Advertisement

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

01:46 AM Apr 28, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಜನಪ್ರತಿನಿಧಿ ಕಾಯ್ದೆಯಡಿ ಮತ ದಾರರನ್ನು ಭ್ರಷ್ಟರನ್ನಾಗಿಸುವ ಕ್ರಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳು ತಪ್ಪು ನೀತಿ ಆಗಿರಬಹುದು. ಈ ನೀತಿಗಳು ಯಾವ ರೀತಿ ಆರ್ಥಿಕತೆಗೆ ಧಕ್ಕೆ ತರಲಿವೆ ಎಂಬುದನ್ನು ಇತರ ಪಕ್ಷಗಳು ಹೇಳಬೇಕು ಎಂದು ರಾಜ್ಯ ಹೈಕೋರ್ಟ್‌ ಸೂಚಿಸಿದೆ.

Advertisement

ಚಾಮರಾಜಪೇಟೆ ಶಾಸಕ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ಆಯ್ಕೆಯನ್ನು ಪ್ರಶ್ನಿಸಿ ಆ ಕ್ಷೇತ್ರದ ಮತದಾರ ಶಶಾಂಕ್‌ ಜೆ. ಶ್ರೀಧರ್‌ ಸಲ್ಲಿಸಿದ್ದ ಚುನಾವಣ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎಂ.ಐ. ಅರುಣ್‌ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಭ್ರಷ್ಟರನ್ನಾಗಿಸಿದಂತೆ ಎನ್ನಲಾಗದು
“ಕಾಂಗ್ರೆಸ್‌ನ ಭರವಸೆಗಳು, ಉಚಿತ ಉಡುಗೊರೆಗಳು ಸಮಾಜದ ಒಂದು ವರ್ಗವನ್ನು ಓಲೈಸಿದಂತಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ. ಅಂಥ ಭರವಸೆ ಈಡೇರುವ ಸಾಧ್ಯತೆಗಳ ಬಗ್ಗೆ ಮತದಾರರೇ ಜಾಗೃತರಾಗ ಬೇಕು ಮತ್ತು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಬೇಕೇ ಬೇಡವೇ ಎಂಬ ಬಗ್ಗೆ ಅವರೇ ನಿರ್ಧರಿಸುತ್ತಾರೆ.

ಆದರೆ ಇದರಿಂದ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123ರ ಅನ್ವಯ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದಂತಾಗುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಕಲ್ಯಾಣ ನೀತಿಗಳು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳು ಸಾಮಾಜಿಕ ಕಲ್ಯಾಣ ನೀತಿಗಳು ಎಂದು ನ್ಯಾಯಪೀಠ ಹೇಳಿದೆ. “ಅವುಗಳ ಅನುಷ್ಠಾನದಿಂದ ರಾಜ್ಯ ಸರಕಾರದ ಖಜಾನೆ ದಿವಾಳಿಯಾಗುತ್ತದೆ ಎಂಬುದನ್ನು ವಿಪಕ್ಷಗಳು ಸಾಬೀತುಪಡಿಸಬೇಕು. ಆ ಯೋಜನೆಗಳನ್ನು ಅಥವಾ ನೀತಿಗಳನ್ನು ತಪ್ಪು ಎಂದು ವ್ಯಾಖ್ಯಾನಿಸಬಹುದು. ಆದರೆ ಅವುಗಳು ಭ್ರಷ್ಟಚಾರಕ್ಕೆ ಕಾರಣವಾಗುತ್ತವೆ ಎನ್ನಲಾಗದು’ ಎಂದು ತೀರ್ಪಿನಲ್ಲಿ ಹೇಳಿದೆ.

Advertisement

ಪಂಚ ಗ್ಯಾರಂಟಿಗಳನ್ನು ಮುಂದಿಟ್ಟು ಜಮೀರ್‌ ಅಹಮದ್‌ ಖಾನ್‌ ಮತದಾರರನ್ನು ಓಲೈಸಿ ಮತ ಕೋರಿದ್ದಾರೆ. ಆ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಹಾಗಾಗಿ ಅದರಿಂದ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದಂತಾಗಿದೆ. ಆದ್ದರಿಂದ ಜಮೀರ್‌ ಅಹಮದ್‌ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next