ಬೆಂಗಳೂರು: ಸರ್ಕಾರ ಕಲಾವಿದರಿಗೆ ನೀಡುವ ಸಹಾಯ ಧನಕ್ಕಾಗಿ ಹಲವು ಮಂದಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಿಂಚಣಿ ಹಣ ಪಡೆಯುತ್ತಿರುವವರು ಕೂಡ ಅರ್ಜಿ ಸಲ್ಲಿಸಿದ್ದು ಅಂತಹ ಅರ್ಜಿಗಳು ತಿರಸ್ಕಾರಗೊಂಡಿವೆ.
ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಕಲಾವಿದರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಸರ್ಕಾರ ಈಗಾಗಲೆ ಮೂರು ಸಾವಿರ ರೂ. ಸಹಾಯ ಧನ ಘೋಷಣೆ ಮಾಡಿದೆ. ಈ ಸಹಾಯ ಧನ ಪಡೆಯಲು ಕೆಲವು ಮಾನ ದಂಡಗಳನ್ನು ಕೂಡ ನಿಗದಿ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಶಾಸನ ಪಡೆಯುತ್ತಿರುವವರು, ಪಿಂಚಣಿ ಪಡೆಯುತ್ತಿರುವವರು ಮತ್ತು ಸರ್ಕಾರಿ ನೌಕರರು ಹಾಗೂ 2020-21ನೇ ಸಾಲಿನ ಘಟಕ ಯೋಜನೆಯಡಿ ಪ್ರಯೋಜನ ಪಡೆದಿರುವ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಈಗ ಸರ್ಕಾರದ ಸಹಾಯ ಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಿಂಚಣಿ ಪಡೆಯುತ್ತಿರುವವರು ಕೂಡ ಅರ್ಜಿಸಲ್ಲಿಸಿರುವುದು ಬೆಳಕಿಗೆ ಬಂದಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಬಾರಿಯ ಲಾಕ್ ಡೌನ್ ವೇಳೆ ಸರ್ಕಾರ ಎರಡು ಸಾವಿರ ರೂ.ಸಹಾಯ ಧನ ಕಲಾವಿದರಿಗೆ ನೀಡಿತ್ತು. ಆಗಲೂ ಮಾಶಾಸನ ಪಡೆಯುತ್ತಿರುವವರು ಮತ್ತು ಪಿಂಚಣಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಿದ್ದರು. ಈಗಲೂ ಕೂಡ 150ಕ್ಕೂ ಅಧಿಕ ಮಂದಿ ಪಿಂಚಣಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಿದ್ದು, ಆಧಾರ್ ಕಾರ್ಡ್ ಸಂಖ್ಯೆ ಪರಿಶೀಲನೆಯಿಂದ ಇದು ಬೆಳಕಿಗೆ ಬಂದಿದೆ. ಅಂತಹ ಕಲಾವಿದರ ಅರ್ಜಿ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.
26 ಸಾವಿರ ಮಂದಿ ಕಲಾವಿರಿಂದ ಅರ್ಜಿ: ಸರ್ಕಾರದ ಸಹಾಯಧನ ಪಡೆಯಲು ಈಗಾಗಲೇ ಸಾಹಿತ್ಯ, ಜಾನಪದ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸುಮಾರು 26 ಸಾವಿರಕ್ಕೂ ಅಧಿಕ ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗಿದೆ. ಈಗಾಗಲೇ ಅರ್ಜಿಗಳನ್ನು ಪರಿಷ್ಕರಿಸುವ ಕಾರ್ಯ ಸಹ ನಡೆದಿದೆ. ಕೆಲವು ಅರ್ಜಿಗಳು ದೋಷಪೂರಿತವಾಗಿದ್ದು, ಸುಮಾರು 25 ಸಾವಿರ ಕಲಾವಿದರಿಗೆ ಸಹಾಯ ಧನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಹೇಳಿದ್ದಾರೆ
4.8 ಕೋಟಿ ರೂ.ಹಂಚಿಕೆ : ಕಳೆದ ಬಾರಿಗಿಂತಲೂ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಅರ್ಜಿಸಲ್ಲಿಸಿದ್ದಾರೆ. ಹೀಗಾಗಿ ಹೆಚ್ಚಿನ ಅನುದಾನ ಬೇಕಾಗಬಹುದು. ಕಳೆದ ಬಾರಿ ಸರ್ಕಾರ ಕಲಾವಿದರಿಗಾಗಿ ಸುಮಾರು 3.70 ಕೋಟಿ ರೂ. ಅನುದಾನವನ್ನು ಸಹಾಯ ಧನಕ್ಕಾಗಿ ನೀಡಿತ್ತು. ಈ ಬಾರಿ ಸುಮಾರು 4.8 ಕೋಟಿ ರೂ. ಅನುದಾನ ನೀಡಿದೆ. ಎಲ್ಲ ವಲಯಗಳ ಕಲಾವಿದರು ಅರ್ಜಿ ಸಲ್ಲಿಕೆ ಮಾಡಿದ್ದು ಅರ್ಹ ಕಲಾವಿದರಿಗೆ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಕಲಾವಿದರಿಗೆ ತಲುಪಿಸುವ ಕೆಲಸ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರದ ಆರ್ಥಿಕ ಸಹಾಯ ಧನಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಈ ಬಾರಿ ವಿವಿಧ ಕ್ಷೇತ್ರದ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮತ್ತಷ್ಟು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಎಲ್ಲರಿಗೂ ಸಹಾಯ ಧನ ತಲುಪಿಸುವ ಕೆಲಸವನ್ನು ಇಲಾಖೆ ಮಾಡಲಿದೆ.
–ಎಸ್.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
ದೇವೇಶ ಸೂರಗುಪ್ಪ