ಅಫಜಲಪುರ: ಅಬ್ಟಾ! ಎಂಥ ಸೆಕೆ. 38, 40 ಡಿಗ್ರಿ ಬಿಸಿಲು ನೆತ್ತಿ ಸುಡುತ್ತಿರುವಾಗ ಹೇಗಪ್ಪಾ ತಿರುಗಾಡುವುದು ಎಂದು ಬಿರು ಬೇಸಿಗೆಯ ತಾಪಕ್ಕೆ ಪರಿತಪಿಸಿದ ಜನರು, ಜಾನುವಾರುಗಳು ನೆರಳನ್ನು ಆಶ್ರಯಿಸುತ್ತಿರುವುದು ಸಾಮಾನ್ಯವಾಗಿದೆ. ತಾಲೂಕಿನಾದ್ಯಂತ ಬೇಸಿಗೆ ಕಾವು ಹೆಚ್ಚಾಗಿದ್ದು, ಸುಡು ಬಿಸಿಲಿನ ತಾಪಕ್ಕೆ ಮಕ್ಕಳು, ವೃದ್ಧರು ಸೇರಿದಂತೆ ಜಾನುವಾರುಗಳು ನೆರಳನ್ನು ಆಶ್ರಯಿಸುತ್ತಿವೆ. ಜಾನುವಾರುಗಳು ನೀರಿಗಾಗಿ ಪರದಾಡುತ್ತಿವೆ.
ಬತ್ತಿದ ಅಂತರ್ಜಲ ಮಟ್ಟ: ಬೇಸಿಗೆ ತಾಪಕ್ಕೆ ಭೂಮಿಯೊಳಗಿನ ಅಂತರ್ಜಲ ಮಟ್ಟ ಬತ್ತಿದೆ. ಕೊಳವೆ ಬಾವಿಗಳನ್ನು ಕೊರೆದರೂ ಹನಿ ನೀರು ಬರುತ್ತಿಲ್ಲ. ಇರುವ ಕೊಳವೆ ಬಾವಿಗಳ ನೀರು ಬತ್ತಿ ಹೋಗಿವೆ. ಕೆರೆ ಕುಂಟೆಗಳು, ಬಾವಿ, ಹಳ್ಳ ಕೊಳ್ಳ, ನದಿ ನೀರು ಬತ್ತುತ್ತಿರುವುದಿರಂದ ಜನರು ಮತ್ತು ಜಾನುವಾರುಗಳು ಸಹ ಕುಡಿಯುವ ನೀರಿಗಾಗಿ ಪರದಾಡುವಂತೆ ಆಗಿದೆ.
ಅರಣ್ಯ ನಾಶವೂ ಕಾರಣ: ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಸೇಲೆ ಕಡಿಮೆಯಾಗಿದೆ. ಅರಣ್ಯ ನಾಶದಿಂದಾಗಿ ಬಿಸಿಲು ಇನ್ನಷ್ಟು ಹೆಚ್ಚಾಗಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅರಣ್ಯ ನಾಶ ಹೆಚ್ಚಾಗಿದೆ. ಗಿಡ ಮರಗಳನ್ನು ಕಡಿದು ನೆರಳು ಸಹ ಜನ ಜಾನುವಾರುಗಳಿಗೆ ಸಿಗದಂತೆ ಮಾಡಿದ್ದಾರೆ. ದುರಾಸೆಗೆ ಕಾಡು ನಾಶ ಮಾಡುವವರಿಂದಾಗಿ ಬಿಸಿಲಿನ ಝಳ ನಿಗಿನಿಗಿಯಾಗಿ ಸುಡುತ್ತಿದೆ. ಊರು ಕೇರಿಗಳಲ್ಲಿ ಗಿಡಮರಗಳಿಲ್ಲ ಎಂದು ಹೊಲಗದ್ದೆಗಳಿಗೆ ಹೋದರೆ ಅಲ್ಲಿಯೂ ಒಂದೂ ಗಿಡ ಮರಗಳನ್ನು ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಬೇಸಿಗೆ ಬಿಸಿಲು ನೆತ್ತಿ ಸುಡುತ್ತಿದೆ. ಪಟ್ಟಣದಲ್ಲಿ ಕುಳಿತು ವಿಶ್ರಮಿಸಿಕೊಳ್ಳಬೇಕೆಂದರೆ ಒಂದೂ ಉದ್ಯಾನವನವೂ ಇಲ್ಲ. ದೊಡ್ಡ ಗಿಡಮರಗಳು ಇಲ್ಲ. ಹೀಗಾಗಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಬಯಲು ದಾರಿ, ಸುಡುವ ಬಿಸಿಲು ಕಣ್ಣು ಕುಕ್ಕುತ್ತದೆ.
ಅಲ್ತಾಫ್ ತೋಟೆಗಾರ್, ಬಾಳೆಕಾಯಿ ವ್ಯಾಪಾರಿ
ಬಹುತೇಕ ಗ್ರಾಮಗಳಲ್ಲಿ ಅರಣ್ಯ ನಾಶ ಹೆಚ್ಚಾಗಿದೆ. ಗಿಡ ಮರಗಳನ್ನು ಕಡಿಯಲಾಗುತ್ತಿದೆ. ಕೆರೆ ಕುಂಟೆಗಳು ಬತ್ತಿಹೋಗಿದ್ದು ನೀರಿನ ಬರದ ಜೊತೆಗೆ ಸುಡು ಬಿಸಿಲಿನ ಝಳ ತಡೆದುಕೊಳ್ಳಲಾಗುತ್ತಿಲ್ಲ.
ರಮೇಶ, ಪ್ರವೀಣ, ರೈತರು
ಮಲ್ಲಿಕಾರ್ಜುನ ಹಿರೇಮಠ