ಮೈಸೂರು: ವರುಣಾ ತಾಲೂಕು ಕೇಂದ್ರವಾಗಬೇಕೆಂದು ಜನ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸುತ್ತೂರಿನ ಹೆಲಿಪ್ಯಾಡಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾವು ಅಧಿಕಾರಕ್ಕೆ ಬಂದರೆ ವರುಣಾ ಕ್ಷೇತ್ರವನ್ನು ತಾಲ್ಲೂಕು ಮಾಡುತ್ತೇವೆ ಎಂದು ಹೇಳಿದ್ದರು. ಇದನ್ನು ಜನ ಕೇಳಿಲ್ಲ. ವರುಣಾ ಕ್ಷೇತ್ರದಲ್ಲಿ ನಾನು ಮೂರು ದಿನ ಪ್ರಚಾರ ಮಾಡಿದ್ದೇನೆ ಎಲ್ಲಿಯೂ ಜನ ಕೇಳಿಲ್ಲ. ಬಸವರಾಜ ಬೊಮ್ಮಾಯಿ ಕೇಳಿದ ತಕ್ಷಣ ಇದನ್ನು ಮಾಡುವುದಿಲ್ಲ. ವರುಣಾ ಕ್ಷೇತ್ರದ ಜನ ಕೇಳಿದರೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಪರಾರಿಯಾಗಲು ಸಂಚು: ಗುಜರಾತ್ ನಲ್ಲಿ ಐಸಿಸ್ ಜಾಲ ಪತ್ತೆ; ಮಹಿಳೆ ಸೇರಿ ನಾಲ್ವರ ಬಂಧನ
ತನಿಖೆ ನಡೆಯುತ್ತಿದೆ: ಪಿ.ಎಸ್.ಐ ಹಾಗೂ 40 % ಆರೋಪದ ಬಗ್ಗೆ ಸರ್ಕಾರ ತನಿಖೆ ಮಾಡಲಿ ಎಂದು ಮಾಜಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಅವರು ಕೇಳಿ ನಾವು ಮಾಡಬೇಕಿಲ್ಲ. ಸಾಕ್ಷಿಗಳ ಆಧಾರದ ಮೇಲೆ ಖಂಡಿತವಾಗಿಯೂ ಮಾಡುತ್ತೇವೆ ಎಂದರು. ಪಿ.ಎಸ್.ಐ ಹಗರಣದ ತನಿಖೆ ಈಗಾಗಲೇ ನಡೆಯುತ್ತಿದ್ದು ಎಡಿಜಿಪಿ ಪೌಲ್ ಈಗಾಗಲೇ ಜೈಲಿನಲ್ಲಿದ್ದಾರೆ. ಇನ್ನು ಹಲವರ ಮೇಲೆ ತನಿಖೆ ನಡೆಯುತ್ತಿದೆ ಎಂದರು.
ನುಡಿದಂತೆ ನಡೆವ ಸರ್ಕಾರ ನಮ್ಮದು. ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ತಮಗೆ ಬೇಕಾದವರಿಗೆ ಭೂಮಿ ನೀಡಿರುವ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು