Advertisement

ಬಿಜೆಪಿ ದುರಾಡಳಿತದಿಂದ ಜನರಿಗೆ ಬೇಸರ

06:10 PM Nov 25, 2021 | Team Udayavani |

ಹುಕ್ಕೇರಿ: ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿದ್ದ ಮುಖಂಡರು ನಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದರು. ಈಗ ಅವರು ಬಿಜೆಪಿಯಲ್ಲಿದ್ದು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುತ್ತಾರೆ.

Advertisement

ಕಟ್ಟುನಿಟ್ಟು ಶಿಸ್ತಿನ ಪಕ್ಷವೆಂದು ಹೇಳುವ ಬಿಜೆಪಿಗೆ ಈ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಸದಸ್ಯರು ಗೊಂದಲಕ್ಕೀಡಾಗದೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ರವದಿ ಫಾರ್ಮ್ಹೌಸ್‌ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿವೆ. ಈ ಸರ್ಕಾರಗಳ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಕಳೆದ ಅವಧಿಯ ಸಿದ್ಧರಾಮಯ್ಯ ಅವರ ಜನಪರ ಆಡಳಿತ ಹಾಗೂ ಈಗಿರುವ ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಮತದಾರರಲ್ಲಿ ಮನವರಿಕೆ ಮಾಡಬೇಕು. ಈಗಿನ ವಿಧಾನ ಪರಿಷತ್‌ ಚುನಾವಣೆ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅವರು ಹೇಳಿದರು.

ಹಾಗಾಗಿ ಕಾಂಗ್ರೆಸ್‌ ಪಕ್ಷವು ಯುವ ಉತ್ಸಾಹಿ ಹಾಗೂ ಹೊಸ ಮುಖ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಿದ್ದು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಅವರು ಕೋರಿದರು. ಕಾಂಗ್ರೆಸ್‌ ಪಕ್ಷದ ಮನಸ್ಸಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಚನ್ನರಾಜ್‌ ಹಟ್ಟಿಹೊಳಿ ಆಯ್ಕೆ ಸುಲಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಹುಕ್ಕೇರಿ ಕ್ಷೇತ್ರದಲ್ಲಿ ಮತದಾರರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಭಯಮುಕ್ತರಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅಭ್ಯರ್ಥಿಯೂ ಆದ ಸಹೋದರ ಚನ್ನರಾಜ ಹಾಗೂ ತಾವು ಮನೆಯ ಮಕ್ಕಳಂತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇವೆ ಎಂದರು. ಅಭ್ಯರ್ಥಿ ಚನ್ನರಾಜ್‌ ಹಟ್ಟಿಹೊಳಿ ಮಾತನಾಡಿ, ಅಭ್ಯರ್ಥಿಗಿಂತ ಪಕ್ಷವನ್ನು ನೋಡಿ ಮತ ಚಲಾಯಿಸಿ ಎಂದು ವಿನಂತಿಸಿದರು ಮಾಜಿ ಸಚಿವರಾದ ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ, ವೀರಕುಮಾರ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಮಾತನಾಡಿದರು.

ಬ್ಲಾಕ್‌ ಅಧ್ಯಕ್ಷರಾದ ಅಶೋಕ ಅಂಕಲಗಿ, ಸಂತೋಷ ಮುಡಸಿ, ಪ್ರಧಾನ ಕಾರ್ಯದರ್ಶಿ ರಾಜು ಸಿದ್ನಾಳ, ಮುಖಂಡರಾದ ವಿಜಯ ರವದಿ, ಕಿರಣ ರಜಪೂತ, ನಮ್ರತಾ ವೈರಾಗಿ, ಜಿನಗೌಡ ಇಮಗೌಡನವರ, ಮಲ್ಲಿಕಾರ್ಜುನ ರಾಶಿಂಗೆ, ಅವಿನಾಶ ನಲವಡೆ, ಕೆಂಪಣ್ಣಾ ಶಿರಹಟ್ಟಿ, ಶಾನೂಲ್‌ ತಹಶೀಲ್ದಾರ, ಕಿರಣ ಕರೋಶಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಮಿಕರ ಸಂಘದ ಮಹೇಶ ಹಟ್ಟಿಹೊಳಿ ನಿರೂಪಿಸಿದರು. ದಿಲೀಪ ಹೊಸಮನಿ ಸ್ವಾಗತಿಸಿದರು. ಚಂದು ಗಂಗನ್ನವರ ವಂದಿಸಿದರು. ಇದೇ ವೇಳೆ ಜೆಡಿಎಸ್‌, ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next