ಚಿಕ್ಕಮಗಳೂರು: ಜನರಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತೇನೆ ಎಂದು ಪ್ರತಿಜ್ಞೆಗೈದು ಅಧಿಕಾರ ವಹಿಸಿಕೊಳ್ಳುವ ಶಾಸಕರ ದುರ್ನಡತೆಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಗ್ಯಾಧಿಕಾರಿಯೊಬ್ಬರು ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರೂ, ಕಾರಿನಿಂದ ಇಳಿಯದ ಶಾಸಕರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಜನರ ಕೋಪಕ್ಕೆ ಗುರಿಯಾದ ಶಾಸಕ ಯಾರೆಂದರೆ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಅವರು.
ಆಗಿದ್ದೇನು? ಲಕ್ಕವಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರಮೇಶ್ ಅವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಅಪಘಾತವಾಗಿದೆ.
ಅಪಘಾತದ ಪರಿಣಾಮ ವೈದ್ಯ ರಮೇಶ್ ಅವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಒದ್ದಾಡಿದ್ದರು. ಆದರೆ ಅಲ್ಲೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು ಕಾರಿನಿಂದ ಇಳಿಯಲೇ ಇಲ್ಲ. ಶಾಸಕರ ಗನ್ ಮ್ಯಾನ್ ಕಾರಿನಿಂದ ಇಳಿದು ಬಂದರೂ ಶಾಸಕರು ಮಾತ್ರ ಕಾರಿನಿಂದ ಇಳಿದು ಸಹಾಯ ಮಾಡುವ ಮನಸು ಮಾಡಲೇ ಇಲ್ಲ!
ಘಟನೆ ನಡೆದು ಅರ್ಧ ಗಂಟೆಯ ಬಳಿಕ ಬಂದ ಆ್ಯಂಬುಲೆನ್ಸ್ ನಲ್ಲಿ ವೈದ್ಯ ರಮೇಶ್ ಅವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಯಿತು. ಆದರೆ ಆರೋಗ್ಯಾಧಿಕಾರಿ ರಮೇಶ್ ಅವರು ಮಾರ್ಗಮಧ್ಯೆ ಸಾವನ್ನಪ್ಪಿದರು.