Advertisement

ಮೊಬೈಲ್‌ ಹಾವಳಿಯಿಂದ ದಾರಿ ತಪ್ಪುತ್ತಿದೆ ಜನತೆ

11:51 AM Mar 31, 2018 | Team Udayavani |

ಚಿತ್ತಾಪುರ: ಮನುಷ್ಯನಾದವನಿಗೆ ಆಸೆಗಳು ಇರುವುದು ಸಹಜ. ಆದರೆ ಅತಿ ಆಸೆ ಇರುವುದು ದುರಂತ. ವೈಜ್ಞಾನಿಕ ಜಗತ್ತಿನಲ್ಲಿ ಪ್ರತಿಯೊಬ್ಬರು ಮೊಬೈಲ್‌ಗೆ ಮಾರು ಹೋಗಿ ಹಳ್ಳಿ ಆಟಗಳಾದ ಕುಂಟೆ ಬಿಲ್ಲೆ, ಚಿಣ್ಣಿ ದಾಂಡು, ಕಬ್ಬಡ್ಡಿ ಅಂತಹ ಅನೇಕ ಆಟಗಳನ್ನು ಬಿಟ್ಟು ಮೊಬೈಲ್‌ನಲ್ಲಿರುವ ಆಟಗಳನ್ನು ಆಡಿ ದಾರಿ ತಪ್ಪುತ್ತಿದ್ದಾರೆ ಎಂದು ನಾಲವಾರದ ಕೋರಿ ಸಿದ್ಧೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧ ತೋಟೇಂದ್ರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು. 

Advertisement

ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಸಾವಿರ ದೇವರ ಮಠದ ಸಂಗಮನಾಥ ದೇವರ ನೇತೃತ್ವದಲ್ಲಿ ನಡೆದ ದ್ವಿತೀಯ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೆಲವರು ಮೊಬೈಲ್‌ಗಳಿಗೆ ಮಾರು ಹೋಗಿ ಜೀವನದಲ್ಲಿ ಮಾನಸಿಕ ನೆಮ್ಮದಿ, ಶಾಂತಿ ಕಳೆದುಕೊಂಡು ಏಕಾಂಗಿಯಾಗಿ ಅಲೆದಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಮಠಗಳಿಂದ ಅನ್ನ, ಅರಿವು, ದಾಸೋಹ ದೊರೆಯುತ್ತಿದೆ. ಮಠ ಮಂದಿರಗಳಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ಜೀವನ ಪದ್ಧತಿ ರೂಡಿಸಿಕೊಳ್ಳಬೇಕು. ಜಾತ್ರೆ ಉತ್ಸವಗಳಿಂದ ಜನರಲ್ಲಿ ಜೀವನ ಸ್ಫೂರ್ತಿ ವೃದ್ಧಿಯಾಗುತ್ತದೆ ಎಂದರು. ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಸ್ವಾಮೀಜಿಗಳಿಗೆ ಆಸೆ ಇರಬಾರದು. ಉತ್ತಮ ಮೌಲ್ಯವುಳ್ಳ ಆದರ್ಶ ಇರಬೇಕು. ಕೇವಲ ಮಾತನಾಡುವುದೇ ಸಾಧನೆಯಾಗದೇ ಸಾಧನೆ ಮಾಡಿ ಅದರ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.

ಮಾಜಿ ಶಾಸಕಿ ಅರುಣಾ ಪಾಟೀಲ, ಪಾಳಾದ ಗುರುಮೂರ್ತಿ ಮಾತನಾಡಿದರು. ಸಾವಿರ ದೇವರ ಮಠದ ಸಂಗಮನಾಥ
ದೇವರು ನೇತೃತ್ವ ವಹಿಸಿದ್ದರು.  ಆನಂದ ಗುರೂಜಿ ಉಪಸ್ಥಿತಿಯಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ದಿಗ್ಗಾಂವ ಕಂಚಗಾರ ಹಳ್ಳದ ಪೀಠಾಧಿ ಪತಿ ಮಲ್ಲಯ್ಯ ಮುತ್ಯಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಚಂದ್ರಶೇಖರ ಆವಂಟಿ, ಶಾಂತಣ್ಣ ಚಾಳಿಕಾರ, ಶಿವಶರಣಪ್ಪ ಹೂಗಾರ, ಸಂಗಣ್ಣಗೌಡ ಪಾಟೀಲ, ರವಿ ಪಡ್ಲ, ಅಕ್ಕಮಹಾದೇವಿ, ಗೀರೀಶ ಭಜಂತ್ರಿ, ವೆಂಕಟೇಶ
ಕುಲಕರ್ಣಿ, ಭೀಮಶಾ ಜೀರೊಳ್ಳಿ, ಬಸವರಾಜ ಪಂಚಾಳ, ಸಾಬಣ್ಣ ಸೋಮನ್‌ ಇದ್ದರು. 

ರಥೋತ್ಸವ ಸಂಭ್ರಮ: ಸಾವಿರ ದೇವರ ಮಠದ ಸಂಗಮನಾಥ ದೇವರ ನೇತೃತ್ವದಲ್ಲಿ ದ್ವಿತೀಯ ವರ್ಷದ ರಥೋತ್ಸವ ಸಂಭ್ರಮದಿಂದ ಜರುಗಿತು. ಅಳ್ಳೋಳ್ಳಿ, ದಂಡಗುಂಡ, ಸಂಕನೂರ, ಸಾತನೂರ, ಹೊಸ್ಸುರ್‌, ಭಂಕಲಗಾ, ಅಲ್ಲೂರ್‌, ಭೀಮನಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next