Advertisement

ಪಿಂಚಣಿಗಾಗಿ ರಕ್ತ ಕೊಡುವ ಚಳವಳಿ “ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ’

06:01 AM Sep 25, 2018 | |

ಬೇಡಿಕೆಗಳ ಈಡೇರಿಕೆಗಾಗಿ ಜನರು ನಾನಾ ರೀತಿಯ ಚಳವಳಿ ಹಾಗೂ ಮುಷ್ಕರಗಳನ್ನು ಮಾಡಿರುವ ಬಗ್ಗೆ ಕೇಳಿರುತ್ತೀರಿ. ಈ ಚಳವಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದೇ ಹೆಚ್ಚು. ನಿರುಪದ್ರವಿ ಚಳವಳಿಗಳೂ ಇವೆ. ಆದರೆ ಜೀವದಾನ ಎಂದು ಕರೆಯಲ್ಪಡುವ ರಕ್ತದಾನದ ಮೂಲಕ ಹಲವಾರು ಜೀವಗಳ ರಕ್ಷಣೆ ಮಾಡಲು, ಆ ಚಳವಳಿಯ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲು ಬೃಹತ್‌ ಸಂಖ್ಯೆಯಲ್ಲಿ ಸರಕಾರಿ ನೌಕರರು ಸಿದ್ಧರಾಗಿರೆ ಎಂಬುದು ಗೊತ್ತೇ? ಹೌದು ಹೀಗೊಂದು ವಿನೂತನ ಚಳವಳಿಯ ಮೂಲಕ ಹಕ್ಕೊತ್ತಾಯಕ್ಕೆ ಮುಂದಾಗಿರುವವರು ನಮ್ಮ ರಾಜ್ಯದ ಎನ್‌.ಪಿ.ಎಸ್‌.(ಹೊಸ ಪಿಂಚಣಿ ಯೋಜನೆ)ಯ ನೌಕರರು. ಹೊಸ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಇದೇ ಅಕ್ಟೋಬರ್‌ 3ರಂದು ಎನ್‌.ಪಿ.ಎಸ್‌ ನೌಕರರು ರಾಜ್ಯಾದ್ಯಂತ ರಕ್ತದಾನ ಚಳುವಳಿಯನ್ನು ಹಮ್ಮಿಕೊಂಡಿ¨ದ್ದಾರೆ. ಆ ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಅದೇ ಸಮಯದಲ್ಲಿ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ರಕ್ತದಾನ ಮಾಡಲಾ ಗುತ್ತದೆ. ಸುಮಾರು 3.5ಲಕ್ಷ ಎನ್‌. ಪಿ. ಎಸ್‌. ನೌಕರರು ಈ ಚಳವಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅದರಲ್ಲೂ ಸರಕಾರಿ ಆಸ್ಪತ್ರೆಗಳ ಬ್ಲಿಡ್‌ ಬ್ಯಾಂಕುಗಳಿಗೆ ಈ ರಕ್ತವನ್ನು ದಾನ ಮಾಡಲು ನೌಕರರು ತೀರ್ಮಾನಿಸಿದ್ದಾರೆ. ಸಿಎಂ ಕುಮಾರಸ್ವಾಮಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌. ಪಿ. ಎಸ್‌. ರದ್ದು ಮಾಡುವುದಾಗಿ ಭರವಸೆ ನೀಡಿದ್ದರು. ಅವರ ಗಮನ ಸೆಳೆದು, ಬೇಡಿಕೆ ಈಡೇರಿಸಿಕೊಳ್ಳುವುದು ನೌಕರರ ಮುಖ್ಯ ಉದ್ದೇಶ. 

Advertisement

ಏಕೆ ಎನ್‌.ಪಿ.ಎಸ್‌.ಗೆ ಇಷ್ಟೊಂದು ವಿರೋಧ? 
ಎನ್‌. ಪಿ. ಎಸ್‌. ಬಗ್ಗೆ ಗೊತ್ತಿಲ್ಲದವರಿಗೆ ಈ ಪ್ರಶ್ನೆ ಖಂಡಿತಾ ಮೂಡಿರಬಹುದು. ಭಾರತದಲ್ಲಿ 1912ರಿಂದಲೇ ನಿಶ್ಚಿತ ಪಿಂಚಣಿ ಯೋಜನೆ ಆರಂಭವಾಗಿತ್ತು. ಸರಕಾರಿ ಸೇವೆಯಲ್ಲಿ ಮೂವತ್ತು ವರ್ಷಸರಕಾರಿ ನೌಕರಿಯಲ್ಲಿದ್ದವರಿಗೆ ತಮ್ಮ ಇಳಿವಯಸ್ಸಿನಲ್ಲಿ ನೆರವಾಗಲು ಈ ಯೋಜನೆ ಜಾರಿಗೆ ತರಲಾಗಿತ್ತು. ವಿಶ್ವಬ್ಯಾಂಕ್‌ 2003ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಗೆ ಸಾಲ ನೀಡಲು,ತನ್ನ ನೌಕರರಿಗೆ ಎನ್‌. ಪಿ. ಎಸ್‌. ಅನುಷ್ಠಾನಗೊಳಿಸುವಂತೆ ಷರತ್ತು ವಿಧಿಸಿತ್ತು. ಈ ಷರತ್ತಿನನ್ವಯ ಕ್ರೋಢೀಕರಣಗೊಂಡ ಮೊಬಲಗನ್ನು ವಿಶ್ವ ಷೇರು ಮಾರುಕಟ್ಟೆಯಲ್ಲಿ ಹೂಡಬೇಕು, ಅದರ ಲಾಭಾಂಶದಿಂದ ಪಿಂಚಣಿ ನೀಡಬೇಕು. ಹಳೆಯ ಪಿಂಚಣಿ ಯೋಜನೆಯಲ್ಲಿ ನೌಕರನ 
ಸಂಬಳದಿಂದ ಪಿಂಚಣಿ ಹೆಸರಿನಲ್ಲಿ ಯಾವುದೇ ಕಡಿತವಿರಲಿಲ್ಲ. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ ಮೂಲವೇತನ ಹಾಗೂತುಟ್ಟಿ ಭತ್ತೆಯ ಶೇ.10 ನ್ನು ಕಡಿತ ಮಾಡಲಾಗುತ್ತದೆ. ಜೊತೆಗೆ ಸರಕಾರ ಅಷ್ಟೇ ಮೊತ್ತವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂದಾಯ ಮಾಡುತ್ತದೆ. ಹಳೆಯ ಪಿಂಚಣಿಯಲ್ಲಿ ಸಾಮಾನ್ಯ ಭವಿಷ್ಯ ನಿಧಿ(ಜಿ.ಪಿ.ಎಫ್) ಸೌಲಭ್ಯವಿದೆ. ಆದರೆ ಹೊಸ ಪಿಂಚಣಿದಾರರಿಗೆ ಈ ಸೌಲಭ್ಯವಿಲ್ಲ. 

 ಹಳೆಯ ಪಿಂಚಣಿ ಯೋಜನೆಯಲ್ಲಿ ಗರಿಷ್ಠ 33ವರ್ಷ ಸೇವೆಗೈದ ಸರ್ಕಾರಿ ನೌಕರನ ಅಂತಿಮ ವೇತನದ ಶೇ.50ರಷ್ಟು ಪಿಂಚಣಿ ಮೊಬಲಗನ್ನು ನೀಡಲಾಗುತ್ತದೆ. ಹೊಸ ಪಿಂಚಣಿಯಲ್ಲಿ ಈ ರೀತಿ ಖಚಿತ ಪಿಂಚಣಿ ಇಲ್ಲ. ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಇರುತ್ತದೆ. ಹಳೆಯ ಪಿಂಚಣಿಯಲ್ಲಿ ಮೂರನೇ ಒಂದು ಭಾಗದಷ್ಟು ಪಿಂಚಣಿಯನ್ನು ಪರಿವರ್ತಿಸಿ ಆ ಮೊತ್ತವನ್ನು ನಿವೃತ್ತಿ ಸಮಯದಲ್ಲಿ ಒಟ್ಟಿಗೆ ಪಡೆಯಬಹುದು. ಆದರೆ ಹೊಸ ಪಿಂಚಣಿ (ಎನ್‌. ಪಿ. ಎಸ್‌. )ನಲ್ಲಿ ಈ ಸೌಲಭ್ಯ ಇರುವುದಿಲ್ಲ. ಕರ್ನಾಟಕ ಸರಕಾರಿ ನೌಕರರ ಕುಟುಂಬ ಪಿಂಚಣಿ ನಿಯಮಾವಳಿ 2002ರ ಪ್ರಕಾರ ಉಪಲಬ್ಧಿಗಳ ಶೇ.30ರಷ್ಟು ಮಾಸಿಕ ಕುಟುಂಬ ಪಿಂಚಣಿ ಲಭ್ಯ. ದಿನಾಂಕ 23.06.2018 ರ ಸರಕಾರಿ ಆದೇಶ ಸಂಖ್ಯೆ ಆ.ಇ. 34 ಪಿ.ಇ.ಎನ್‌. 2018ರ ಮೇರೆಗೆ ದಿನಾಂಕ 01.04.2018ರಿಂದ ಜಾರಿಗೆ ಬರುವಂತೆ ಎನ್‌. ಪಿ. ಎಸ್‌.ನವರಿಗೆ ಕುಟುಂಬ ಪಿಂಚಣಿ ಕಲ್ಪಿಸಿದ್ದರೂ ಇದು ಐಚ್ಛಿಕವಾಗಿರುತ್ತದೆ. 

 ಪ್ರಪಂಚದಾದ್ಯಂತ ಬೃಹತ್‌ ಆರ್ಥಿಕ ಕುಸಿತಗಳು ಆಗಾಗ ಸಂಭವಿಸುತ್ತಿರುವಾಗ, ರೂಪಾಯಿಯ ಬೆಲೆ ಕುಸಿದಾಗ, ನೌಕರರ ಷೇರು ಇರುವ ಕಂಪೆನಿಗಳು ನಷ್ಟ ಅನುಭವಿಸಿದಾಗ ಎನ್‌. ಪಿ. ಎಸ್‌. ನೌಕರರ ಸಂಬಳದಿಂದ ಪ್ರತಿ ತಿಂಗಳು ಕಡಿತಗೊಂಡ ಆ ಹತ್ತು ಶೇಕಡಾ ಮೊತ್ತ ಕೇವಲ ಅಸಲಿನಷ್ಟಾದರೂ ಹಿಂದೆ ಬಂದೀತೆಂಬ ಯಾವ ಖಾತ್ರಿಯೂ ಇಲ್ಲ. ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆಯಾದರೆ ನೌಕರರಿಗೆ ಬಂಪರ್‌ ಲಾಭಾಂಶ ದೊರೆಯಬಹುದು. ಆದರೆ ಆ ಸಾಧ್ಯತೆ ತೀರಾ ಕ್ಷೀಣ. ಹಳೆ ಪಿಂಚಣಿಯಲ್ಲಿ ನಿವೃತ್ತಿ ಪಿಂಚಣಿಗೆ ತುಟ್ಟಿ ಭತ್ತೆ ಸೌಲಭ್ಯವಿದೆ. ಆದರೆ ಎನ್‌. ಪಿ. ಎಸ್‌. ನಲ್ಲಿ ಆ ಸೌಲಭ್ಯವಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸರಕಾರದ ಕಾನೂನು ಎನ್‌. ಪಿ. ಎಸ್‌. ನೌಕರರ ಪಾಲಿಗೆ ಮರೀಚಿಕೆಯಾಗಿದೆ. 01-04-2006ರ ನಂತರ ನೇಮಕವಾದವರು ತಮಗಿಂತ ಮೊದಲು ನೇಮಕ ವಾದವರಂತೆ ತಮ್ಮ ಪೂರ್ತಿ ಸಂಬಳವನ್ನು ಪಡೆಯಲು ಸಾಧ್ಯವಿಲ್ಲ. ಶೇ.10ರಷ್ಟು ಸಂಬಳ ಎನ್‌. ಪಿ. ಎಸ್‌.ಗೆ ಕಡಿತವಾಗಿ ಉಳಿದ ಹಣವನ್ನಷ್ಟೇ ಅವರು ಪಡೆಯಬಹುದು. 

ಈ ರಕ್ತದಾನ ಚಳುವಳಿಯಷ್ಟೇ ಅಲ್ಲ, ವಿಶ್ವ ದಾಖಲೆಯೂ ಆಗಬಹುದು. ಎನ್‌. ಪಿ. ಎಸ್‌. ಎಂಬ ಹೊಸ ಪಿಂಚಣಿ ವ್ಯವಸ್ಥೆ ಹಲವು ನ್ಯೂನತೆಗಳಿಂದ ಕೂಡಿರುವುದರಿಂದಲೂ, ನಿವೃತ್ತಿ ಪಿಂಚಣಿಯ ಬಗ್ಗೆ ಖಚಿತತೆ ಹೊಂದಿಲ್ಲದಿರುವುದರಿಂದಲೂ ನೌಕರರು ಈ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ನಮ್ಮ ಪಿಂಚಣಿ ನಮ್ಮ ಹಕ್ಕು ಅದಕ್ಕಾಗಿ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಎಂದು ತೀವ್ರ ಹೋರಾಟಕ್ಕಿಳಿದಿದ್ದಾ ರೆ. ಈಗಾಗಲೇ ಪ್ರತಿ ತಾಲ್ಲೂಕಿನಲ್ಲೂ ರಕ್ತದಾನ ಮಾಡುವ ನೌಕರರ ಹೆಸರು ನೋಂದಣಿ ನಡೆಯುತ್ತಿದ್ದು ಶಿಕ್ಷಣ ಇಲಾಖೆ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ನೌಕರರು ಬಹು ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕುಟುಂಬ ಪಿಂಚಣಿ ವ್ಯವಸ್ಥೆ  (Family Pension) ಹಾಗೂ DCRG ಗಾಗಿ 2018, ಜ.29 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ “ಜನವರಿ ಇಪ್ಪತ್ತು- ಎದ್ದು ಬನ್ನಿ ಆವತ್ತು’ ಎಂಬ ಧ್ಯೇಯವಾಕ್ಯದಡಿ ನಡೆದ ಹೋರಾಟದಲ್ಲಿ ಎಂಭತ್ತು ಸಾವಿರ ಜನ ಸೇರಿದ್ದರು. ಇದರ ಫ‌ಲವಾಗಿ DCRG ಹಾಗೂ Family Pension ಸೌಲಭ್ಯ ಲಭ್ಯವಾಗಿದೆ. ಉದ್ದೇಶಿತ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಎಂಬ ರಕ್ತದಾನ ಚಳವಳಿಯಲ್ಲಿ ಲಕ್ಷಕ್ಕೂ ಮಿಕ್ಕಿ ನೌಕರರು ರಕ್ತದಾನ ಮಾಡುವ ಸಾಧ್ಯತೆಯಿದೆ. ಇದನ್ನು ಖಚಿತಪಡಿಸಲೆಂಬಂತೆ ಬೃಹತ್‌ ಸಂಖ್ಯೆಯಲ್ಲಿ ನೌಕರರು ರಕ್ತದಾನಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿರೆ. 2013 ಡಿಸೆಂಬರ್‌ 6ರಂದು 709 ಸ್ಥಳಗಳಲ್ಲಿ 1115 ಕ್ಯಾಂಪ್‌ಗ್ಳ ಮೂಲಕ 61902 ಮಂದಿ ಭಾರತಾದ್ಯಂತ ಒಂದೇ ದಿನ ರಕ್ತದಾನ ಮಾಡಿದ್ದು ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗಿತ್ತು. ಏಈಊಇ ಬ್ಯಾಂಕಿನವರು ರಕ್ತದಾನದ ಕುರಿತಾದ ಜನಜಾಗೃತಿ ಮೂಡಿಸಲು ಈ ಏಕದಿನ ರಕ್ತದಾನವನ್ನು ಹಮ್ಮಿಕೊಂಡಿದ್ದರು. ಎನ್‌. ಪಿ. ಎಸ್‌. ನೌಕರರು ಈ ದಾಖಲೆಯನ್ನು ಮುರಿಯುವ ನಿರ್ಧಾರ ಮಾಡಿದ್ದಾರೆ. 

Advertisement

ಹೊಸ ಪಿಂಚಣಿ ವ್ಯವಸ್ಥೆಯ ಕುರಿತಾದ ತಮ್ಮ ಅಸಮಾಧಾನ ಹಾಗೂ ನೋವನ್ನು ಸಾವಿರಾರು ರೋಗಿಗಳಿಗೆ ಉಪಯೋಗ ವಾಗುವ ರೀತಿಯಲ್ಲಿ ಪ್ರದರ್ಶಿಸಲು ಇವರು ಮುಂದಾದದ್ದು ಅನುಕರಣೀಯವೆನಿಸಿದೆ. ತಮ್ಮ ಚಳವಳಿಗೆ ಎನ್‌. ಪಿ. ಎಸ್‌.ಗೆ ಒಳಪಡದ ನೌಕರರು ಹಾಗೂ ಸಾರ್ವಜನಿಕರು ಬೆಂಬಲ ನೀಡುವ ಭರವಸೆಯೊಂದಿಗೆ, ಹೊಸ ಪಿಂಚಣಿ ವ್ಯವಸ್ಥೆ ರದ್ದಾಗುವ ಕನಸಿನೊಂದಿಗೆ ಅಚಲ ನಿರ್ಧಾರದೊಂದಿಗೆ ಅಕ್ಟೋಬರ್‌ 3ನ್ನು ಎನ್‌. ಪಿ. ಎಸ್‌. ನೌಕರರು ಎದುರು ನೋಡುತ್ತಿದ್ದಾರೆ. ಎನ್‌. ಪಿ. ಎಸ್‌. ಎಂಬ ಅವೈಜ್ಞಾನಿಕ ಪದ್ಧತಿ ರ¨ದ್ದಾಗಿ ಅವರ ಬೇಡಿಕೆಗಳು ಈಡೇರಲಿ.

ಜೆಸ್ಸಿ ಪಿ. ವಿ. ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next