Advertisement

ಹಾರುವ ಕಾಯಗಳ ಕುತೂಹಲ ತಣಿಸಿದ ಪೆಂಟಗಾನ್‌

03:47 AM Apr 29, 2020 | Hari Prasad |

ವಾಷಿಂಗ್ಟನ್‌: ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಸಾಕ್ಷಿ ಎಂದೇ ತಿಳಿಯಲಾಗಿರುವ ಗುರುತಿಸಲಾಗದ ಹಾರುವ ಆಕಾಶಕಾಯ (ಅನ್‌ಐಡೆಂಟಿಫೈಡ್‌ ಫ್ಲೈಯಿಂಗ್‌ ಆಬ್ಜೆಕ್ಟ್ ಗಳ ಯು.ಎಫ್.ಒ.) ಬಗ್ಗೆ ತಾನು ಬಹು ಹಿಂದಿನಿಂದಲೂ ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದ ವೀಡಿಯೋಗಳನ್ನು ಅಮೆರಿಕದ ರಕ್ಷಣಾ ಇಲಾಖೆ (ಡಿ.ಒ.ಡಿ.) ಈಗ ಹೊರಹಾಕಿದೆ.

Advertisement

2004 ಮತ್ತು 2015ರಲ್ಲಿ ನೌಕಾಪಡೆಯ ತರಬೇತಿ ಯುದ್ಧ ವಿಮಾನಗಳ ಇನ್‌ಫ್ರಾರೆಡ್‌ ಕೆಮರಾಗಳ ಮೂಲಕ ಸೆರೆಹಿಡಿಯಲಾಗಿದ್ದ ಯುಎಫ್ಒಗಳ ವೀಡಿಯೋ ತುಣುಕುಗಳನ್ನು ಈಗ ಬಹಿರಂಗಗೊಳಿಸಲಾಗಿದೆ. ಈ ಮೂಲಕ ಅನ್ಯಗ್ರಹ ಜೀವಿಗಳು ಇರಬಹುದೇ ಎಂಬ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಲಾಗಿದೆ.

ಅಂದು ಏನಾಗಿತ್ತು?
ಅಮೆರಿಕ ನೌಕಾಪಡೆಗೆ ಸೇರಿದ ಯುದ್ಧ ವಿಮಾನಗಳು ತರಬೇತಿಯಲ್ಲಿದ್ದಾಗ 2004, 2015ರಲ್ಲಿ ಎರಡು ಬಾರಿ ಇಂಥ ಘಟನೆಗಳು ನಡೆದಿದ್ದವು.

ಬುಗುರಿಯ ಆಕಾರದಲ್ಲಿರುವ ವಿಚಿತ್ರ ಆಕಾಶಕಾಯ ಅತಿ ವೇಗವಾಗಿ, ಗಾಳಿಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದನ್ನು ಆ ವಿಮಾನಗಳ ಪೈಲಟ್‌ಗಳು ಗಮನಿಸಿ ಹಿಂಬಾಲಿಸಿದ್ದರು. ಆ ವಿಮಾನಗಳಲ್ಲಿದ್ದ ಇನ್‌ಫ್ರಾರೆಡ್‌ ಟಾರ್ಗೆಟಿಂಗ್‌ ದೃಶ್ಯ ಮಾಪನ ತಂತ್ರಜ್ಞಾನದಿಂದ ಈ ಚೇಸಿಂಗ್‌ ದೃಶ್ಯಾವಳಿ ಸೆರೆಯಾಗಿತ್ತು.

ವೀಡಿಯೋ ದೃಶ್ಯಾವಳಿಗಳನ್ನು ಈಗ ಬಿಡುಗಡೆ ಮಾಡಿರುವ ಕಾರಣವನ್ನೂ ಪೆಂಟಗಾನ್‌ ಪ್ರಕಟಿಸಿದೆ. ಈ ಹಿಂದೆ ಇವುಗಳ ಅಧ್ಯಯನ ವರದಿ ಮತ್ತು ಈ ವೀಡಿಯೋಗಳ ಅಧಿಕೃತತೆಯನ್ನು ಬಹಿರಂಗಪಡಿಸಿದರೆ ರಾಷ್ಟ್ರೀಯ ಸುರಕ್ಷೆಗೆ ಭಂಗ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಈಗ ಅಂಥ ಪ್ರಮೇಯ ಇಲ್ಲ. ಇದರಿಂದ ಭವಿಷ್ಯದ ಯುಎ ಫ್ಒ ಅಧ್ಯಯನಕ್ಕೆ ತೊಂದರೆಯಾಗುವುದಿಲ್ಲ ಎಂದಿದೆ.

Advertisement

ಇಂಥ ಅನೇಕ ದೃಶ್ಯಾವಳಿಗಳು ಪೆಂಟಗಾನ್‌ ಭಂಡಾರದಲ್ಲಿವೆ. ಕೇವಲ ಮೂರು ತುಣುಕುಗಳನ್ನು ಮಾತ್ರ ಅದು ಬಿಡುಗಡೆ ಮಾಡಿದೆ ಎಂದು ಅಮೆರಿಕದ ಸಂಸದ ಮತ್ತು ಈ ಹಿಂದೆ ಯುಎಫ್ಒ ಅಧ್ಯಯನಕ್ಕೆ ನಿಧಿ ತರುವಲ್ಲಿ ಶ್ರಮಿಸಿದ್ದ ಹ್ಯಾರಿ ರೇಯ್ಡ್ ತಿಳಿಸಿದ್ದಾರೆ.

ನಿಲುವಿಗೆ ಬದ್ಧವಾಗಿದ್ದ ಪೆಂಟಗಾನ್‌
ನ್ಯೂಯಾರ್ಕ್‌ ಟೈಮ್ಸ್‌ ವರದಿ ಮತ್ತು 2007ರಲ್ಲಿ, 2017ರಲ್ಲಿ ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆದದ್ದರಿಂದ ಯುಎಫ್ಒಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಎದ್ದಿತ್ತು.

ಈ ಹಿನ್ನೆಲೆಯಲ್ಲಿ ಹಲವಾರು ಅಮೆರಿಕನ್ನರು ಸರಕಾರಕ್ಕೆ ಫ್ರೀಡಂ ಆಫ್ ಇನ್ ಫಾರ್ಮೇಶನ್‌ ಆ್ಯಕ್ಟ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ವೀಡಿಯೋಗಳ ಅಧಿಕೃತತೆ ತಿಳಿಸುವಂತೆ ಕೋರಿದ್ದರು. ಪರಿಣಾಮವಾಗಿ 2019ರ ಸೆಪ್ಟಂಬರ್‌ನಲ್ಲಿ ಈ ವೀಡಿಯೋಗಳ ಅಧಿಕೃತತೆಯನ್ನು ಪೆಂಟಗಾನ್‌ ಘೋಷಿಸಿತ್ತಾದರೂ ಅವುಗಳ ಅಧ್ಯಯನದಿಂದ ತಿಳಿದುಬಂದಿದ್ದ ಮಾಹಿತಿಗಳನ್ನು ಗೌಪ್ಯವಾಗಿರಿಸಿತ್ತು.

ಇಂದು ಕ್ಷುದ್ರಗ್ರಹ ಸಂಚಾರ
ಭಾರೀ ಗಾತ್ರದ ಕ್ಷುದ್ರಗ್ರಹವೊಂದು ಬುಧವಾರ ಸಂಜೆ 3.26ರ ಹೊತ್ತಿಗೆ (ಭಾರತೀಯ ಕಾಲಮಾನ) ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ.

ಇದನ್ನು ‘52768’ ಅಥವಾ ‘1998 ಒ.ಆರ್‌.2’ ಎಂದು ಗುರುತಿಸಲಾಗಿದೆ. ಹಲವು ಕಿ.ಮೀ.ಗಳಷ್ಟು ಅಗಲವಾಗಿರುವ ಈ ಗ್ರಹವು ತಾಸಿಗೆ 31,319 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಆದರೆ ಭೂಮಿಗೆ ಇದು ಅಪ್ಪಳಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next