Advertisement

ಸೀಬರ್ಡ್‌ ನಿರಾಶ್ರಿತರಿಗೆ ಪೆನ್ಶನ್‌ ನೀಡಿ

05:10 PM Apr 20, 2019 | Team Udayavani |

ಕಾರವಾರ: ಸಂಸದರಾಗುವವರು ಸೀಬರ್ಡ್‌ ನಿರಾಶ್ರಿತರಿಗೆ ಪೆನ್ಶನ್‌ ಮತ್ತು ಕುಟುಂಬಕ್ಕೆ ಒಂದು ನೌಕರಿ ನೀಡಬೇಕು ಎಂದು ಕಾರವಾರ -ಅಂಕೋಲಾ ಸೀಬರ್ಡ್‌ ನೌಕಾನೆಲೆ ನಿರಾಶ್ರಿತರ ರೈತ ಮತ್ತು ಕೂಲಿ ಕಾರ್ಮಿಕರ ಒಕ್ಕೂಟ ಚೆಂಡಿಯಾದ ಅಧ್ಯಕ್ಷ ಗಜಾನನ ನಾಯ್ಕ ಹೇಳಿದರು.

Advertisement

ಕಾರವಾರದಲ್ಲಿ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ನಿರಾಶ್ರಿತರಿಗೆ ಸುಪ್ರಿಂಕೋರ್ಟ್‌ ನಿರ್ದೇಶನದಂತೆ ಪರಿಹಾರ ವಿತರಿಸಲಾಗಿದೆ. ಬಹಳ ದಿನ ನನೆಗುದಿಗೆ ಬಿದ್ದಿದ್ದ ಪರಿಹಾರ ಪ್ರಕರಣ ಬಗೆಹರಿಸಲು ದೆಹಲಿಗೆ ಸತೀಶ್‌ ಸೈಲ್ ನಮ್ಮನ್ನು ಕರೆದುಕೊಂಡು ಹೋಗಿದ್ದರು. ಸುಪ್ರಿಂಕೋರ್ಟ್‌ನಲ್ಲಿ ವಾದಿಸಲು ನಮ್ಮ ಪರ ವಕೀಲರನ್ನು ಇಟ್ಟಿದ್ದರು. ಅದಕ್ಕಾಗಿ ಅವರಿಗೆ ಒಮ್ಮೆ ಮತ ಹಾಕಿ ಶಾಸಕರನ್ನಾಗಿ ಮಾಡಿದ್ದೆವು. ನಂತರ ಬಿಜೆಪಿ ಸರ್ಕಾರ ಇದ್ದಾಗ ಪರಿಹಾರ ಸಿಕ್ಕಿತು. ಆಗ ರೂಪಾಲಿ ನಾಯ್ಕರನ್ನು ಬೆಂಬಲಿಸಿದೆವು. ಈಗ ನಾವು ಅದೇ ಪಕ್ಷಕ್ಕೆ ಮತ ನೀಡಿ ಋಣ ತೀರಿಸಲಿದ್ದೇವೆ ಎಂದರು.

ಪರಿಹಾರವನ್ನು ಕೋರ್ಟ್‌ ನಿರ್ದೇಶನದಂತೆ ಸರ್ಕಾರ ನೀಡಿದೆ. ಅದಕ್ಕೆ ಯಾಕೆ ಋಣ ತೀರಿಸುವುದು ಎನ್ನುತ್ತೀರಿ. ಅವರು ಋಣ ತೀರಿಸಲು ಕೇಳಿದ್ದರೆ ಎಂಬ ಪತ್ರಕರ್ತರ ಪ್ರಶ್ನೆಗೆ, ಅವರು ಕೇಳಿಲ್ಲ. ಆದರೂ ನಾವು ಋಣ ತೀರಿಸುತ್ತೇವೆ. ಆದರೆ ವಯೋವೃದ್ಧರಿಗೆ ಪೆನ್ಶನ್‌ ನೀಡಬೇಕು ಎಂದು ಜಿ.ವಿ. ನಾಯ್ಕ ಹೇಳಿದರು.

28(ಎ) ಅಡಿ ಭೂಮಿ ಪರಿಹಾರ ಪ್ರಕರಣಗಳನ್ನು ಬಗೆ ಹರಿಸಲು ಜಿಲ್ಲಾಧಿಕಾರಿಗಳಾಗಿದ್ದ ಉಜ್ವಲ್ಕುಮಾರ್‌ ಘೋಷ್‌, ಎಸ್‌.ಎಸ್‌. ನಕುಲ್ ಕಾರಣ. ಅವರಿಗೆ ನಾವು ಸದಾ ಋಣಿಯಾಗಿರುತ್ತೇವೆ ಎಂದು ನಾಯ್ಕ ಹೇಳಿದರು. ನಾವು ಬಿಜೆಪಿ ಪಕ್ಷದವರಲ್ಲ. ಆದರೂ ಪರಿಹಾರ ಹಣ ಕೊಡಿಸಿದವರಿಗೆ ಋಣಿಯಾಗಿದ್ದೇವೆ. ಅವರನ್ನು ಚುನಾವಣೆಯಲ್ಲಿ ಬೆಂಬಲಿಸುತ್ತೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸತೀಶ್‌ ಸೈಲ್ ಕಣದಲ್ಲಿ ಇದ್ದರೆ, ಆಗ ನಮ್ಮ ನಿಲುವು ಏನೆಂದು ಆ ಸಂದರ್ಭದಲ್ಲೇ ಹೇಳುತ್ತೇವೆ ಎಂದರು. ಅಮದಳ್ಳಿಯ ಸುಭಾಷ್‌ ಎಸ್‌.ನಾಯ್ಕ ಮಾತನಾಡಿ ನಿರಾಶ್ರಿತರಿಗೆ ಪರಿಹಾರ ಕೊಡಿಸಿದವರನ್ನು ಮರೆಯಲಾಗದು. ಹಾಗೆ ಸತೀಶ್‌ ಸೈಲ್ ಅವರನ್ನು ಮರೆಯುವುದಿಲ್ಲ ಎಂದರು. ಸದ್ಯದ ಚುನಾವಣೆಯಲ್ಲಿ ಅಸ್ನೋಟಿಕರ್‌ಗೆ ಬೆಂಬಲಿಸುವುದಿಲ್ಲ. ಅವರು ನಿರಾಶ್ರಿತರ ಸಮಸ್ಯೆ ನಿವಾರಣೆ ನಮಗೆ ನಿಲುಕದ್ದು ಎಂದಿದ್ದರು. ಹಾಗಾಗಿ ಕೋರ್ಟ್‌ ನಿರ್ದೇಶನದ ಮೇರೆಗೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ಅಂತೂ ಪರಿಹಾರ ನಿರಾಶ್ರಿತರಿಗೆ ಸಿಕ್ಕಿತಲ್ಲ. ಅದೇ ಸಮಾಧಾನ, ಹಾಗಾಗಿ ನಾವು ಋಣ ತೀರಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next