Advertisement

ಕೆಂಡದಂಥ ಬಿಸಿಲಿಗೆ ಜನತೆ ಸುಸ್ತು

12:55 PM Apr 10, 2022 | Team Udayavani |

ಜೇವರ್ಗಿ: ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚಾಗುತ್ತಿದ್ದು, ಏಪ್ರಿಲ್‌ ಕೊನೆ ವಾರ ಹಾಗೂ ಮೇ ತಿಂಗಳಲ್ಲಿ ಇನ್ನೂ ಹೆಚ್ಚಿನ ಬಿಸಿಲು ಎದುರಾಗುವ ಭೀತಿ ಜನಕ್ಕೆ ಎದುರಾಗಿದ್ದು, ಕೆಂಡದಂಥ ಬಿಸಿಲಿಗೆ ಜನ ಸುಸ್ತಾಗಿ ಮನೆ ಬಿಟ್ಟು ಹೊರಗೆ ಬರಲು ಹಿಂಜರಿಯುತ್ತಿದ್ದಾರೆ.

Advertisement

ಬೆಳಗ್ಗೆ 8 ಗಂಟೆಯಾದರೇ ಸಾಕು ಬಿಸಿಲು ಮುಖಕ್ಕೆ ಕೆಂಡ ಎರಚಿದಂತೆ ಭಾಸವಾಗುತ್ತಿದ್ದು, ಎಲ್ಲಿ ಕೂತರು ಸಮಧಾನವಿಲ್ಲದಂತಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನ ಪಟ್ಟಣಕ್ಕೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಮದ್ಯಾಹ್ನ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿವೆ. ಅಲ್ಲದೇ ವ್ಯಾಪಾರ ವಹಿವಾಟಿನ ಮೇಲೂ ಕೆಟ್ಟ ಪರಿಣಾಮ ಬೀರಿದೆ. ರಾತ್ರಿ ಸಮಯದಲ್ಲಂತೂ ವಿದ್ಯುತ್‌ ಹೋದರೇ ಚಿಕ್ಕ ಮಕ್ಕಳು, ವೃದ್ಧರ ಪಾಡು ಹೇಳತೀರದಾಗಿದೆ.

ತಾಪಮಾನ ಹೆಚ್ಚಾಗುತ್ತಾ ಹೋಗುತ್ತಿರುವುದರಿಂದ ಧಗೆಗೆ ಬೆದರಿ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಬೆಂಕಿ ಅನುಭವ ನೀಡುತ್ತಿರುವ ಉರಿ ಬಿಸಿಲಿಗೆ ಬೆಳಗ್ಗೆ ಹಾಗೂ ರಾತ್ರಿ ಮಾತ್ರ ಹೆಚ್ಚಾಗಿ ಮನೆಯಿಂದ ಹೊರಬರುತ್ತಿದ್ದಾರೆ. ಬಿಸಿಲಿನ ಉಪಟಳ ತಾಳದೇ ತಂಪು ಪಾನೀಯಗಳಾದ ಐಸ್‌ ಕ್ರೀಮ್‌, ಕಲ್ಲಂಗಡಿ, ಕರಬೂಜ್‌, ದ್ರಾಕ್ಷಿ, ಹಣ್ಣಿನ ಜ್ಯೂಸ್‌, ಎಳೆನೀರು, ಶರಬತ್‌ಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಫಿಲ್ಟರ್‌ ನೀರು ಮಾರಾಟವಾಗುತ್ತಿದೆ.

ಬಿಸಿಲಿನ ಉಪಟಳಕ್ಕೆ ಮಧ್ಯಮ ವರ್ಗದ ಜನ ಮಣ್ಣಿನ ಮಡಿಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಹೀಗಾಗಿ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಹಾಗೂ ಬಸ್‌ ನಿಲ್ದಾಣ ಹತ್ತಿರ ಮಣ್ಣಿನ ಮಡಿಕೆ ಮಾರಾಟಗಾರರ ಹತ್ತಿರ ಚೌಕಾಸಿ ಮಾಡಿ ಖರೀದಿಸುತ್ತಿದ್ದಾರೆ.

ಭೀಮೆಯಲ್ಲಿ ಕಡಿಮೆಯಾಗುತ್ತಿದೆ ನೀರು

Advertisement

ಭೀಮಾನದಿಯಲ್ಲಿ ದಿನ ಕಳೆದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಬೀತಿ ಎದುರಾಗಿದೆ. ಈಗಾಗಲೇ ಲಕ್ಷ್ಮೀ ಚೌಕ್‌ ಬಡಾವಣೆ ಹೊರತುಪಡಿಸಿ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಮೂರ್‍ನಾಲ್ಕು ದಿನಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಖಡಕ್‌ ಬಿಸಿಲಿಗೆ ಪಟ್ಟಣದ ಎಲ್ಲ ಬಾವಿ, ಹಳ್ಳ, ಕೊಳ್ಳಗಳು ಬತ್ತಿ ಹೋಗುತ್ತಿವೆ. ಏಪ್ರಿಲ್‌ ತಿಂಗಳ ಪ್ರಾರಂಭದಲ್ಲೇ ಬಿಸಿಲು ಜನರ ನೆಮ್ಮದಿ ಹಾಳುಮಾಡಿರುವಾಗ ಮೇ ತಿಂಗಳಲ್ಲಿ ಇದರ ಪರಿಣಾಮ ಹೇಗಿರಬಹುದು. ಸದಾ ಜನನೀಬಿಡ ಪ್ರದೇಶವಾಗಿರುವ ಬಸ್‌ ನಿಲ್ದಾಣ, ಬಸವೇಶ್ವರ ಸರ್ಕಲ್‌, ಅಖಂಡೇಶ್ವರ ವೃತ್ತಗಳು ಬಿಕೋ ಎನ್ನುತ್ತಿವೆ

Advertisement

Udayavani is now on Telegram. Click here to join our channel and stay updated with the latest news.

Next