Advertisement

ಜನರಿಂದಲೇ ರಸ್ತೆ ನಿರ್ಮಾಣ ; ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ಸಾಹಸ

09:53 AM Feb 16, 2020 | Hari Prasad |

ವಿಶಾಖಪಟ್ಟಣ: ಬಿಹಾರದ ಗಯಾ ಜಿಲ್ಲೆಯ ದಶರಥ ಮಾಂಜಿ ಏಕಾಂಗಿಯಾಗಿ 20 ವರ್ಷಗಳ ಕಾಲ ಗುಡ್ಡ ಕಡಿದು ರಸ್ತೆ ಮಾಡಿದ ಅಂಶ ಚರಿತ್ರಾರ್ಹವಾಗಿದೆ. ಇದೀಗ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿಯೂ ಕೂಡ ಅಂಥ ಸಾಧನೆ ಮಾಡಲಾಗಿದೆ. ಒಂದು ವ್ಯತ್ಯಾಸವೇನೆಂದರೆ ಇಲ್ಲಿ ಹಲವಾರು ಮಂದಿ ಸೇರಿಕೊಂಡು ಮೂರು ವಾರಗಳಲ್ಲಿ ಏಳು ಕಿ.ಮೀ. ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಸರಕಾರಕ್ಕೆ ಹಲವು ವರ್ಷಗಳ ಕಾಲ ಮನವಿ ಸಲ್ಲಿಸಿ ವ್ಯರ್ಥವಾದ ಬಳಿಕ ಜನರೇ ಸ್ವಯಂ ಪ್ರೇರಣೆಯಿಂದ ರಸ್ತೆ ನಿರ್ಮಿಸಿದ್ದಾರೆ.

Advertisement

ಪೂರ್ವ ಘಟ್ಟ ಪ್ರದೇಶದಿಂದ 15 ಕಿಮೀ ದೂರದಲ್ಲಿರುವ ಪಂಚಾಯತ್‌ ಕಚೇರಿ ಮತ್ತು ಇತರ ಅಗತ್ಯಗಳಿಗಾಗಿ ತೆರಳಲು ಗುಡ್ಡಗಾಡು ಪ್ರದೇಶದ ಜನರು ಇನ್ನಿಲ್ಲದ ಸಾಹಸ ಮಾಡಬೇಕಾಗಿತ್ತು. ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗದವರು ವಾಸಿಸುವ 250 ಕುಟುಂಬಗಳು ಇವೆ.

ನಾಲ್ವರು ಯುವಕರು ಸಮಸ್ಯೆ ಅರಿತು ರಸ್ತೆ ನಿರ್ಮಿಸುವ ಬಗ್ಗೆ ಮನೆ ಮನೆಗೆ ತೆರಳಿ ಮನವೊಲಿಕೆಯ ಬಳಿಕ ಜ.23ರಿಂದ ಕಾಮಗಾರಿಗೆ ಶುಭಾರಂಭ ಮಾಡಲಾಗಿತ್ತು. ಪ್ರತಿ ದಿನ ಸರಿ ಸುಮಾರು 2.5 ಕಿ.ಮೀ. ರಸ್ತೆ ನಿರ್ಮಿಸುವುದರ ಬಗ್ಗೆ ಅವರು ಗುರಿ ಹಾಕಿಕೊಂಡಿದ್ದರು. ಈ ಯೋಜನೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೂರು ಗುಂಪುಗಳಲ್ಲಿ ಅತ್ಯುತ್ತಮ ಬಾಂಧವ್ಯ ಬೆಸೆಯಲೂ ಅನುಕೂಲವಾಗಿದೆ.

ಮನರೇಗಾ ವ್ಯಾಪ್ತಿಯಲ್ಲಿ 2018-’19ನೇ ಸಾಲಿನಲ್ಲಿ ರಸ್ತೆ ನಿರ್ಮಾಣಕ್ಕೆಂದು 40 ಲಕ್ಷ ರೂ.ನೆರವು ನೀಡಲಾಗಿತ್ತು ಎಂದು ಯೋಜನಾ ನಿರ್ದೇಶಕ ಡಿ.ಕೆ. ಬಾಲಾಜಿ ತಿಳಿಸಿದರು. ಇದೀಗ ಕೇವಲ ಮಣ್ಣಿನ ರಸ್ತೆ ನಿರ್ಮಿಸಲಾಗಿದೆ. ಅದನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಜಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next