ಟಣದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿದ ಕಾರಣ ಗೋ ಶಾಲೆ ಕುಕನೂರು ತಾಲೂಕಿಗೆ ಅಗತ್ಯ ಇಲ್ಲ ಎಂದು ಮೆಧೀಲಾಧಿಕಾರಿಗಳು ಹೇಳಿದ್ದಾರೆ.
•ನೀಲಪ್ರಭಾ, ತಹಶೀಲ್ದಾರ್
ಹೆಚ್ಚಾಗುತ್ತಿದೆ ನೀರಿನ ಸಮಸ್ಯೆ
ತಾಲೂಕಿನ ಬಹುತೇಕ ಯರೇ ಹಾಗೂ ಮಸಾರಿ ಭಾಗದಲ್ಲಿ ಮೂರು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದೆ. ನೀರನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಜನತೆ ಆರೋಪಿಸುತ್ತಾರೆ. ಯರೇ ಭಾಗದ ಯರೇಹಂಚಿನಾಳ ಚಿಕೇನಕೊಪ್ಪ ಭಟಪ್ಪನಹಳ್ಳಿ ಹಾಗೂ ಮಸಾರಿ ಭಾಗದ ಕುಕನೂರು ಸೇರಿದಂತೆ ಮಂಗಳೂರು ಕೇಂಪಳ್ಳಿ ಗ್ರಾಮಗಳಲ್ಲಿ ಮೂರ್‍ನಾಲ್ಕು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಕುಡಿವ ನೀರಿಗಾಗಿ ಇಲ್ಲಿನ ಜನತೆ ಗ್ರಾಮದ ಅಕ್ಕಪಕ್ಕದ ತೋಟಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಬೆಳಗ್ಗೆ ಊರಿಂದ ಊರಿಗೆ ತೆರಳಿ ನೀರು ತರುವದು ಮತ್ತು ನೀರಿಗಾಗಿ ನಿತ್ಯದ ಕೆಲಸವನ್ನು ಬಿಡುವ ಪರಿಸ್ಥಿತಿ ಎದರಾಗಿದೆ. ಈ ಕುರಿತು ಮೇಲಾಕಾರಿಗಳ ಗಮನಕ್ಕೆ ತಂದರು ಪ್ರಯೋಜನ ಕೂಡ ಆಗದೆದಿರುವುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚಿಗೆ ಗ್ರಾಸವಾಗಿದೆ. ಕುಡಿವ ನೀರಿನ ಸಮಸ್ಯೆಯ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಗ್ರಾಮದಲ್ಲಿ ಉಂಟಾದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂದು ತಾಲೂಕಿನ ಜನತೆ ಯಲಬುರ್ಗಾ ಪಟ್ಟಣಕ್ಕೆ ತೆರಳಿ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಿದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬದಲಾಗಿ ನೀರಿನ ಸಮಸ್ಯೆಯ ಬಗ್ಗೆ ನನಗ್ಯಾಕೆ ಹೇಳುತ್ತೀರಿ. ನಿಮ್ಮ ಗ್ರಾಪಂ ಪಿಡಿಒ, ತಾಪಂ ಇಒ ಮತ್ತು ತಹಶೀಲ್ದಾರ್‌ಗೆ ಹೇಳಿ ಎಂದು ಗ್ರಾಮಸ್ಥರನ್ನು ಗದರಿಸಲು ಮುಂದಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಶಾಶ್ವತ ಪರಿಹಾರಕ್ಕೆ ಮುಂದಾಗದೇ ಎರಡು ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಎಲ್. ಮಂಜುನಾಥ ಪ್ರಸಾದ್