ಬಾದಾಮಿ: ಬೇಸಿಗೆಯ ಬಿಸಿಲಿನ ಪ್ರತಾಪಕ್ಕೆ ಜನರು ಹೈರಾಣಾಗಿದ್ದು, ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
ಮಧ್ಯಾಹ್ನ ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬೆಳಗ್ಗೆಯಿಂದಲೇ ಬೆವರು ಸುರಿಯಲು ಆರಂಭವಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿ ಜನರು ಒದ್ದಾಡುವಂತಾಗುತ್ತದೆ. ಜನರಲ್ಲಿ ಆತಂಕ ಮೂಡಿಸಿದೆ. ಹೆಚ್ಚುತ್ತಿರುವ ಬಿಸಿಲಿನ ಝಳದಿಂದ ಜನರು ಪರಿತಪಿಸುತ್ತಿದ್ದಾರೆ. ಒಂದೆಡೆ ಕೆರೆಕಟ್ಟೆಗಳು ಒಣಗುತ್ತಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಇನ್ನೊಂದೆಡೆ ಬಿಸಿಲಿನ ಬೇಗೆಗೆ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ.
ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ಎರಡು ಬಾರಿ ಸ್ನಾನ ಮಾಡುತ್ತಿದ್ದಾರೆ. ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಆರ್‌ಸಿಸಿ ಮೇಲ್ಚಾವಣಿ ಬೆಂಕಿಯಂತಾಗುತ್ತಿವೆ. ಏರ್ ಕೂಲರ್, ಎಸಿ, ಫ್ಯಾನ್‌ಗಳ ಮಾರಾಟ ಜೋರಾಗಿದೆ. ಜನರು ಐಸ್‌ಕ್ರೀಮ್, ತಂಪುಪಾನೀಯ, ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ.
ಮಣ್ಣಿನ ವಸ್ತುಗಳಿಗೆ ಹೆಚ್ಚಿನ ಬೇಡಿಕೆ: ಬೇಸಿಗೆ ದಿನಗಳಲ್ಲಿ ಬಿಸಿಲು ಹೆಚ್ಚಾದ ಕಾರಣ ನೀರನ್ನು ತಂಪಾಗಿಸಲು ಮಣ್ಣಿನ ಬಿಂದಿಗೆ, ತತ್ರಾಣಿಗೆ ಬೇಡಿಕೆ ಬಂದಿದೆ. ಹೆಚ್ಚಾಗಿ ಮಣ್ಣಿನ ವಸ್ತುಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ.
Advertisement
ಸದ್ಯ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮಧ್ಯಾಹ್ನ ಜನರು ಮನೆಯ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಯಾವುದೇ ಕೆಲಸವಿದ್ದರೆ ಬೆಳಗ್ಗೆ 8ರಿಂದ 12 ಗಂಟೆಯೊಳಗೆ ಮಾಡಿ ಮುಗಿಸಲು ಜನರು ಪ್ರಯತ್ನ ಪಡುತ್ತಿದ್ದಾರೆ. ಸರಕಾರಿ ಕಚೇರಿಗಳ ವೇಳೆ ಏಪ್ರಿಲ್, ಮೇನಲ್ಲಿ ಬೆ. 8ರಿಂದ ಮ. 1.30ರವರೆಗೆ ಇರುತ್ತದೆ. ಗ್ರಾಮೀಣ ಭಾಗಗಳಿಂದ ಯಾವುದೆ ಕೆಲಸ-ಕಾರ್ಯಗಳಿದ್ದರೆ ತಾಲೂಕಾ ಕೇಂದ್ರಗಳಿಗೆ ಬೆಳಗ್ಗೆ ಬಂದು ಹೋಗುತ್ತಿದ್ದಾರೆ.
Related Articles
Advertisement
ಆರೋಗ್ಯ ಇಲಾಖೆ ಸೂಚನೆ: ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ಸೂರ್ಯಾಘಾತದಿಂದ ತಪ್ಪಿಸಲು ಸಡಿಲವಾದ ತೆಳು ಬಣ್ಣದ ಹತ್ತಿ ಬಟ್ಟೆ ಧರಿಸುವುದು, ಮನೆಯ ಹೊರಗಡೆ ಹೋದಾಗ ಛತ್ರಿ ತೆಗೆದುಕೊಂಡು ಹೋಗುವುದು, ಶುದ್ಧವಾದ ಕುಡಿಯುವ ನೀರು ಕುಡಿಯುವುದು, ಉಪ್ಪ್ಪು ಮಿಶ್ರಿತ ನೀರು ಕುಡಿಯುವುದು, ಹಣ್ಣಿನ ರಸ, ಪಾನಕ, ದ್ರವ ಆಹಾರ ಸೇವಿಸುವುದು,
ಹತ್ತಿಯ ನುಣುಪಾದ ಬಟ್ಟೆ, ಕರವಸ್ತ್ರದಿಂದ ಬೆವರು ಒರೆಸಿಕೊಳ್ಳುವುದು, ನೀರು, ಮಜ್ಜಿಗೆ, ಎಳೆನೀರು, ಕಲ್ಲಂಗಡಿ ಸೇವನೆ ಉಪಯುಕ್ತ, ಬೆಚ್ಚಗಿನ, ಮಸಾಲೆರಹಿತ ಶುದ್ಧ ಸಾತ್ವಿಕ ಆಹಾರ ಸೇವನೆ, ಗಾಳಿಯಾಡುವಂತಹ ಪಾದರಕ್ಷೆ ಧರಿಸುವುದು ಸೇರಿದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ತೇರದಾಳದಲ್ಲಿ ಬಿಸಿಲಿನ ಪ್ರಖರತೆ: ಜನರ ಪರದಾಟ
ತೇರದಾಳ: ಪಟ್ಟಣದಲ್ಲಿ 2-3 ದಿನಗಳಿಂದ 41-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು,Ê ಜನರು ಪರದಾಡುವಂತಾಗಿದೆ. ಮನೆ ಬಿಟ್ಟು ಹೊರಗೆ ಹೋಗಲಾಗದೆ, ಮನೆಯಲ್ಲಿರಲು ಸಾಧ್ಯವಾಗದಂತಾಗಿದೆ. ಬಿಸಿಲಿನ ತಾಪಕ್ಕೆ ನಲುಗಿ, ನರಕಯಾತನೆ ಅನುಭವಿಸುತ್ತಿದ್ದಾರೆ. ತಂಪು ಪಾನೀಯ, ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ: ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನ ಎಳೆನೀರು, ಕಲ್ಲಂಗಡಿ ಹಣ್ಣು ಹಾಗೂ ತಂಪುಪಾನೀಯಗಳಿಗೆ ಮೊರೆ ಹೋಗುತಿದ್ದಾರೆ.
ಎಳೆನೀರಿಗೆ ಹೆಚ್ಚಿನ ಬೇಡಿಕೆಯಿದ್ದು, 30ರಿಂದ 50ರೂ.ಗಳವರೆಗೆ ಮಾರಾಟವಾಗುತ್ತಿವೆ. ಬಡವರ ಫ್ರೀಜ್ ಖ್ಯಾತಿಯ ಮಣ್ಣಿನ ಮಡಿಕೆಗಳ ಮಾರಾಟ ಸ್ವಲ್ಪ ಮಟ್ಟಿಗೆ ಏರಿದೆ ಎನ್ನುತ್ತಾರೆ ಪರಪ್ಪ, ಶಂಕರ, ಸಂಗಪ್ಪ . ವಿಪರಿತವಾಗಿ ಏರುತ್ತಿರುವ ಬಿಸಿಲಿನ ಪ್ರಖರತೆಗೆ ಜನ ಕಂಗಾಲಾಗಿದ್ದು, ನೆತ್ತಿ ಸುಡುವ ಉರಿ ಬಿಸಿಲಿನ ತಾಪದಿಂದ ಪಾರಾಗಲು ಸರಕಾರ ಎಲ್ಲ ಇಲಾಖೆಗಳ ಸಮಯವನ್ನು ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಬದಲಾವಣೆ ಮಾಡಲಾಗಿದೆ.
ಕಳೆದ 40 ವರ್ಷಗಳಿಂದ ಇಂತಹ ಬಿಸಿಲು ಕಂಡಿಲ್ಲ. ಮಧ್ಯಾಹ್ನ ಹೊರಗಡೆ ಬಂದರೆ ಬೆವರು ಬಂದು ನೆರಳಿಗೆ ಹೋಗಬೇಕು ಅನಿಸುತ್ತಿದೆ. ಏನೆ ಕೆಲಸ ಇದ್ದರೂ ಮಧ್ಯಾಹ್ನ ವಿಪರಿತ ಬಿಸಿಲಿನ ಕಾರಣ ಆರೋಗ್ಯ ಇಲಾಖೆಯ ಸೂಚನೆಯಂತೆ ಸೂರ್ಯಾಘಾತ ತಪ್ಪಿಸಲು ಮುನ್ನಚ್ಚರಿಕೆ ವಹಿಸುವುದು ಮುಖ್ಯ.
•ಮಹಾಂತೇಶ ಮಮದಾಪುರ, ಗ್ರಾಮಸ್ಥ.
•ಮಹಾಂತೇಶ ಮಮದಾಪುರ, ಗ್ರಾಮಸ್ಥ.