Advertisement
ಹೌದು, ಹೀಗೆ ಪ್ರಶ್ನೆಗಳನ್ನು ಹಾಕಿ ಸರ್ಕಾರಕ್ಕೆ ಶಾಪ ಹಾಕುತ್ತಿರುವುದು ಬೇರೆ ಯಾರೂ ಅಲ್ಲ. ತಮಗೆ ಅರಿವಿಲ್ಲದಂತೆಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದವರು. ಕೋವಿಡ್ ಸೋಂಕು ವಿಪರೀತವಾಗಿ ಜಿಲ್ಲೆಯಲ್ಲಿ ಹಬ್ಬುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿರುವುದು ಒಂದೆಡೆಯಾದರೆ, ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು ಮತ್ತು ಗುಣಮುಖರಾಗಿ ಮನೆಗೆ ಬಂದವರನ್ನು ಸಮಾಜ ನೋಡಿಕೊಳ್ಳುತ್ತಿರುವ ರೀತಿಗೆ ಅವರು ಬೇಸತ್ತು ಹೋಗಿದ್ದಾರೆ.
Related Articles
Advertisement
ಹಳ್ಳಿಗಳಲ್ಲೂ ಕೋವಿಡ್ ಅಸ್ಪೃಶ್ಯತೆ: ಕೇವಲ ನಗರಕ್ಕೆ ಸೀಮಿತವಾಗಿದ್ದ ಕೋವಿಡ್ ಸೋಂಕು ಇದೀಗ ಹಳ್ಳಿಗಳತ್ತ ವಿಪರೀತ ಪ್ರಮಾಣದಲ್ಲಿ ತಗುಲುತ್ತಿದ್ದು, ಇಗಾಗಲೇ ಧಾರವಾಡ ತಾಲೂಕಿನ ಮೊರಬ, ಶಿರಕೋಳದಂತಹ ದೈತ್ಯ ಹಳ್ಳಿಗಳು ಕೋವಿಡ್ ದಿಂದ ಹೈರಾನಾಗಿದ್ದು, ಇಲ್ಲಿ ಕೊರೊನಾ ಸೋಂಕು ತಗುಲಿದ ಮನೆತನಗಳನ್ನು ತೀವ್ರ ಅಸ್ಪೃಶ್ಯತಾ ಭಾವದಿಂದ ನೋಡಲಾಗುತ್ತಿದೆ.
ಹಳ್ಳಿಗಳು ಪರಸ್ಪರ ಪ್ರೀತಿ, ಬಂಧುತ್ವ ಮತ್ತು ಕೊಡುಕೊಳ್ಳುವಿಕೆ ಅಷ್ಟೇಯಲ್ಲ, ಸಂಕಷ್ಟದಲ್ಲಿ ಯಾರೂ ಹೇಳದೆ ಒಬ್ಬರಿಗೊಬ್ಬರು ಸ್ಪಂದಿಸುವ ಮನೊಭಾವವಿತ್ತು. ಇದೀಗ ಕೋವಿಡ್‌ನ ಭಯ ಮತ್ತು ಆತಂಕಗಳು ಇಡೀ ಹಳ್ಳಿಗರಲ್ಲಿಯೇ ಪರಿಸ್ಪರ ಅಪನಂಬಿಕೆ ಸೃಷ್ಟಿಯಾಗುವಂತಾಗಿದೆ. ಕೋವಿಡ್ ಸಂತೆ, ಪೇಟೆ, ಕೃಷಿ ಚಟುವಟಿಕೆ ನೆಪದಲ್ಲಿ ಇನ್ನಷ್ಟು ಹಳ್ಳಿಗರನ್ನು ಪೀಡಿಸುವುದಂತೂ ಸತ್ಯ. ಹೀಗಾಗಿ ಕೋವಿಡ್ ಭಯಾನಕ ಕಾಯಿಲೆ ಅಲ್ಲ, ಇಲ್ಲಿ ಮುನ್ನೆಚ್ಚರಿಕೆ ಮುಖ್ಯ, ರೋಗಿಯ ತಾತ್ಸಾರ ಸರಿಯಲ್ಲ ಎನ್ನುವ ಜಾಗೃತಿ ಹೆಚ್ಚಬೇಕಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.
ಕೋವಿಡ್ ಗೆದ್ದವರು ಯೋಧರೇ : ಕೋವಿಡ್ ವಿರುದ್ಧ ಹೋರಾಟ ಮಾಡುವ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದ ಎಲ್ಲರನ್ನು ಕೋವಿಡ್ ಯೋಧರೆಂದು ಹೇಳಿ ಹುರುದುಂಬಿಸಿಯಾಗಿದೆ. ಆದರೆ ನಿಜಕ್ಕೂ ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದವರು ಕೂಡ ಕೋವಿಡ್ ಯೋಧರೇ ಆಗಿದ್ದಾರೆ. ಅದರಲ್ಲೂ ಪ್ಲಾಸ್ಮಾ ಥೆರಪಿಗೆ ಒಳಗಾಗಿ ಬಂದವರು ತಮ್ಮ ದೇಹದಲ್ಲಿನ ಆಂಟಿಬಾಡಿಸ್‌ಗಳನ್ನು ದಾನರೂಪದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಕೊಟ್ಟು ಬರುತ್ತಿದ್ದು, ಅದು ಇನ್ನೊಬ್ಬ ಕೋವಿಡ್ ರೋಗಿಯನ್ನು ಗುಣಮುಖಗೊಳಿಸಲು ಅನುಕೂಲವಾಗುತ್ತದೆ. ಹೀಗಾಗಿ ಕೋವಿಡ್ ಗೆದ್ದು ಬಂದವರನ್ನು ಗೌರವದಿಂದ ಕಾಣಬೇಕಿದೆ ಎನ್ನುತ್ತಿದೆ ವೈದ್ಯಲೋಕ.
ತಾತ್ಸಾರ ಸರಣಿ ಆತ್ಮಹತ್ಯೆಗೆ ಕಾರಣ: ಡಾ| ಪಾಂಡುರಂಗಿ : ಕೋವಿಡ್ ಸೋಂಕಿತರನ್ನು ಮತ್ತು ಸೊಂಕಿನಿಂದ ಗುಣಮುಖರಾದವರನ್ನು ತಾತ್ಸಾರ ಭಾವದಿಂದ, ಅಸಡ್ಡೆಯಿಂದ ನೋಡದೆ ಮಾನವೀಯತೆಯಿಂದ ನೋಡಬೇಕು. ಪ್ಲಾಸ್ಮಾ ಥೆರಪಿ ಮಾಡಿಸಿಕೊಂಡವರು ಇನ್ನೊಬ್ಬ ರೋಗಿಯನ್ನು ಉಳಿಸಿದಂತೆ. ಅವರ ಜೀವನ ಸಾರ್ಥಕವಾದದ್ದು, ಯಾವುದೇ ಕಾರಣಕ್ಕೂ ಅವರನ್ನು ನಿರ್ಲಕ್ಷಿಸಬಾರದು. ಇದು ಇನ್ನೊಂದು ಸಾಮಾಜಿಕ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಸಾಮಾಜಿಕ ತಾತ್ಸಾರ ಕೋವಿಡ್ ಸೋಂಕಿತರಲ್ಲಿ ಖನ್ನತೆ, ಒತ್ತಡ ಸೃಷ್ಟಿಸಿ ಜಿಗುಪ್ಸೆ ಹೆಚ್ಚಾಗಿ ಅವರನ್ನು ಆತ್ಮಹತ್ಯೆಗೂ ಪ್ರೇರೆಪಿಸಬಹುದು. ಹೀಗಾಗಿ ಅವರನ್ನು ಗೌರವದಿಂದ ಕಾಣಬೇಕಿದೆ ಎನ್ನುತ್ತಾರೆ ಮನೋರೋಗ ತಜ್ಞ ಡಾ|ಆನಂದ ಪಾಂಡುರಂಗಿ.
ಏಡ್ಸ್ ರೋಗಿಗಳಿಗೆ ಒಂದು ಪಕ್ಷ ಎಲ್ಲರೂ ಕಿಂಚಿತ್ತು ಮರ್ಯಾದೆ ಕೊಡುತ್ತಿದ್ದಾರೆ. ಆದರೆ ನಮ್ಮನ್ನು ಅವರಿಗಿಂತಲೂ ಕಡೆಯಾಗಿ ನೋಡುತ್ತಿದ್ದಾರೆ. ಯಾರೋ ಅಂಟಿಸಿಕೊಂಡು ದೇಶದೊಳಕ್ಕೆ ಬಂದು ಬಿಟ್ಟ ವೈರಸ್ ನಮಗೆ ಅರಿವಿಲ್ಲದೇ ಅಂಟಿಕೊಂಡರೆ ಅದಕ್ಕೆ ನಾವು ಜವಾಬ್ದಾರರೇ? ನಿಜ ಹೇಳ್ತೇನೆ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತಿದೆ. -ದೇವಾನಂದ, (ಹೆಸರು ಬದಲಿಸಲಾಗಿದೆ), ಗುಣಮುಖರಾದ ವ್ಯಕ್ತಿ, ಧಾರವಾಡ
ನಾನು ಹಳೆ ಮೈಸೂರು ಪ್ರಾಂತ್ಯದ ಕಡೆಯ ಜಿಲ್ಲೆಯವನು. ಕೋಲಾರದಿಂದ ಬಂದು ಹುಬ್ಬಳ್ಳಿಯಲ್ಲಿ ಸಣ್ಣ ಉದ್ಯೋಗ ಮಾಡಿ ಬದುಕು ಕಟ್ಟಿಕೊಂಡಿದ್ದೆ. ಕೋವಿಡ್ ಸೋಂಕಿನಿಂದ ಗುಣಮುಖನಾಗಿ ಮನೆಗೆ ಬಂದರೆ ನಮ್ಮ ಮಾಲೀಕ ನನ್ನನ್ನು ಕರೆದುಕೊಳ್ಳಲಿಲ್ಲ. ಈಗ ದಿನಕ್ಕೆ 400 ರೂ. ಕೊಟ್ಟು ಲಾಡ್ಜ್ ನಲ್ಲಿದ್ದೇನೆ. ಸಮಾಜ ಹೀಗೆ ತಿರಸ್ಕರಿಸಿದರೆ ನಾನು ಎಲ್ಲಿಗೆ ಹೋಗಲಿ? -ಜೀವನ್ ರೆಡ್ಡಿ, (ಹೆಸರು ಬದಲಿಸಲಾಗಿದೆ) ಗುಣಮುಖರಾದ ವ್ಯಕ್ತಿ, ಕೋಲಾರ
ಚಿಕಿತ್ಸೆ ನಂತರ ಕೊವಿಡ್‌ನಿಂದ ಗುಣಮುಖರಾದ ವ್ಯಕ್ತಿಗಳು ಸಾಮಾಜಿಕ ತಾರತಮ್ಯಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ನಿತೇಶ್ ಪಾಟೀಲ, ಜಿಲ್ಲಾಧಿಕಾರಿ
-ಬಸವರಾಜ ಹೊಂಗಲ್