ಮಂಗಳೂರು: ನಗರದ ಮಹಾ ಜನತೆಯೇ ಮುಂದಿನ ದಿನಗಳಲ್ಲಿ ನನ್ನ ಹೈಕಮಾಂಡ್. ಅವರ ಎಲ್ಲ ಸೂಕ್ತ ಬೇಡಿಕೆ- ಆಶೋತ್ತರಗಳನ್ನು ಆದ್ಯತೆಯಲ್ಲಿ ಪೂರೈಸುವುದಕ್ಕಾಗಿ ಶಾಸಕನಾಗಿ ನಾನು ಸದಾಕಾಲ ಬದ್ಧ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮರ್ಥ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಘೋಷಿಸಿದ್ದಾರೆ.
ಅವರು ರಥಬೀದಿ ವೆಂಕಟರಮಣ ದೇವಸ್ಥಾನದ ಎದುರು ಜರಗಿದ ಚುನಾವಣಾ ಸಭೆಯಲ್ಲಿ ನೆರೆದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿ ತನ್ನ ಅದ್ದೂರಿ ಪ್ರಚಾರಕ್ಕೆ ಚಾಲನೆ ನೀಡಿದರು. ಕಳೆದ 33 ವರ್ಷಗಳಿಂದ ನಿರಂತರ ಜನ ಸೇವೆಯಲ್ಲಿ ಕ್ರಿಯಾಶೀಲನಾಗಿರುವ ತನಗೆ ಮಂಗಳೂರು ನಗರದ ಜನರ ಬವಣೆಗಳು ತಿಳಿದಿದ್ದು, ಅವುಗಳಿಗೆ ಸೂಕ್ತ ಪರಿಹಾರೋಪಾಯಗಳು ತನ್ನ ಪ್ರಣಾಳಿಕೆಯಲ್ಲಿ ಅಡಕವಾಗಿವೆ. ಅವುಗಳ ಅನುಷ್ಠಾನಕ್ಕೆ ನಿಮ್ಮ ಬೆಂಬಲ ತನಗೆ ದೊರೆಯುವ ಬಗ್ಗೆ ತನಗೆ ಸಂಪೂರ್ಣ ವಿಶ್ವಾಸ ಇರುವುದಾಗಿ ಶ್ರೀಕರ ಪ್ರಭು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಮನೆ ಮನೆ ಭೇಟಿಯ ಬಳಿಕ ಐದನೇ ಹಂತದಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಪ್ರಬಲ ಜನಬೆಂಬಲವನ್ನು ಸಾಬೀತು ಪಡಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಬಾಹುಳ್ಯದ ರಥಬೀದಿಯಲ್ಲಿ ತಮ್ಮ ಬೃಹತ್ ಪಾದಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಕರ ಪ್ರಭು ಮತದಾರರನ್ನು ಸೆಳೆಯುವ ಎಲ್ಲ ಲಕ್ಷಣಗಳನ್ನು ಪ್ರದರ್ಶಿಸಿದ್ದಾರೆ.
ತಮ್ಮ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾದ ಮಾದರಿಯನ್ನು ರಿಕ್ಷಾ ಚಾಲಕರಿಗೆ ನೀಡುವ ಮೂಲಕ ಶ್ರೀಕರ ಪ್ರಭು ತಮ್ಮ ಮತಬೇಟೆಯ ಅಭಿಯಾನವನ್ನು ಅದ್ದೂರಿಯಾಗಿ ಆರಂಭಿಸಿದ್ದಾರೆ. ಇನ್ನು 5 ದಿನಗಳ ಕಾಲ ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಅವರು ರೋಡ್ ಶೋ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ. ‘ಆಟೋ ರಿಕ್ಷಾ’ ಚಿಹ್ನೆ ಸಿಕ್ಕಿದ್ದು ನನ್ನ ಸೌಭಾಗ್ಯ. ವರ್ಷದ 365 ದಿನವೂ ಸೇವೆಯಲ್ಲಿ ತೊಡಗಿರುವ ಆಟೋರಿಕ್ಷಾ ವ್ಯವಸ್ಥೆಯಂತೆ ನಿಮ್ಮೆಲ್ಲರ ಸದಾ ಕಾಲದ ಸೇವೆಗೆ ಲಭ್ಯವಾಗಲಿದ್ದು, ಬಹುಮತದಿಂದ ಆರಿಸುವಂತೆ ಶ್ರೀಕರ ಪ್ರಭು ಮನವಿ ಮಾಡಿಕೊಂಡರು.
ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ. ಶೆಟ್ಟಿ ಬೇಡೆಮಾರ್, ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಅವಿನಾಶ್ ಶೆಟ್ಟಿ, ಮಾಧ್ಯಮ ಮುಖ್ಯಸ್ಥ ಮಹೇಶ್ ಆರ್. ನಾಯಕ್, ಚಿತ್ರಕಲಾ ಪ್ರಭು, ಸೀಮಾ ಪ್ರಭು, ಶ್ರೀಲತಾ ಗೋಪಾಲಕೃಷ್ಣ, ಐಶ್ವರ್ಯ ನಾಯಕ್, ಮಾಯಾ ನಾಯಕ್, ಶರತ್ ಅಮೀನ್, ನಿತಿನ್ ಸುವರ್ಣ, ಅಶ್ವಿತ್ ಕುಮಾರ್, ವಸಂತ್ ಪ್ರಭು, ಭಾಸ್ಕರ್ ಗಟ್ಟಿ, ಅನಿಲ್ ಕುಮಾರ್, ಆನಂದ ಶೆಟ್ಟಿ, ವೆಂಕಟರಮಣ ಮಲ್ಯ, ಜೈರಾಮ್ ಕಾಮತ್, ರಾಮ್ ಮೋಹನ್, ಮಹೇಶ್ ಭಟ್, ಸೂರಜ್ ಪ್ರಭು, ರಘುನಾಥ್ ಉಪಸ್ಥಿತರಿದ್ದರು.