ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ ಎಂಬ ಹೆಸರಿನಲ್ಲಿ ಕೇಂದ್ರ ಸರಕಾರ ರೈತರಿಗಾಗಿ ಪ್ರಾರಂಭಿಸಿರುವ ಪಿಂಚಣಿ ಯೋಜನೆ ಇಳಿಗಾಲದಲ್ಲಿ ರೈತರಿಗೆ ಆರ್ಥಿಕ ಭದ್ರತೆ ನೀಡುವ ಒಂದು ಉತ್ತಮ ಉಪಕ್ರಮ. ಜಾರ್ಖಂಡ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಪಿಂಚಣಿ ವ್ಯಾಪ್ತಿಗೆ ರೈತರನ್ನು ಒಳಪಡಿಸುವ ಮೂಲಕ ಕೃಷಿಯೂ ಒಂದು ಅಸಂಘಟಿತ ವೃತ್ತಿ ಎಂದು ಪರಿಗಣಿಸಿದಂತಾಗಿದೆ.
ಎರಡು ಎಕರೆಗಿಂತ ಕಡಿಮೆ ಕೃಷಿ ಭೂಮಿಯಿರುವ 18ರಿಂದ 40ರ ನಡುವಿನ ವಯೋಮಾನದ ಎಲ್ಲ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗುತ್ತಾರೆ. ಈ ರೈತರು 60 ವರ್ಷ ದಾಟಿದ ಬಳಿಕ ಮಾಸಿಕ 3,000 ರೂ. ಪಿಂಚಣಿ ಪಡೆಯಲಿದ್ದಾರೆ. ಮಾಸಿಕ ಪಿಂಚಣಿ ದೇಣಿಗೆ ಮೊತ್ತವನ್ನು ವಯೋಮಾನಕ್ಕನುಗುಣವಾಗಿ 55ರಿಂದ 200 ರೂ. ತನಕ ನಿಗದಿಪಡಿಸಲಾಗಿದ್ದು, ರೈತರು ಪಾವತಿಸುವಷ್ಟೇ ಮೊತ್ತವನ್ನು ಸರಕಾರವೂ ಪಾವತಿಸಲಿದೆ. ಉಳಿದ ನಿಯಮಗಳೆಲ್ಲ ಬಹುತೇಕ ಉಳಿದ ನೌಕರರ ಪಿಂಚಣಿ ಯೋಜನೆಯಂತೆಯೇ ಇದೆ. ಮೂರು ತಿಂಗಳಿಗೊಮ್ಮೆ, ನಾಲ್ಕು ತಿಂಗಳಿಗೊಮ್ಮೆ ಮತ್ತು ಆರು ತಿಂಗಳಿಗೊಮ್ಮೆ ದೇಣಿಗೆ ಪಾವತಿಸುವ ವಿಶೇಷ ಸೌಲಭ್ಯವನ್ನು ರೈತರಿಗೆ ನೀಡಲಾಗಿದೆ. ಜತೆಗೆ ಪ್ರಧಾನಮಂತ್ರಿ ಕಿಸಾನ್ ಸ್ಕೀಮ್‌ನ ಫಲಾನುಭವಿಗಳಿಗೆ ಈ ಯೋಜನೆಯ ಮೊತ್ತವನ್ನು ಪಿಂಚಣಿ ದೇಣಿಗೆಯಾಗಿ ವರ್ಗಾಯಿಸುವ ಸೌಲಭ್ಯವೂ ಇದೆ. ಜೀವ ವಿಮಾ ನಿಗಮ ರೈತರ ಪಿಂಚಣಿ ಯೋಜನೆಯನ್ನು ನಿಭಾಯಿಸಲಿದೆ.
ಹಿಂದಿನ ಅವಧಿಯಲ್ಲಿ ಸರಕಾರ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆ ಹೆಸರಿನಲ್ಲಿ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6,000 ರೂ. ನೀಡುವ ಸ್ಕೀಂ ಪ್ರಾರಂಭಿಸಿದೆ. ಮೊತ್ತ ಚಿಕ್ಕದೇ ಆಗಿದ್ದರೂ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಇದು ಆಸರೆಯಾಗುತ್ತದೆ ಎನ್ನಲಾಗಿತ್ತು. ಸಾಕಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದೀಗ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರ ತನ್ನ ರೈತ ಸ್ನೇಹಿ ಇಮೇಜನ್ನು ವೃದ್ಧಿಸಿಕೊಳ್ಳುವಲ್ಲಿ ಇನ್ನೊಂದು ಹೆಜ್ಜೆಯಿಟ್ಟಿದೆ.
2022ಕ್ಕಾಗುವಾಗ ರೈತರ ಆದಾಯವನ್ನು ಇಮ್ಮಡಿಗೊಳಿಸುವ ವಾಗ್ಧಾನವನ್ನು ಸರಕಾರ ನೀಡಿದೆ. ಹೊಸ ಸ್ಕೀಂಗಳನ್ನು ಈ ವಾಗ್ಧಾನವನ್ನು ಈಡೇರಿಸುವ ಉಪಕ್ರಮಗಳು ಎಂದು ಭಾವಿಸಬಹುದು. ಸಾಮಾನ್ಯವಾಗಿ ರೈತಾಪಿ ಸಮುದಾಯಕ್ಕೆ ನಿವೃತ್ತಿ ಎಂಬುದಿಲ್ಲ. ಅವರು ಸಾಯುವ ತನಕವೂ ಕೃಷಿ ಕಾರ್ಯ ಮಾಡುತ್ತಲೇ ಇರುತ್ತಾರೆ. ಆದರೆ 60 ವರ್ಷಕ್ಕೆ ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಸರಕಾರ ರೈತರಿಗೂ ಒಂದು ನಿವೃತ್ತಿ ವಯಸ್ಸನ್ನು ನಿಗದಿಪಡಿಸಿದಂತಾಗಿದೆ.
ಆದರೆ ವರ್ಷಕ್ಕೆ 3,000 ರೂ. ಸಾಕೇ ಎನ್ನುವುದು ಇಲ್ಲಿರುವ ಮೂಲ ಪ್ರಶ್ನೆ. ಈಗ ನಿಗದಿಯಾಗಿರುವ ಗರಿಷ್ಠ ವಯೋಮಿತಿ 40 ವರ್ಷ ಪ್ರಾಯದ ಒಬ್ಬ ರೈತ ಈ ಪಿಂಚಣಿ ಯೋಜನೆಗೆ ಸೇರಿದರೆ ಅವನು ಫಲಾನುಭವಿಯಾಗಲು ಇನ್ನು 20 ವರ್ಷ ಕಾಯಬೇಕು. 20 ವರ್ಷದ ಬಳಿಕ ರೂಪಾಯಿ ಮೌಲ್ಯ ಇಷ್ಟೇ ಇರುತ್ತದೆಯೇ? ಆಗ 3,000 ರೂ. ಎನ್ನುವುದು ತೀರಾ ಜುಜುಬಿ ಮೊತ್ತದಂತೆ ಕಂಡುಬರಬಹುದು. ಹಾಗೆಂದು ಹೀಗೆ ಚಿಕ್ಕ ಮೊತ್ತದ ಪಿಂಚಣಿ ನೀಡುವುದು ಹೊಸದೇನೂ ಅಲ್ಲ. ತಿಂಗಳಿಗೆ 20-30 ರೂ. ಪಿಂಚಣಿ ನೀಡುತ್ತಿದ್ದ ಹಾಸ್ಯಾಸ್ಪದ ವ್ಯವಸ್ಥೆ ನಮ್ಮಲ್ಲಿತ್ತು. ಕನಿಷ್ಠ ಪಿಂಚಣಿ ಮೊತ್ತ 1,000 ರೂ.ಗೇರಿಸಿದ್ದು ಎನ್‌ಡಿಎ ಸರಕಾರವೇ.
ನೇರವಾಗಿ ನಗದು ನೆರವು ನೀಡುವುದು, ಪಿಂಚಣಿ ಸೌಲಭ್ಯ ಒದಗಿಸಿರುವುದೆಲ್ಲ ಉತ್ತಮ ಯೋಜನೆಗಳೇ ಆಗಿದ್ದರೂ ಕೃಷಿ ಕ್ಷೇತ್ರ ಎದುರಿಸುವ ಶಾಶ್ವತ ಸಮಸ್ಯೆಗಳಿಗೆ ಇದು ಪರಿಹಾರವಲ್ಲ. ಬರೀ ಇಂಥ ಕ್ರಮಗಳಿಂದ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಸಾಧ್ಯವಿಲ್ಲ. ಇದು ಸಾಲಮನ್ನಾದಂಥ ಒಂದು ತಾತ್ಕಾಲಿಕ ಉಪಶಮನ ಮಾತ್ರ. ಕೃಷಿ ಕ್ಷೇತ್ರದಲ್ಲಾಗುವ ಸಮಗ್ರ ಬದಲಾವಣೆಯೇ ರೈತರ ಸಮಸ್ಯೆಗಳಿಗಿರುವ ಶಾಶ್ವತ ಪರಿಹಾರ. ಈ ನಿಟ್ಟಿನಲ್ಲಿ ಇನ್ನಾದರೂ ಆಳುವವರು ಚಿಂತಿಸಬೇಕಾದ ಅಗತ್ಯವಿದೆ.