Advertisement

ಪೆನ್ಷನ್ ಪಾರ್ಟಿ; ರೈತರಿಗೆ ಸಲಹೆ

08:59 AM Sep 24, 2019 | Sriram |

ರೈತರಿಗೂ ಪೆನ್ಷನ್ ರೂಪದಲ್ಲಿ ಒಂದಷ್ಟು ಹಣ ಸಿಗುವಂತೆ ಮಾಡುವ ಅಪರೂಪದ ಯೊಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ರೈತರಿಗೆ ಏನೇನು ಉಪಯೋಗಗಳಿವೆ ಎಂಬುದರ ವಿವರ ಇಲ್ಲಿದೆ…

Advertisement

ಕಳೆದ ತಿಂಗಳು ಕೇಂದ್ರ ಸರ್ಕಾರ “ಪ್ರಧಾನಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನಾ’ ಎನ್ನುವ ಹೊಸದೊಂದು ಪಿಂಚಣಿ ಯೋಜನೆಯನ್ನು ಘೋಷಿಸಿತು. ರೈತರ ಹಣಕಾಸಿನ ಸಮಸ್ಯೆಗೊಂದು ಸಣ್ಣ ಪರಿಹಾರದಂತಿರುವ ಈ ಯೋಜನೆಯಲ್ಲಿನ ಹೂಡಿಕೆ, ರೈತಬಂಧುಗಳಿಗೆ ನಿಜಕ್ಕೂ ಪ್ರಯೋಜನಕಾರಿ. ಬಿಡುಗಡೆಯಾದ ದಿನದಿಂದ ಸೆಪ್ಟೆಂಬರ್‌ ಮೊದಲ ವಾರದವರೆಗೆ ದೇಶದಾದ್ಯಂತ ಸರಿಸುಮಾರು ಹದಿನಾಲ್ಕು ಲಕ್ಷಗಳಷ್ಟು ರೈತ ಬಾಂಧವರು ಈ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಓಡಿಶಾ, ಹರ್ಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢ ರಾಜ್ಯಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ರೈತರು ಯೋಜನೆಯಡಿ ಹೆಸರು ನೋಂದಾಯಿಸಿ ದಾಖಲೆ ಬರೆದಿದ್ದಾರೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರೈತರ ನೋಂದಣಿಯ ಸಂಖ್ಯೆ ತೀರ ಕಡಿಮೆಯೇ ಎಂದರೆ ತಪ್ಪಾಗಲಾರದು. ಯೋಜನೆಯ ಕುರಿತಾದ ಸರಿಯಾದ ಮಾಹಿತಿಯ ಕೊರತೆಯೂ ಅದಕ್ಕೆ ಕಾರಣವಿರಬಹುದು.

ನಿವೃತ್ತಿ ವಯಸ್ಸಿನವರೆಗೆ ಹೂಡಿಕೆ
ಇದೊಂದು ಕೇಂದ್ರ ಸರಕಾರಿ ಸ್ವಯಂಪ್ರೇರಿತ ಮತ್ತು ಸಹಾಯಕ ಪಿಂಚಣಿ ಯೋಜನೆ. ಅರವತ್ತನೆಯ ವಯಸ್ಸಿನಿಂದ ಶುರುವಾಗಿ, ಆಜೀವ ಪರ್ಯಂತ ಮಾಸಿಕ ಮೂರು ಸಾವಿರ ರೂಪಾಯಿಗಳಷ್ಟು ಪಿಂಚಣಿಯನ್ನು ರೈತನ ಬ್ಯಾಂಕಿನ ಖಾತೆಗೆ ಸೇರಿಸಲಾಗುತ್ತದೆ. ಈ ಯೋಜನೆಯ ಲಾಭವನ್ನು, ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ ಎರಡು ಹೆಕ್ಟೇರ್‌ ಅಥವಾ ಅದಕ್ಕಿಂತ ಕಡಿಮೆ ಜಮೀನಿನಲ್ಲಿ ಬೇಸಾಯ ನಡೆಸುತ್ತಿರುವ ಹದಿನೆಂಟರಿಂದ ನಲ್ವತ್ತು ವರ್ಷಗಳವರೆಗಿನ ವಯೋಮಾನದ ರೈತರು ಪಡೆದುಕೊಳ್ಳಬಹುದು. ಹೂಡಿಕೆದಾರರ ವಯಸ್ಸಿಗೆ ಅನುಗುಣವಾಗಿ ಮಾಸಿಕ 55 ರೂಪಾಯಿಗಳಿಂದ ಪ್ರಾರಂಭವಾಗಿ 200 ರೂಪಾಯಿಗಳಷ್ಟು ಹಣವನ್ನು ತೊಡಗಿಸಬೇಕಿರುವ ಈ ಯೋಜನೆಯಡಿ, ಹೂಡಿಕೆಯೆನ್ನುವುದು ನಿವೃತ್ತಿಯ ವಯಸ್ಸಿನವರೆಗೆ ಇರುವಂಥದ್ದು. ಯೋಜನೆಗೆ ಅರ್ಹವಿರುವ ಯಾವುದೇ ವಯಸ್ಸಿನಿಂದ ಹೂಡಿಕೆ ಆರಂಭಿಸಿದರೂ ಹೂಡಿಕೆದಾರರು ತಮಗೆ ಅರವತ್ತು ವರ್ಷ ವಯಸ್ಸಾಗುವವರೆಗೂ ಹಣ ಕಟ್ಟಬೇಕು.

ರೈತರು, ತಾವು ಮಾತ್ರವಲ್ಲದೇ ತಮ್ಮ ಮಡದಿಯ ಹೆಸರನ್ನೂ ಸಹ ಪ್ರತ್ಯೇಕ ಹೂಡಿಕೆಯೊಂದಿಗೆ ಯೋಜನೆಯಡಿ ನೋಂದಾಯಿಸಿ ನಿವೃತ್ತಿಯ ಕಾಲಕ್ಕೆ ಮಡದಿಯ ಹೆಸರಿಗೂ ಪ್ರತ್ಯೇಕ 3,000 ರೂಪಾಯಿಗಳಷ್ಟು ಪಿಂಚಣಿಯನ್ನು ಪಡೆಯಬಹುದೆನ್ನುವುದು ಈ ಯೋಜನೆಯ ಮತ್ತೂಂದು ವಿಶೇಷ. ಪಿಂಚಣಿಯ ವಯಸ್ಸನ್ನು ತಲುಪುವ ಮುನ್ನವೇ ರೈತ ಮೃತಪಟ್ಟರೆ, ಯೋಜನೆಯಡಿ ಹೂಡಿರಬಹುದಾದ ಅಷ್ಟೂ ಹಣವನ್ನು ಸಣ್ಣಲ್ಲೊಂದು ಬಡ್ಡಿಯೊಂದಿಗೆ ಮಡದಿಗೆ ಮರುಪಾವತಿಸಲಾಗುವುದು. ಪಿಂಚಣಿ ಪಡೆಯುವ ಸಮಯಕ್ಕೆ ಪಿಂಚಣಿದಾರ ಅಸುನೀಗಿದರೆ ಆತನ ಮಡದಿಗೆ ಕೌಟುಂಬಿಕ ಪಿಂಚಣಿಯ ಹೆಸರಿನಡಿ ಒಂದೂವರೆ ಸಾವಿರ ರೂಪಾಯಿಗಳಷ್ಟು ಪಿಂಚಣಿಯನ್ನು ಪಾವತಿಸುವ ಸೌಲಭ್ಯವೂ ಈ ಯೋಜನೆಯ ಲಾಭಗಳಲ್ಲೊಂದು. ಇಷ್ಟಲ್ಲದೆ, ಪಿಂಚಣಿಯ ಯೋಜನೆಯಲ್ಲಿ ಒಮ್ಮೆ ಹಣ ತೊಡಗಿಸಲಾರಂಭಿಸಿದ ನಂತರ ಯೋಜನೆಯನ್ನು ಮುಂದುವರೆಸುವ ಆಸಕ್ತಿ ಇರದಿದ್ದರೆ ಐದು ವರ್ಷಗಳ ನಂತರ ಪಾವತಿಸಿದ ಮೊತ್ತವನ್ನು ಸಣ್ಣಲ್ಲೊಂದು ಬಡ್ಡಿದರದೊಂದಿಗೆ ಹಿಂಪಡೆದು ಯೋಜನೆಯಿಂದ ಹಿಂದಕ್ಕೆ ಸರಿಯುವ ಆಯ್ಕೆ ಸಹ ಇಲ್ಲಿದೆ.

ಯಾರು ಯಾರು ನೋಂದಾಯಿಸಬಹುದು?
ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕೆಳವರ್ಗದ ಬಡ ರೈತರ ಹಿತಾಸಕ್ತಿಯಿಂದ ಅನುಷ್ಠಾನಕ್ಕೆ ಬಂದಿರುವ ಯೋಜನೆ ಇದಾಗಿರುವುದರಿಂದ, ಯೋಜನೆಯ ಹೂಡಿಕೆಗೂ ಮುನ್ನ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದೊಳಿತು. ರಾಷ್ಟ್ರೀಯ ಪಿಂಚಣಿ ಯೋಜನೆ, ಪ್ರಧಾನ್‌ ಮಂತ್ರಿ ಶ್ರಮಯೋಗಿ ಮಾನ್‌ ಧನ್‌ ಯೋಜನೆ, ಪ್ರಧಾನಮಂತ್ರಿ ಲಘು ವ್ಯಾಪಾರಿ ಮಾನ್‌ ಧನ್‌ ಯೋಜನೆಯಂಥ ಕೇಂದ್ರ ಸರಕಾರದ ಇನ್ಯಾವುದೇ ಯೋಜನೆಗಳ ಸವಲತ್ತು ಪಡೆಯುತ್ತಿರುವ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಉಳಿದಂತೆ, ಎರಡು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಇದ್ದು, ಅಂಥ ಜಮೀನು ವ್ಯವಸಾಯೇತರ ಭೂಮಿಯಾಗಿದ್ದರೆ ಮತ್ತು ಜಮೀನಿನ ಮಾಲೀಕರು ತೆರಿಗೆ ಕಟ್ಟುವ ಉದ್ಯೋಗಿಗಳಾಗಿದ್ದರೆ, ಚುನಾಯಿತ ಜನಪ್ರತಿನಿಧಿಗಳಾಗಿದ್ದರೆ, ರಾಜ್ಯ ಅಥವಾ ಕೇಂದ್ರ ಸರಕಾರದ ಉದ್ಯೋಗಿಗಳಾಗಿದ್ದರೆ, ವೈದ್ಯ, ಇಂಜಿನಿಯರಿಂಗ್‌ ಮತ್ತು ವಕೀಲಿಕೆಯಂಥ ವೃತ್ತಿಯಲ್ಲಿದ್ದರೆ ಅಂಥವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

Advertisement

ಅಭ್ಯರ್ಥಿ ಒದಗಿಸಬೇಕಾದ ಮಾಹಿತಿ
ಯೋಜನೆಯ ನೋಂದಣಿ ಪ್ರಕ್ರಿಯೆಯೂ ತೀರ ಕಷ್ಟದ್ದೇನಲ್ಲ.ಆನ್‌ಲೈನ್‌ ನೋಂದಣಿಯು ಸುಲಭ ಸಾಧ್ಯವಿರುವುದರಿಂದ, ಅಂತರ್ಜಾಲದ ಸೌಲಭ್ಯ ಹೊಂದಿದವರು ಆನ್‌ಲೈನ್‌ ಸೌಕರ್ಯವನ್ನು ಬಳಸಿಕೊಳ್ಳುವುದೊಳಿತು.ಅಂತರ್ಜಾಲ ನೋಂದಣಿಯ ಸೌಲಭ್ಯವಿರದ ಊರುಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯಡಿ ದಾಖಲಾಗಬಹುದು. ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ವಿವರಗಳೊಂದಿಗೆ ಕೆಲವು ಮೂಲಭೂತ ಮಾಹಿತಿಗಳನ್ನೊದಗಿಸಿದರೆ ನೋಂದಣಿ ಸರಾಗ.ನೋಂದಣಿಯ ಶುಲ್ಕವನ್ನು ಸರ್ಕಾರವೇ ಭರಿಸುವುದರಿಂದ, ನೋಂದಣಿದಾರರಿಗೆ ಯಾವುದೇ ಸೇವಾ ಶುಲ್ಕವಿಲ್ಲವೆನ್ನುವುದು ನೆನಪಿರಲಿ. ಹಾಗಾಗಿ ಈ ಬರಹವನ್ನು ಓದುವವರು ಯಾರೇ ಆಗಿದ್ದರೂ, ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ರೈತ ಮಿತ್ರರೊಂದಿಗೆ ಹಂಚಿಕೊಳ್ಳಿ. ಬಡ ರೈತನೊಬ್ಬನ ಬದುಕಿಗೆ ಸಣ್ಣಲ್ಲೊಂದು ಸಂತಸ ಒದಗಿಸಿದ ನೆಮ್ಮದಿ ನಿಮ್ಮದಾಗಲಿ.

– ಗುರುರಾಜ ಕೊಡ್ಕಣಿ, ಯಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next