Advertisement

ಕೊತ್ತಲ ಬಸವೇಶ್ವರ ಜಾತ್ರೆಗೆ ಜನವೋ ಜನ

03:05 PM Apr 13, 2018 | |

ಸೇಡಂ: ಸುಪ್ರಸಿದ್ಧ ಐತಿಹಾಸಿಕ ಶ್ರೀ ಕೊತ್ತಲ ಬಸವೇಶ್ವರ ಜಾತ್ರೆ ಸಂಭ್ರಮ-ಸಡಗರದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ನೆರವೇರಿತು. ಜಾತ್ರೆ ನಿಮಿತ್ತ ದೇವಾಲಯದಲ್ಲಿ ಪೀಠಾಧಿಪತಿ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಪೂಜೆಗಳು ನೆರವೇರಿದವು. ಬುಧವಾರ ರಾತ್ರಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ತೆರಳಿದ ಉಚ್ಛಾಯಿ ಮೆರವಣಿಗೆ ರಾತ್ರಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿತು. ಈ ವೇಳೆ ಅನೇಕ ಭಕ್ತರು, ಪುರವಂತರು, ಉಚ್ಛಾಯಿ ಎದುರಿಗೆ ನೀರೆರೆದು ಪೂಜೆ ಸಲ್ಲಿಸಿದರು.

Advertisement

ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಂಡ ಹಾಯುವ ಅಗ್ಗಿ ಕಟ್ಟೆ ಹತ್ತಿರ ಆಗಮಿಸಿದಾಗ ದೇವಾಲಯದ ಸದಾಶಿವ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಗ್ಗಿ ಕಟ್ಟೆಗೆ ಐದು ಸುತ್ತು ಸುತ್ತಿ, ನಂತರ ಸಾವಿರಾರು ಭಕ್ತರೊಂದಿಗೆ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಕೆಂಡ ಹಾಯ್ದರು.

ಈ ವೇಳೆ ಪುರವಂತರು ಮಾರುದ್ದದ ಸಲಾಕೆ, 100 ಅಡಿ ಹಗ್ಗವನ್ನು ತಮ್ಮ ಕೆನ್ನೆಗೆ ಚುಚ್ಚಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ಇದನ್ನು ಕಂಡ ಜನ ಜೈಕಾರ ಹಾಕುತ್ತ ಭಕ್ತಿ ಸಮರ್ಪಿಸಿದರು. ಸಂಜೆ ರಥೋತ್ಸವ ನೋಡಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನ ಆಗಮಿಸಿದ್ದರು. ಊಡಗಿ ರಸ್ತೆಯ ಗುಂಪಾದಿಂದ ಬಂದ ನಂದಿಕೋಲುಗಳ ಕುಣಿತ ನೆರೆದವರ ಗಮನಸೆಳೆದವು.

ನಂತರ ಶೃಂಗಾರಗೊಂಡ ಶ್ರೀ ಕೊತ್ತಲ ಬಸವೇಶ್ವರ ರಥ ರಥಬೀದಿಯಲ್ಲಿ ಸಂಚರಿಸಿತು. ಬಾದಾಮಿ, ಉತ್ತತ್ತಿ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ರಥೋತ್ಸವ ನೋಡಲು ಜನ ರಥ ಬೀದಿಯ ಬಹುತೇಕ ಕಟ್ಟಡಗಳ ಮೇಲೇರಿ ಕುಳಿತಿದ್ದು ಕುತೂಹಲ ಕೆರಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next