Advertisement

ಬಿಸಿಲ ತಾಪಕ್ಕೆ ತತ್ತರಿಸಿದ ಜನ!

03:46 PM Mar 15, 2022 | Team Udayavani |

ಚಿಕ್ಕಮಗಳೂರು: ಅಪ್ಪಟ ಮಲೆನಾಡು ಈಗ ಬಿಸಿಲ ನಾಡಾಗಿ ಬದಲಾಗಿದೆ. ಬಿಸಿಲ ಝಳಕ್ಕೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ತಂಪು ಪಾನೀಯ ವ್ಯಾಪಾರಸ್ಥರು ಭರ್ಜರಿ ವಹಿವಾಟು ನಡೆಸುತ್ತಿದ್ದಾರೆ. ಚಳಿಗಾಲ ಅಂತ್ಯವಾಗಿ ಬೇಸಿಗೆ ಕಾಲ ಆರಂಭವಾಗಿದೆ. ಅದರಲ್ಲೂ ಶಿವರಾತ್ರಿ ನಂತರ ದಿನಗಳಲ್ಲಿ ಬಿಸಿಲ ಝಳ ಮತ್ತಷ್ಟು ಪ್ರಖರತೆ ಪಡೆದುಕೊಂಡಿದ್ದು, ಜನರು ರೋಸಿ ಹೋಗಿದ್ದಾರೆ.

Advertisement

ಪ್ರತಿದಿನ ಮಧ್ಯಾಹ್ನದ ವೇಳೆ ಬಿಸಿಲ ಝಳ ಹೆಚ್ಚುತ್ತಿದ್ದು ಜನರು ದೇಹವನ್ನು ತಂಪಾಗಿರಿಸಿಕೊಳ್ಳಲು ಎಳನೀರು, ಕಲ್ಲಂಗಡಿ ಸೇರಿದಂತೆ ತಂಪು ಪಾನೀಯ ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಅಪ್ಪಟ ಮಲೆನಾಡು ಬೇಸಿಗೆ ಕಾಲದ ಆರಂಭದಲ್ಲೇ ಕಾದ ಕಾವಲಿಯಂತಾಗಿದೆ. ಹಗಲು -ರಾತ್ರಿ ಎನ್ನದೆ ಜನರು ಫ್ಯಾನ್‌, ಕೂಲರ್‌ಗಳ ಮೊರೆ ಹೋಗಿದ್ದಾರೆ. ಮಲೆನಾಡು ಹಚ್ಚ ಹಸಿರಿನ ಹೊದಿಕೆಯಾಗಿದೆ. ಆದರೆ, ಇತ್ತೀಚಿನ ಹವಾಮಾನ ಬದಲಾವಣೆಯಿಂದ ಮಲೆನಾಡಿನಲ್ಲಿ ಪರಿಸರದಲ್ಲಿ ಉಷ್ಣಾಂಶದ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಬೇಸಿಗೆ ಕಾಲದ ಪ್ರಾರಂಭ ದಿನಗಳಲ್ಲೇ ಈ ಮಟ್ಟಿನ ಬಿಸಿಲ ಝಳ ಜನರನ್ನು ಕಾಡುತ್ತಿದ್ದು ಮುಂದಿನ ದಿನಗಳ ಸ್ಥಿತಿ ಹೇಗಿರುತ್ತದೆ ಎಂಬ ಚಿಂತೆಯೂ ಜನರನ್ನು ಕಾಡುತ್ತಿದೆ. ಬಿಸಿಲ ಝಳ ಹೆಚ್ಚುತ್ತಿದ್ದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ, ಕರುಳ ಬೇನೆ ಸೇರಿದಂತೆ ಇತರೆ ಕಾಯಿಲೆಗಳು ಜನರನ್ನು ಬಾಧಿಸಲು ಆರಂಭಿಸುತ್ತವೆ.

ಬಿಸಿಲ ಝಳದ ನಡುವೆಯೂ ಕಾಫಿ ಬೆಳೆಗಾರರ ದೃಷ್ಟಿ ಆಕಾಶದತ್ತ ನೆಟ್ಟಿದ್ದು, ರೇವತಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ರೇವತಿ ಮಳೆ ಬೀಳುತ್ತಿದ್ದಂತೆ ಕಾಫಿಗಿಡಗಳು ಹೂವು ಬಿಡಲು ಆರಂಭಿಸುತ್ತವೆ. ರೇವತಿ ಮಳೆ ಬೀಳುತ್ತಿದ್ದಂತೆ ಬಯಲುಸೀಮೆ ಭಾಗದ ರೈತರು ಜಮೀನು ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಮತ್ತು ರೈತರು ರೇವತಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ಬಿಸಿಲ ಝಳದ ನಡುವೆ ಮುಂಗಾರು ಪೂರ್ವ ಮಳೆ ಆರಂಭವಾಗಲಿದ್ದು ಮುಂಗಾರು ಪೂರ್ವ ಮಳೆ ರೈತರ ಕೈ ಹಿಡಿಯುತ್ತಾ, ಕೈ ಕೊಡುತ್ತಾ ನೋಡಬೇಕಿದೆ.

ಕಳೆದ ಅನೇಕ ವರ್ಷಗಳಿಂದ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ಭರ್ತಿಯಾಗಿದ್ದು, ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ಅಷ್ಟಾಗಿ ಎದುರುಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಮಲೆನಾಡು- ಬಯಲುಸೀಮೆ ಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಆರಂಭದ ದಿನದಲ್ಲೇ ಬಿಸಿಲ ಝಳದಿಂದ ಜನರು ತತ್ತರಿಸಿದ್ದಾರೆ. ಬಿಸಿಲ ಝಳದಿಂದ ರಕ್ಷಣೆ ಪಡೆಯಲು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಒಟ್ಟಾರೆಯಾಗಿ ಬೇಸಿಗೆ ಬಿಸಿಲು ಜನರನ್ನು ಕಂಗೆಡಿಸಿದೆ.

Advertisement

ಹವಾಮಾನ ವೈಪರೀತ್ಯ ಇಡೀ ಜಗತ್ತನ್ನು ಇಂದು ಕಾಡುತ್ತಿದೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯೂ ಇದರಿಂದ ಹೊರತ್ತಾಗಿಲ್ಲ, ಜಿಲ್ಲೆಯಲ್ಲಿ 34-35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಏರಿಕೆಯಾ ಗುತ್ತಿದೆ. ಇದಕ್ಕೆ ಅರಣ್ಯ ನಾಶವೇ ಮುಖ್ಯ ಕಾರಣ. ಏರುತ್ತಿರುವ ಉಷ್ಠಾಂಶ ಕಡಿಮೆಯಾಗಬೇಕಾದರೆ ಅರಣ್ಯ ರಕ್ಷಣೆ, ಪರಿಸರ ಸಂರಕ್ಷಣೆಯ ಬಗ್ಗೆ ಗಮನ ಹರಿಸಬೇಕು. ಗಿರಿಜಾ ಶಂಕರ್‌, ಪರಿಸರ ಆಸಕ್ತರು

Advertisement

Udayavani is now on Telegram. Click here to join our channel and stay updated with the latest news.

Next